ಅಂಗವಿಕಲರಿಗೆ ಪರಿಕರ ವಿತರಣೆ ಸಮಾಜದ ಒಳಿತಿಗೆ ಸಹಕಾರಿ-ಲಮಾಣಿ

| Published : Sep 23 2024, 01:26 AM IST

ಅಂಗವಿಕಲರಿಗೆ ಪರಿಕರ ವಿತರಣೆ ಸಮಾಜದ ಒಳಿತಿಗೆ ಸಹಕಾರಿ-ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೋರೇಷನ್‌ನವರು ಯಾವುದೇ ಮಾನದಂಡಗಳನ್ನು ನೋಡದೆ ಜಿಲ್ಲೆಯ ಎಲ್ಲ ಅಂಗವಿಕಲರಿಗೂ ಅವಶ್ಯಕ ಸಾಧನ, ಸಲಕರಣೆಗಳನ್ನು ನೀಡುತ್ತಿರುವುದು ತುಂಬಾನೆ ಸಂತೋಷದ ಸಂಗತಿ ಎಂದು ಶಾಸಕ, ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೋರೇಷನ್‌ನವರು ಯಾವುದೇ ಮಾನದಂಡಗಳನ್ನು ನೋಡದೆ ಜಿಲ್ಲೆಯ ಎಲ್ಲ ಅಂಗವಿಕಲರಿಗೂ ಅವಶ್ಯಕ ಸಾಧನ, ಸಲಕರಣೆಗಳನ್ನು ನೀಡುತ್ತಿರುವುದು ತುಂಬಾನೆ ಸಂತೋಷದ ಸಂಗತಿ ಎಂದು ಶಾಸಕ, ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.ನಗರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತ ಸರ್ಕಾರದಿಂದ ಅನುಮೋದಿತಗೊಂಡ ಅಲಿಂಕೋ ಸಂಸ್ಥೆ ಬೆಂಗಳೂರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಐಆರ್‌ಎಫ್‌ಸಿಯ ಸಿಎಸ್ಆರ್ ಯೋಜನೆಯಡಿಯಲ್ಲಿ ಅಂಗವಿಕಲರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರವು ಕೂಡ ಅಂಗವಿಕಲರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅದರ ಹೊರತಾಗಿಯು ಇಂದು ಸರ್ಕಾರೇತರ ಸಂಸ್ಥೆಗಳು ವಿಶೇಷಚೇತನರಿಗೆ ಅವಶ್ಯಕ ಪರಿಕರಗಳನ್ನು ಪೂರೈಸಲು ಮುಂದೆ ಬಂದಿದ್ದು ಇದು ಸಮಾಜದ ಒಳಿತಿಗೆ ಸಹಕಾರಿಯಾಗಿದೆ ಎಂದರು.ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ಒಂದು ಉದ್ಯಮ ಬೆಳೆಯಬೇಕಾದರೆ ಅಲ್ಲಿ ಸುಸ್ಥಿರ ಬೆಳವಣಿಗೆ ಹಾಗೂ ಸಾಮಾಜಿಕ ಜವಾಬ್ದಾರಿ ಇರಬೇಕು. ಇವೆರಡು ಆ ಉದ್ಯಮಕ್ಕೆ ಪೂರಕವಾಗಿರುತ್ತದೆ. ಉದ್ಯಮಗಳ ಬೆಳವಣಿಗೆಯಿಂದ ಸಾಮಾಜಿಕ ಹೊಣೆಗಾರಿಕೆ ಹೆಚ್ಚಾಗಿ ಸಮಾಜದಲ್ಲಿ ಸಹಾಯ ಸಹಕಾರಗಳು ನಡೆಯುತ್ತಿವೆ. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿದರೆ ಮಾತ್ರ ನಾಡನ್ನು ಸುಲಭವಾಗಿ ಕಟ್ಟಬಹುದು ಎಂದರು.ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೋರೇಷನ್ ಸಂಸ್ಥೆಯು ದಕ್ಷಿಣ ಭಾರತದಲ್ಲಿಯೇ ಹಾವೇರಿ ನಗರವನ್ನು ಆಯ್ದುಕೊಂಡು ವಿಶೇಷಚೇತನರಿಗೆ ವಿವಿಧ ಸಾಧನ ಸಲಕರಣೆಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಂದು ಜಿಲ್ಲೆಯ ಅರ್ಹ ೧೦೮೦ ವಿಶೇಷಚೇತನ ಫಲಾನುಭವಿಗಳಿಗೆ ಅಗತ್ಯವಿರುವ ೧೭೧೭ ವಿವಿಧ ರೀತಿಯ ಸಾಧನ- ಸಲಕರಣೆಗಳನ್ನು ಭಾರತೀಯ ರೈಲ್ವೆ ಹಣಕಾಸು ನಿಗಮದ ೧೪೭.೦೩ ಲಕ್ಷ ರು.ಗಳ ಸಿಎಸ್‌ಆರ್ ಅನುದಾನದಡಿ ವಿತರಣೆ ಮಾಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಜಿಲ್ಲೆಯಿಂದ ೭೪೦ ಪುರುಷ ವಿಶೇಷಚೇತನರು ಹಾಗೂ ೩೪೦ ಮಹಿಳಾ ವಿಕಲಚೇತನರು ಸೌಲಭ್ಯ ಪಡೆಯುತ್ತಿದ್ದಾರೆ. ಅಂಗವಿಕಲರು ಮನಸಿದ್ದರೆ ಏನಾದರೂ ಸಾಧಿಸಬಲ್ಲೆವು ಎನ್ನುವ ಮನೋಭಾವನೆ ಹೊಂದಬೇಕು ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ್ ಮಾತನಾಡಿ, ವಿಶೇಷಚೇತನರು ಕೂಡ ಸಾಮಾನ್ಯರಂತೆ ಜೀವಿಸಲು ಸರ್ಕಾರ ಕೆಲವು ಸೌಲಭ್ಯಗಳನ್ನು ನೀಡುತ್ತಿದೆ. ಅಂತಹ ಸೌಲಭ್ಯಗಳನ್ನು ಬಳಸಿಕೊಂಡು ಸಾಮಾನ್ಯರಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಹಾವೇರಿ ತಾಲೂಕಿನ ೮೦ ವಿಶೇಷಚೇತನರಿಗೆ ವಿವಿಧ ರೀತಿಯ ೧೧೯ ಸಾಧನ-ಸಲಕರಣೆಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆಶು ನದಾಫ, ವಿಕಲಚೇತನರ ಸಂಘದ ಅಧ್ಯಕ್ಷ ಪುಟ್ಟಪ್ಪ, ವಿಕಲಚೇತನರ ಸಂಘದ ಉಪಾಧ್ಯಕ್ಷ ಮೌನೇಶ ಬಡಿಗೇರ, ಸಂಘದ ಪದಾಧಿಕಾರಿಗಳು ಹಾಗೂ ಇತರರರು ಇದ್ದರು.

