ಹಾವೇರಿ: ದಾವಣಗೆರೆ ಉಪಚುನಾವಣೆ ನಂತರ ಅನಗತ್ಯವಾಗಿ ಮುಸ್ಲಿಂ ನಾಯಕರನ್ನು ಟಾರ್ಗೆಟ್ ಮಾಡಲಾಗಿದೆ. ಅಬ್ದುಲ್ ಜಬ್ಬಾರ್ ಹಾಗೂ ನಾಸೀರ್ ಅಹಮ್ಮದ್ ವಿರುದ್ಧ ಕೈಗೊಳ್ಳಲಾದ ಕ್ರಮವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸ್ಸಿಗೆ ಸಮಾಜ ತಕ್ಕಪಾಠ ಕಲಿಸಲಿದೆ ಎಂದು ಮೌಲ್ವಿಗಳು, ಮುಸ್ಲಿಂ ಸಮಾಜದ ಪ್ರಗತಿಪರ ಚಿಂತಕರ ವೇದಿಕೆ ಮುಖಂಡರು ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹಲವು ಮೌಲ್ವಿಗಳು, ಮುಖಂಡರು ಮಾತನಾಡಿ, ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದರು.ಮುಸ್ಲಿಂ ಸಮಾಜದ ಪ್ರಗತಿಪರ ಚಿಂತಕರ ವೇದಿಕೆ ಮುಖಂಡ ಹಾಗೂ ವಕೀಲ ಜಿ.ಎ. ಸವಣೂರು ಮಾತನಾಡಿ, ಮುಸ್ಲಿಂ ಸಮಾಜದ ಪ್ರಶ್ನಾತೀತ ನಾಯಕ ಜಮೀರ್ ಅಹಮ್ಮದ್ ಹಾಗೂ ಮತ್ತಿತರರ ಬೆಳವಣಿಗೆಯನ್ನು ಸಹಿಸಲಾಗದೆ ಟಾರ್ಗೆಟ್ ಮಾಡಿ ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಜಮೀರ್ ಅಹಮ್ಮದ್ ಅವರು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದು, ಅವರು ತಮ್ಮನ್ನು ತಾವು ನಾಯಕ ಎಂದು ಹೇಳಿಕೊಳ್ಳದಿದ್ದರೂ ಜನತೆ ಅವರನ್ನು `ಸುಪ್ರಿಂ ಲೀಡರ್'''''''' ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕೆಲವರು ಪಿತೂರಿ ನಡೆಸಿ ಅವರ ಹೆಸರನ್ನು ಕೆಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.ಇದಲ್ಲದೆ, ಪಕ್ಷ ವಿರೋಧಿ ಚಟುವಟಿಕೆಯ ಸುಳ್ಳು ಆರೋಪಿಸಿ ಅಬ್ದುಲ್ ಜಬ್ಬಾರ್ ಹಾಗೂ ನಾಸೀರ್ ಅಹಮ್ಮದ್ ವಿರುದ್ಧ ಕೈಗೊಳ್ಳಲಾದ ಕ್ರಮವನ್ನು ಕೂಡ ತೀವ್ರವಾಗಿ ವಿರೋಧಿಸುತ್ತೇವೆ. ದಾವಣಗೆರೆ ಉಪ ಚುನಾವಣೆಯಲ್ಲಿ ಈ ಮುಖಂಡರು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸುಳ್ಳು ಆರೋಪ ಮಾಡಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ತಕ್ಷಣವೇ ನಿರ್ಣಯವನ್ನು ಹಿಂಪಡೆಯಬೇಕು. ಪಕ್ಷವು ಈ ನಿರ್ಧಾರವನ್ನು ಹಿಂಪಡೆಯದಿದ್ದರೆ, ಪ್ರಗತಿಪರ ಮುಸ್ಲಿಂ ಸಮಾಜದ ಮೌಲ್ವಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.