ಯಾರೂ ಮುಂದೆ ಬಾರದಿದ್ದರೇ ನಾನೇ ಖುದ್ದು ಸಕ್ಕರೆ ಕಾರ್ಖಾನೆ ಸ್ಥಾಪಿಸುವೆ: ಗವಿಯಪ್ಪ

| Published : May 07 2025, 12:52 AM IST

ಯಾರೂ ಮುಂದೆ ಬಾರದಿದ್ದರೇ ನಾನೇ ಖುದ್ದು ಸಕ್ಕರೆ ಕಾರ್ಖಾನೆ ಸ್ಥಾಪಿಸುವೆ: ಗವಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಂಬಂಧಿಸಿದಂತೆ ಯಾರೂ ಮುಂದೆ ಬಾರದಿದ್ದರೆ ನಾನೇ ಸ್ಥಾಪನೆ ಮಾಡುವೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಂಬಂಧಿಸಿದಂತೆ ಯಾರೂ ಮುಂದೆ ಬಾರದಿದ್ದರೆ ನಾನೇ ಸ್ಥಾಪನೆ ಮಾಡುವೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಭರವಸೆ ನೀಡಿದರು.

ಕೃಷಿ ಇಲಾಖೆಯಿಂದ ನಗರದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದ ಬಳಿ ಕೃಷಿ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಂಗಳವಾರ ಮಾತನಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊಸಪೇಟೆ ಮೇಲೆ ಕಾಳಜಿ ಇದೆ. ಸಕ್ಕರೆ ಕಾರ್ಖಾನೆ ಆರಂಭಿಸಲು ನನಗೆ ಹೇಳುತ್ತಿದ್ದಾರೆ. ಅವರ ತಪ್ಪಿಲ್ಲ. ನಾನು, ನನ್ನ ಆರ್ಥಿಕ ಪರಿಸ್ಥಿತಿ ನೋಡಿಕೊಳ್ಳಬೇಕು. ₹150 ಕೋಟಿ ಬೇಕಾಗುತ್ತೆ. ಚುನಾವಣೆ ಮಾಡಿದ್ದೇನೆ. ನನ್ನ ಪರಿಸ್ಥಿತಿ ನೋಡಿಕೊಂಡು ತೀರ್ಮಾನಿಸಬೇಕು. ಯಾರೂ ಬಾರದಿದ್ದರೆ ಮೇ 20ರಂದು ಸಿಎಂ ಅವರ ಅನುಮತಿ ಪಡೆದು ನಾನೇ ಆರಂಭಿಸುವ ಕಾರ್ಯ ಶುರು ಮಾಡುತ್ತೇನೆ ಎಂದರು.

ಭೂತಾಯಿ ನಂಬಿರುವ ರೈತರಿಗೆ ಯಾವಾಗಲೂ ಕಷ್ಟವೇ. ಒಂದು ವರ್ಷ ನಷ್ಟ, ಲಾಭ ಬರುತ್ತದೆ. ಈ ಹಿಂದೆ ಸಕ್ಕರೆ ಕಾರ್ಖಾನೆ ಇದ್ದಾಗ ಈ ಸಮಸ್ಯೆ ಇರಲಿಲ್ಲ. ಈಗ ಬಂದಿದೆ. ಎತ್ತಿನ ಬಂಡಿಯಿಂದ ಉಳಿತಾಯವಾಗುತ್ತಿತ್ತು. ಈಗ ನನಗೂ ಸಮಯ ಸಿಗುತ್ತಿಲ್ಲ. ಇದರ ಬಗ್ಗೆ ಸಂಪೂರ್ಣ ಆಸಕ್ತಿ ವಹಿಸಲು ಆಗಿಲ್ಲ. ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಅಧಿಕಾರಿಗಳನ್ನು ಕರೆದು ಸಭೆ ಮಾಡುವೆ ಎಂದರು.

ಸಕ್ಕರೆ ಕಾರ್ಖಾನೆ ಬಗ್ಗೆ ಪ್ರಯತ್ನ ಮಾಡುತ್ತಿದ್ದೇನೆ. ಮಾಡೇ ಮಾಡ್ತಿನಿ. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರೊಂದಿಗೂ ಚರ್ಚೆ ಮಾಡಿದ್ದೇನೆ. ಸಿಎಂ ಬಂದಾಗ ಅವರ ಬಾಯಿಯಿಂದಲೇ ಒಳ್ಳೆ ಸುದ್ದಿ ಕೊಡಿಸುತ್ತೇನೆ ಎಂದರು.

ಇದೇ ವೇಳೆ ಕೃಷಿ ಇಲಾಖೆಯ ತಾಂತ್ರಿಕ ಮಾಹಿತಿಯುಳ್ಳ ಕರಪತ್ರ ಬಿಡುಗಡೆಗೊಳಿಸಲಾಯಿತು. ರೂಪಾ ಎಂ., ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಜತೆಗೆ ಸಾಧಕ ರೈತ ಮಹಿಳೆಯರಾದ ನಾಗಮ್ಮ ಎಂ. ಹಾಗೂ ಆರ್.ನಾಗಮ್ಮ ಅವರನ್ನು ಸನ್ಮಾನಿಸಲಾಯಿತು.

ಬಳಿಕ ಮಣ್ಣು ಆರೋಗ್ಯ ಕಾರ್ಡ್ ಗಳನ್ನು ವಿತರಿಸಲಾಯಿತು.

ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಅಧ್ಯಕ್ಷತೆ ವಹಿಸಿದ್ದರು.

ವಿಜ್ಞಾನಿಗಳಾದ ಮಂಜುನಾಥ, ಬದ್ರಿ ಪ್ರಸಾದ್, ಉಪನಿರ್ದೇಶಕ ನಯೀಮ್ ಪಾಷಾ, ಕೃಷಿ ಸಹಾಯಕ ನಿರ್ದೇಶಕ ಮನೋಹರಗೌಡ, ಕೃಷಿ ಅಧಿಕಾರಿಗಳಾದ ವೆಂಕಟೇಶ್ ಎಲ್., ಪರಮೇಶ್ವರ ನಾಯ್ಕ, ಶರತ್ ಕುಮಾರ್, ರೈತ ಮುಖಂಡರು ಇದ್ದರು.