ಜಿಲ್ಲೆಯ ವಿಕಲಚೇತನರಿಗೆ ೧೧೯ ಬ್ಯಾಟರಿಚಾಲಿತ ತ್ರಿಚಕ್ರವಾಹನ, ೧೯ ಬ್ಯಾಟರಿಚಾಲಿತ ಗಾಲಿಕುರ್ಚಿ, ೧೫೬ ಸಾಧಾ ತ್ರಿಚಕ್ರವಾಹನ, ೨೯೫ ಸಾಧಾ ಗಾಲಿಕುರ್ಚಿ, ೪೦ ಮೊಣಕೈ ಊರುಗೋಲು, ೧೨೨ ಸಾಧಾ ಊರುಗೋಲು, ೧೯೯ ವಾಕಿಂಗ್ ಸ್ಟೀಕ್, ೭೪ ರೋಲೆಟರ್, ೩೭ ಸಿಪಿ ಗಾಲಿಕುರ್ಚಿ, ೪ ಅಂಧರ ಬಿಳಿಕೋಲು, ೫ ಅಂಧರ ಬ್ರೈಲ್ ಕಿಟ್, ೨೯ ಸುಗಮ್ಮ ಕೋಲು. ೧ ಸ್ಮಾರ್ಟ ಪೋನ್, ೫೫೨ ಶ್ರವಣಸಾಧನ ಹಾಗೂ ೬೫ ಕೃತಕ ಕೈ ಹಾಗೂ ಕೃತಕ ಕಾಲಿನ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.