ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಶ್ರೀರಾಮ ತ್ಯಾಗದ ರೂಪವಾದರೆ, ಹನುಮಂತ ಸೇವೆಯ ರೂಪ. ತ್ಯಾಗ, ಸೇವೆ ಎಂಬುದು ರಾಷ್ಟ್ರೀಯ ಆದರ್ಶವಾಗಿದೆ. ಸಮಾಜದ ಹಿತಕ್ಕಾಗಿ ಪ್ರತಿಯೊಬ್ಬರೂ ಸಂಘಟಿತರಾಗಬೇಕಾಗಿದೆ. ಯುವ ಶಕ್ತಿ ಜಾಗೃತವಾಗಿ ಕೆಲಸ ಕಾರ್ಯ ಮಾಡಬೇಕಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆದಂತೆ ನಮ್ಮ ಹೃದಯದಲ್ಲಿ ರಾಮನ ಪ್ರತಿಷ್ಠಾಪನೆ ಆಗಬೇಕು. ಧರ್ಮ ಅನುಷ್ಠಾನದಿಂದ ಬದುಕು ಉಜ್ವಲವಾಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.ಅವರು ಶುಕ್ರವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಪುತ್ತೂರು ಘಟಕದ ೧೭ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಲೋಕ ಕಲ್ಯಾಣಾರ್ಥವಾಗಿ ಶ್ರೀ ರಾಮನಾಮತಾರಕ ಹವನಪೂರ್ವಕ ಶ್ರೀ ಹನುಮಯಾಗದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಗ್ರಾಮವಿಕಾಸದ ಮೂಲಕ ಗ್ರಾಮಗಳಲ್ಲಿ ಪರಿವರ್ತನೆ ಮಾಡುವ ಕಾರ್ಯ ಒಡಿಯೂರು ಶ್ರೀಗಳಿಂದ ನಡೆದಿದೆ. ಅದೇ ಮಾದರಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತುಂಬುವ ಕಾರ್ಯವನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ, ಉದ್ಯಮಿ ಉಜ್ವಲ್ ಪ್ರಭು, ತುಳುನಾಡ ಜಾತ್ರೆ ಹೊರೆಕಾಣಿಕೆ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಶುಭಹಾರೈಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರದ ಅಧ್ಯಕ್ಷ ಸುರೇಶ್ ರೈ, ಗುರುದೇವ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಅಧ್ಯಕ್ಷೆ ನಯನ ರೈ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧಕರಾದ ಸಮನ್ವಿ ರೈ ಮದಕ, ಸಮೃದ್ಧಿ ಜೆ. ಶೆಟ್ಟಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗ್ರಾಮ ವಿಕಾಸ ಯೋಜನೆಯಲ್ಲಿ ಸಾಧನೆ ಮಾಡಿದ ಸುನಂದಾ ರೈ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಅವರನ್ನು ಸನ್ಮಾನಿಸಲಾಯಿತು. ವೇದಮೂರ್ತಿ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಹನುಮಯಾಗ ನಡೆಯಿತು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಪುತ್ತೂರು ಘಟಕದ ಅಧ್ಯಕ್ಷ ಸುಧೀರ್ ನೋಂಡ ಸ್ವಾಗತಿಸಿದರು. ಯೋಜನೆಯ ಮೇಲ್ವಿಚಾರಕಿ ಸವಿತಾ ರೈ ವಂದಿಸಿದರು. ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ನಿರೂಪಿಸಿದರು.