ಸಾರಾಂಶ
ಶಿರಾ : ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 10 ತಿಂಗಳಿಂದಲೂ ಕೇವಲ ಗ್ಯಾರಂಟಿಗಳನ್ನು ಜನರಿಗೆ ತೋರಿಸುತ್ತಿದ್ದಾರೆ. ಈ ಯೋಜನೆಗಳಿಗಾಗಿ 1.20 ಲಕ್ಷ ಕೊಟಿ ರು. ಸಾಲ ಮಾಡಿ, ಪ್ರತಿ ಪ್ರಜೆ ಮೇಲೆ 35,000 ಸಾಲ ಹೊರೆಸಿದ್ದಾರೆ. ಇದೊಂದು ದರಿದ್ರ ಸರ್ಕಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಮಹಿಳೆಯರ ಖಾತೆಗೆ 2000 ರು. ನೀಡಿದೆ. ಆದರೆ ಮದ್ಯದ ಬೆಲೆಯನ್ನು ಹೆಚ್ಚಿಸಿದ್ದು, ಅದರ ಜೊತೆಗೆ ಹೆಚ್ಚಿನ ಹಣ ವಸೂಲಿ ಮಾಡುವ ಮೂಲಕ ಪಿಕ್ ಪಾಕೇಟ್ ಸರ್ಕಾರವಾಗಿದೆ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರೈತರ 25 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದೆ. ಆದರೆ ನಾನೆಂದು ಕೇಂದ್ರದ ಮುಂದೆ ಕೈಚಾಚಿಲ್ಲ ಎಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಗೋವಿಂದ ಕಾರಜೋಳ ಅವರಿಗೆ ಹೆಚ್ಚಿನ ಮತ ನೀಡಿ. ಈ ಚುನಾವಣೆ ದೇಶದ ಭದ್ರತೆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವಶ್ಯವಿದೆ. 2004 ರಿಂದ ಹಲವು ಬದಲಾವಣೆ ಆಗಿವೆ. ಯಡಿಯೂರಪ್ಪ ಅವರ ಜೊತೆ ಉತ್ತಮ ಆಡಳಿತ ನೀಡಿದ್ದೇವೆ. ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ಒಪ್ಪಿದ್ದೆ. ಆದರೆ ಕೆಲವರಿಂದ ಅದು ಸಾಧ್ಯವಾಗಲಿಲ್ಲ. ಆಗ ಯಡಿಯೂರಪ್ಪ ಅವರಿಗೆ ಅಂದು ಅಧಿಕಾರ ಹಸ್ತಾಂತರಿಸಿದ್ದರೆ ಕಾಂಗ್ರೆಸ್ ನಿರ್ನಾಮ ಆಗುತ್ತಿತ್ತು ಎಂದು ಹೇಳಿದರು.
ಚಿತ್ರದುರ್ಗ ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದಲ್ಲಿ ಈ ಬಾರಿ 28 ಸ್ಥಾನಗಳನ್ನು ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ನಾನು ಗೆಲುವು ಸಾಧಿಸಿದರೆ ಈ ಭಾಗವನ್ನು ಅಪ್ಪರ್ ಭದ್ರ, ಹೇಮಾವತಿ ಮತ್ತು ಎತ್ತಿನಹೋಳೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ತ್ರಿವೇಣಿ ಸಂಗಮ ಮಾಡುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯ ಸರ್ಕಾರ ರಾಜ್ಯವನ್ನು ಕತ್ತಲೆ ಕಡೆಗೆ ಕೊಂಡೊಯ್ಯುತ್ತಿದೆ. ದೂರದೃಷ್ಟಿ ಇಲ್ಲದೆ ಯೋಜನೆ ಜಾರಿಗೊಳಿಸುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ, ಮತ್ತೊಮ್ಮೆ ಮೋದಿ ಪ್ರಧಾನ ಮಂತ್ರಿಯಾಗಬೇಕೆಂದು ದೇಶಾದ್ಯಂತ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ದೇಶದಲ್ಲಿ ಅಭಿವೃದ್ಧಿ ಕೆಲಸಗಳು ಕುಂಟಿತವಾಗುತ್ತವೆ. ಪ್ರಜೆಗಳನ್ನು ದೇಶದ ಆಸ್ತಿ ಮಾಡುವುದೇ ಮೋದಿಯವರ ಕನಸು ಎಂದರು.
ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ, ದೇಶದಲ್ಲಿ ಎರಡು ದೈತ್ಯಶಕ್ತಿಗಳು ಒಂದಾಗಿವೆ. ಈ ಚುನಾವಣೆ ಧರ್ಮ ಅಧರ್ಮಗಳ ನಡುವೆ ನಡೆಯುತ್ತಿರುವ ಯುದ್ಧ. ಇದರಲ್ಲಿ ಧರ್ಮಕ್ಕೆ ಜಯವಾಗಬೇಕು. ದೇಶದ ಅಭಿವೃದ್ಧಿಗೆ ಗೋವಿಂದ ಕಾರಜೋಳ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್.ಉಗ್ರೇಶ್ ಮಾತನಾಡಿದರು. ವಿ.ಪ. ಸದಸ್ಯರಾದ ತಿಪ್ಪೇಸ್ವಾಮಿ, ನವೀನ್, ಬಿಜೆಪಿ ಮಧುಗಿರಿ ವಿಭಾಗದ ಅಧ್ಯಕ್ಷ ಹನುಮಂತೇ ಗೌಡ, ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ, ಬಿಜೆಪಿ ಗ್ರಾಮಂತರ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ನಗರ ಅಧ್ಯಕ್ಷ ಗಿರಿಧರ್, ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್, ನಗರ ಅಧ್ಯಕ್ಷ ಸುನಿಲ್, ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶ್ಯಾಮಯ್ಯ, ಕಾಡುಗೊಲ್ಲ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಆರ್.ಕೆ.ಶ್ರೀನಿವಾಸ್, ಯಂಜಲಗೆರೆ ಮೂರ್ತಿ, ನಗರಸಭಾ ಮಾಜಿ ಅಧ್ಯಕ್ಷ ಬಿ.ಅಂಜಿನಪ್ಪ, ಸದಸ್ಯ ಆರ್.ರಾಮು, ಮದಲೂರು ಮೂರ್ತಿ ಮಾಸ್ಟರ್, ಎಸ್.ರಾಮಕೃಷ್ಣ, ಅರ್.ರಾಘವೇಂದ್ರ ಸೇರಿದಂತೆ ಹಲವರು ಹಾಜರಿದ್ದರು.