ತಡಸದ ಮೊಹಮ್ಮದ್ ಅಬ್ದುಲ್‌ರಜಾಕ ಖಾದ್ರಿ ಮಾತನಾಡಿ, ಕಾಂಗ್ರೆಸ್ ಜಾತ್ಯತೀತ ಪಕ್ಷ, ಅಲ್ಪ ಸಂಖ್ಯಾತರಿಗೆ ಬೆಲೆ ಕೊಡುತ್ತಿದೆ ಎಂದು ನಾವು ಬೆಂಬಲಿಸುತ್ತೇವೆ. ಆದರೆ ಕಳೆದ 2-3 ತಿಂಗಳಿಂದ ಮುಸ್ಲಿಂ ಮುಖಂಡರಿಗೆ ಪಕ್ಷದಲ್ಲಿ ತೊಂದರೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಶೇ.90ರಷ್ಟು ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ. ಕರ್ನಾಟಕದಲ್ಲಿ ಶೇ. 13ರಷ್ಟು ಮುಸ್ಲಿಂ ಮತದಾರರಿದ್ದಾರೆ. ಆದರೆ ಅಷ್ಟೇ ಪ್ರಮಾಣದಲ್ಲಿ ಮುಸ್ಲಿಂ ಮುಖಂಡರಿಗೆ ಪ್ರಾತಿನಿಧ್ಯ ನೀಡುತ್ತಿಲ್ಲ. ಇದನ್ನೆಲ್ಲ ನಾವು ಪ್ರಶ್ನೆ ಮಾಡದೆ ಔದಾರ್ಯತೆ ಮೆರೆದಿದ್ದೇವೆ. ಆದರೆ, ಈಗಿನ ಯುವಕರು ಎಚ್ಚೆತ್ತಿದ್ದಾರೆ. ಕೇವಲ ವೋಟಿಗಾಗಿ ಮಾತ್ರ ನಮ್ಮನ್ನು ಬಳಸಿಕೊಳ್ಳುವುದು ಸಾಧ್ಯವಿಲ್ಲ. ಕೇವಲ ಮುಸ್ಲಿಮರ ಮೇಲೆ ಮಾತ್ರ ಯಾಕೆ ಕ್ರಮ ಎಂದು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಪೀರಸಾಬ್ ಚೋಪದಾರ ಮಾತನಾಡಿದರು. ಮೌಲಾನಾ ಮಹ್ಮದ್‌ಸಾಕ್ ನಾರಲವಾಡಿ, ಮೌಲಾನಾ ಸಾಕ್ ಅಹ್ಮದ್ ಮಖಬೂಲ್, ಅಜೀಜ್‌ವುಲ್ಲಾ ಮಕಾನದಾರ, ಮೌಲಾನಾ ಇಫ್ತಿಯಾರ ಖಾಜಿ, ಮೌಲಾನಾ ಅಬ್ದುಲ್‌ರಜಾಕ ಖಾದ್ರಿ ಸೇರಿದಂತೆ ಇತರರು ಇದ್ದರು.ಸಮಾಜದ ಸುಪ್ರೀಂ ಲೀಡರ್ ಜಮೀರ್ ಅಹ್ಮದರನ್ನು ಟಾರ್ಗೆಟ್ ಮಾಡುತ್ತಿರುವುದು ಖಂಡನೀಯ. ನಾಸೀರ್ ಅಹ್ಮದ್ ಹಾಗೂ ಅಬ್ಧುಲ್ ಜಬ್ಬಾರ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ, ಮೊದಲು ನೋಟಿಸ್ ನೀಡಬಹುದಿತ್ತು. ಡಿಸಿಎಂ ಡಿ.ಕೆ. ಶಿವಕುಮಾರ ಮುಸ್ಲಿಂ ನಾಯಕರ ವಿರುದ್ದ ಕ್ರಮಕೈಗೊಂಡು ಎಡವಿದ್ದಾರೆ. ಈ ಕೂಡಲೇ ನಾಸೀರ್ ಅಹ್ಮದ ಹಾಗೂ ಜಬ್ಬಾರ ವಿರುದ್ಧ ಕೈಗೊಂಡ ಕ್ರಮವನ್ನು ಪುನರ್ ಪರಿಶೀಲಿಸಬೇಕು. ಪುನಃ ಅವರಿಗೆ ನೀಡಲಾದ ಸ್ಥಾನದಲ್ಲಿ ಮುಂದುವರೆಸಬೇಕು ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಇಮಾಮ್‌ಸಾಬ ಜಮಾದಾರ ಹೇಳಿದರು.