ಡೇರಿಗೆ ಕಳಪೆ ಗುಣಮಟ್ಟದ ಹಾಲು ಪೂರೈಸಿದರೆ ಕ್ರಮ: ಅರ್ಚನಾ ಎಚ್ಚರಿಕೆ

| Published : Sep 03 2024, 01:32 AM IST

ಸಾರಾಂಶ

ವೈಯಕ್ತಿಕ ಹಿತಾಸಕ್ತಿಗಾಗಿ ಕೆಲವರು ಕಳಪೆ ಗುಣಮಟ್ಟದ ಹಾಲು ಹಾಕುತ್ತಾರೆ. ಸಿಬ್ಬಂದಿಗೆ ಬೆದರಿಕೆಯೊಡ್ಡುತ್ತಾರೆ. ಇಂತಹ ಕ್ರಮಗಳಿಂದ ಸಂಘದ ಅಭಿವೃದ್ಧಿ ಕುಂಠಿತವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಡೇರಿಯಲ್ಲಿ ಕಳಪೆ ಗುಣಮಟ್ಟದ ಹಾಲು ಪೂರೈಕೆ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮನ್ಮುಲ್ ವಿಸ್ತರಣಾಧಿಕಾರಿ ಎಸ್.ಎನ್.ಅರ್ಚನಾ ಎಚ್ಚರಿಕೆ ನೀಡಿದರು.

ತಾಲೂಕಿನ ಲಾಳನಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 13ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ವೈಯಕ್ತಿಕ ಹಿತಾಸಕ್ತಿಗಾಗಿ ಕೆಲವರು ಕಳಪೆ ಗುಣಮಟ್ಟದ ಹಾಲು ಹಾಕುತ್ತಾರೆ. ಸಿಬ್ಬಂದಿಗೆ ಬೆದರಿಕೆಯೊಡ್ಡುತ್ತಾರೆ. ಇಂತಹ ಕ್ರಮಗಳಿಂದ ಸಂಘದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.

ಯಾರೇ ಆಗಲಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಮೇಲೆ ಹಲ್ಲೆ, ಬೆದರಿಕೆಯೊಡ್ಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಗ್ರಾಮದ ಮುಖಂಡ ಬೂದಗುಪ್ಪೆ ಶಿವಮಲ್ಲಪ್ಪ ಮಾತನಾಡಿ, ಸಂಘ-ಸಂಸ್ಥೆಗಳಲ್ಲಿ ಹಲವು ಭಿನ್ನಾಭಿಪ್ರಾಯಗಳು ಸಹಜ. ಎಲ್ಲವನ್ನೂ ಬದಿಗೊತ್ತಿ ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಕೆಲಸ ಮಾಡುವುದು ಅಗತ್ಯ ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು. ಇದರಿಂದ ಸಂಘ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರೂ ಸಹ ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ ಸಂಘದ ಅಧ್ಯಕ್ಷೆ ಲಿಂಗಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಬಿ.ಟಿ.ರೂಪ, ನಿರ್ದೇಶಕರಾದ ಕೆಂಡಗಣ್ಣಮ್ಮ, ಸುನಂದ, ಸರ್ವಮಂಗಳ, ನಂಜಮಣಿ, ಮಹದೇವಮ್ಮ, ಸುಜಾತ, ಸುಧಾ, ಪುಟ್ಟತಾಯಮ್ಮ, ಸಿಇಒ ಗೌರಮಣಿ, ಹಾಲು ಪರೀಕ್ಷಕಿ ನಾಗಮಣಿ ಇತರರು ಭಾಗವಹಿಸಿದ್ದರು. ಇದೇ ವೇಳೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.