ಸಾರಾಂಶ
ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ತು ಚುನಾವಣೆಯಲ್ಲಿ ಶೇ.91 ರಷ್ಟು ಮತದಾನ ಶಾಂತಿಯುತವಾಗಿ ನಡೆದಿದೆ.
ಕೊಳ್ಳೇಗಾಲ: ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ತು ಚುನಾವಣೆಯಲ್ಲಿ ಶೇ.91 ರಷ್ಟು ಮತದಾನ ಶಾಂತಿಯುತವಾಗಿ ನಡೆದಿದೆ. ತಾಲೂಕು ಕಚೇರಿಯಲ್ಲಿ ತೆರೆಯಲಾಗಿದ್ದ ಮತಗಟ್ಟೆ ಸಂಖ್ಯೆ 4ರಲ್ಲಿ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ನಡೆದ ಮತದಾನದಲ್ಲಿ 724 ಮತಗಳ ಪೈಕಿ 659 ಮತದಾರರು ಮತ ಚಲಾಯಿಸಿದ್ದಾರೆ. ಮತದಾನ ಆರಂಭವಾದ ಹೊತ್ತಿನಲ್ಲೇ ಮತದಾರರು ಮತಗಟ್ಟೆಗೆ ಬಿರುಸಿನಿಂದ ಆಗಮಿಸಿ ಮತ ಚಲಾಯಿಸಿದರು. ಮಧ್ಯಾಹ್ನದ ವೇಳೆ ಸ್ವಲ್ಪ ಮಟ್ಟಿಗೆ ಮತದಾರ ಸಂಖ್ಯೆ ಕಡಿಮೆಯಾಗತ್ತು. ಕೊನೆಯ ಕ್ಷಣವಾದ 3 ಗಂಟೆ ಬಳಿಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು.
ಮತಗಟ್ಟೆ ಅಧಿಕಾರಿ ಮಹದೇವನಾಯಕ, ಸಹಾಯಕ ಅಧಿಕಾರಿ ಇಂದು ಕುಮಾರ್ ಹಾಗೂ ಸಿಬ್ಬಂದಿ ಇದ್ದರು. ಮತದಾನ ಮುಕ್ತಾಯ ಬಳಿಕ ಮತಗಟ್ಟೆಯನ್ನು ಚಾ.ನಗರ ಜಿಲ್ಲಾಧಿಕಾರಿಗಳ ಕಚೇರಿಗೆ ಪೊಲೀಸ್ ಭದ್ರತೆಯಲ್ಲಿ ರವಾನಿಸಲಾಯಿತು. ಮತಗಟ್ಟೆಯಿಂದ ನೂರು ಮೀಟರ್ ಹೊರಗಡೆಯ ಮುಖ್ಯರಸ್ತೆ ಬದಿಯಲ್ಲಿ ಕಾಂಗ್ರೆಸ್, ಎನ್.ಡಿ.ಎ, ಬಿಎಸ್ಪಿ ಹಾಗೂ ಇತರೆ ಪಕ್ಷೇತರ ಅಭ್ಯರ್ಥಿಗಳ ಪರ ಕಾರ್ಯಕರ್ತರು ಹಾಗೂ ಮುಖಂಡರು ಮತಗಟ್ಟೆ ಬರುವ ಮತದಾರರನ್ನು ತಮ್ಮ ಅಭ್ಯರ್ಥಿ ಪರ ಮತಚಲಾಯಿಸುವಂತೆ ಮನವಿ ಮಾಡುತ್ತಿದ್ದರು. ಶಾಸಕ ಎ.ಆರ್.ಕೃಷ್ಣಮೂರ್ತಿ, ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎಸ್.ಜಯಣ್ಣ, ಕಾಡಾ ನಿಗಮ ಅಧ್ಯಕ್ಣ ಮರಿಸ್ವಾಮಿ, ಬ್ಲಾಕ್ ಅಧ್ಯಕ್ಷ ತೋಟೇಶ್ ಹಾಗೂ ಕಾಂಗ್ರೇಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಮತಗಟ್ಟೆ ಬರುವ ಮತದಾರರ ಬಳಿ ಮನವಿ ಮಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜು, ನಗರ ಮಂಡಲ ಬಿಜೆಪಿ ಅಧ್ಯಕ್ಷ ಎನ್.ವಿ.ಪರಮೇಶ್ವರಯ್ಯ ತಮ್ಮ ಅಭ್ಯರ್ಥಿ ಪರ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು.