ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ಪ್ರಧಾನಿ ಮೋದಿ ಮೊದಲು ಅಭಿವೃದ್ಧಿಯೆಂದರು, ಎರಡನೇ ಬಾರಿ ಚೌಕಿದಾರ್ ಎಂದರು. ಈಗ ಮೂರನೇ ಬಾರಿಗೆ ಸ್ವತಃ ದೇವಮಾನವ, ದೇವಧೂತನೆಂದು ತಮ್ಮನ್ನು ತಾವೇ ಕರೆದುಕೊಳ್ಳುವ ಮೂಲಕ ಜನರ ದಿಕ್ಕು ತಪ್ಪಿಸಿ ಮತ ಕೇಳುತ್ತಿದ್ದಾರೆ. ಮೋದಿ ದೇವಮಾನವರಾದರೆ ಅವರ ತಾಯಿ ಯಾರು? ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಟೀಕಿಸಿದ್ದಾರೆ.ಪಟ್ಟಣದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಓರ್ವ ಪ್ರಧಾನಿಯಾಗಿ ಮೋದಿಯವರು ಈ ದೇಶಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ. ಎ ಸಿನಿಮಾದಲ್ಲಿ ಉಪೇಂದ್ರ ಹೇಳಿದಂತೆ ಪ್ರಧಾನಿ ಮೋದಿ ನಡೆದುಕೊಳ್ಳುತ್ತಿದ್ದಾರೆ. ಐಮ್ ಗಾಡ್, ಗಾಡ್ ಇಸ್ ಗ್ರೇಟ್ ಎಂದು ಉಪೇಂದ್ರ ಹೇಳಿದಂತೆ ಮೋದಿಯವರು ಹೇಳ್ತಾರೆ. ನಾನು ದೇವರ ಸೃಷ್ಟಿ ಅಂತಾ ಹೇಳಿದ್ದಾರೆ. ಇದಕ್ಕೆ ಯಾಕೆ ಬಿಜೆಪಿಯರು ಉತ್ತರ ಕೊಡ್ತಾ ಇಲ್ಲ? ಮೋದಿಯವರ ಬಗ್ಗೆ ಮಾತಾನಾಡಿದರೆ ಗಾಡ್ ಏನು ಶಾಪ ಕೊಡ್ತಾನಾ? ಯಾಕೆ ಈ ಕುರಿತು ಸಿ.ಟಿ. ರವಿ, ಜನಾರ್ದನ ರೆಡ್ಡಿ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ ತಂಗಡಗಿ, ಕುಂತಿ ಮಂತ್ರ ಪಠಿಸಿದರೆ ಕಿವಿಯಲ್ಲಿ ಕರ್ಣ ಜನಿಸಿದಂತೆ, ಮೋದಿಯವರು ಜನಿಸಿದ್ರಾ? ನಾವು ದ್ವಾಪರ ಯುಗದಲ್ಲಿ ಜೀವಿಸುತ್ತಿದ್ದೇವಾ. ವೈಜ್ಞಾನಿಕವಾಗಿ ನಾವೆಲ್ಲ ಹೇಗೆ ಜನಿಸಿದ್ದೇವೆ ಎನ್ನುವುದು ಜನತೆಗೆ ಗೊತ್ತಿದೆ. ಮತ್ತೊಮ್ಮೆ ಅವರಿಗೆ ಅಧಿಕಾರ ಕೊಟ್ಟರೆ ಈ ದೇಶ ಹಿಂದೆ ಹೋಗುವುದು ಗ್ಯಾರಂಟಿ ಎಂದರು.ಸಚಿವ ಬಿ.ನಾಗೇಂದ್ರ ಅಕ್ರಮದಲ್ಲಿ ಭಾಗಿಯಾಗಿರಲು ಸಾಧ್ಯವಿಲ್ಲ. ಸತ್ಯಾಸತ್ಯತೆ ಅರಿಯಲು ಸರ್ಕಾರ ಈಗಾಗಲೇ ಎಸ್‌ಐಟಿ ರಚಿಸಿದ್ದು ತನಿಖೆ ನಡೆಯುತ್ತಿದೆ. ಸಿಎಂ, ಡಿಸಿಎಂ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲವೆಂದು ಈಗಾಗಲೇ ಹೇಳಿದ್ದಾರೆ. ಆದರೂ, ಬಿಜೆಪಿಯವರೂ ತನಿಖೆಗೂ ಮುನ್ನ ರಾಜಿನಾಮೆ ಕೇಳುವುದು ತಪ್ಪು. ಕೆ.ಎಸ್. ಈಶ್ವರಪ್ಪನವರ ಪ್ರಕರಣ ಬೇರೆಯಾಗಿತ್ತು. ಅಲ್ಲಿ ತನಿಖೆ ಬಳಿಕ ರಾಜಿನಾಮೆ ಪಡೆಯಲಾಯಿತು. ಎಲ್ಲ ಸಚಿವರು ಉತ್ತಮ ಕೆಲಸ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯನವರು ಸಚಿವರನ್ನು ಫ್ರೀ ಆಗಿ ಬಿಟ್ಟಿದ್ದಾರೆ, ಹಾಗಾಗಿ ಇದಕ್ಕೆ ಸಿಎಂ ಹೊಣೆಗಾರರಲ್ಲ ಎಂದರು.
ಈ ಹಿಂದೆ ಎಕ್ಸಿಟ್ ಪೋಲ್ ಸುಳ್ಳಾಗಿದ್ದ ಉದಾಹರಣೆ ಇದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಸುಳ್ಳಾಗಿದೆ. ೨೦೦೪ರಲ್ಲಿ ಹೇಳಿದ ಎಕ್ಸಿಟ್ ಪೋಲು ಕೂಡ ಸುಳ್ಳಾಗಿತ್ತು. ಇದು ಪ್ರಧಾನಿ ಮೋದಿಯವರ ಹಿತಾಸಕ್ತಿ ಕಾಪಾಡುವ ಎಕ್ಸಿಟ್ ಪೋಲ್ ಆಗಿವೆ. ಈ ಬಾರಿ ಮೋದಿಯವರ ಗಾಳಿ, ಬರೀ ಟಿವಿಯಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಬೀಸುತ್ತಿದೆ. ನೂರಕ್ಕೆ ನೂರರಷ್ಟು ನಾವು ೨೯೫ ಸೀಟ್ ಕ್ರಾಸ್ ಮಾಡುತ್ತೇವೆ. ಜನರ ನಾಡಿಮಿಡಿತವೇ ನಮ್ಮ ಎಕ್ಸಿಟ್ ಪೋಲ್. ನಾವು ಜನರ ಮಧ್ಯೆ ಇದ್ದು ಚುನಾವಣೆ ಮಾಡಿದ್ದೇವೆ ಎಂದು ತಂಗಡಗಿ ಹೇಳಿದರು.ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್ ಮತ್ತು ಲೋಕಸಭಾ ಚುನಾವಣೆಯಲ್ಲಿ ರಾಜಶೇಖರ ಹಿಟ್ನಾಳ್ ಗೆಲುವು ನಿಶ್ಚಿತ ಎಂದರು. ಪದವೀಧರರಿಗೆ ಕಾಂಗ್ರೆಸ್ ಮೇಲೆ ಭರವಸೆಯಿದೆ ಎಂದರು