ಕಾಂಗ್ರೆಸ್ ಪಕ್ಷ ಗೆದ್ದರೇ ಪ್ರಜಾಪ್ರಭುತ್ವ ಗೆದ್ದಂತೆ

| Published : Apr 15 2024, 01:21 AM IST

ಕಾಂಗ್ರೆಸ್ ಪಕ್ಷ ಗೆದ್ದರೇ ಪ್ರಜಾಪ್ರಭುತ್ವ ಗೆದ್ದಂತೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ: ಕಾಂಗ್ರೆಸ್ ಪಕ್ಷ ಗೆದ್ದರೇ ಪ್ರಜಾಪ್ರಭುತ್ವ ಗೆದ್ದಂತೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ರೆಡ್ಡಿ ಸಮಾಜಗಳ ಸೇರಿದಂತೆ ವಿವಿಧ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ರಾಜ್ಯಕ್ಕೆ ನ್ಯಾಯ ಒದಗಿಸುವ ದಿಸೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಬೇಕಿದೆ. ಇಲ್ಲವಾದಲ್ಲಿ ಪ್ರಜಾಪ್ರಭುತ್ವ ದೊಡ್ಡ ಅಪಾಯದಲ್ಲಿ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಾಂಗ್ರೆಸ್ ಪಕ್ಷ ಗೆದ್ದರೇ ಪ್ರಜಾಪ್ರಭುತ್ವ ಗೆದ್ದಂತೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ರೆಡ್ಡಿ ಸಮಾಜಗಳ ಸೇರಿದಂತೆ ವಿವಿಧ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ರಾಜ್ಯಕ್ಕೆ ನ್ಯಾಯ ಒದಗಿಸುವ ದಿಸೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಬೇಕಿದೆ. ಇಲ್ಲವಾದಲ್ಲಿ ಪ್ರಜಾಪ್ರಭುತ್ವ ದೊಡ್ಡ ಅಪಾಯದಲ್ಲಿ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದರು.

ಬಡಜನರ ಒಳಿತಿಗಾಗಿ ಕಾಂಗ್ರೆಸ್ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಇಡೀ ದೇಶದಲ್ಲೇ ಅಪರೂಪದ ಯೋಜನೆ ಎಂದರೇ ಗೃಹಲಕ್ಷ್ಮಿ ಯೋಜನೆ. ಇದರ ಅನುಷ್ಠಾನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಶ್ರಮ ಸಾಕಷ್ಟಿದೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳು ಶೇ.98 ರಷ್ಟು ಜನರಿಗೆ ತಲುಪುತ್ತಿವೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆ ಒಂದು ಕ್ರಾಂತಿಕಾರಿ ಯೋಜನೆಯಾಗಿದೆ. ಅದರ ಯಶಸ್ಸಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತದೆಂದು ಹೇಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಗ್ಯಾರಂಟಿ ಯೋಜನೆಗಳ ಮೊರೆ ಹೋಗಿದ್ದಾರೆ. ಯೋಜನೆಗಳ ವಾರ್ಷಿಕ ಬಜೆಟ್ ₹50 ಸಾವಿರ ಕೋಟಿ. ಆದರೆ, ಕೇಂದ್ರ ಸರ್ಕಾರ 10 ಲಕ್ಷ ಕೋಟಿ ಶ್ರೀಮಂತರ ಸಾಲವನ್ನು ಮನ್ನಾ ಮಾಡುವ ಮೂಲಕ ಶ್ರೀಮಂತರ ಸರ್ಕಾರ ಎಂದು ನಿರೂಪಿಸಿದೆ ಎಂದು ಟೀಕಿಸಿದರು.

ಕರ್ನಾಟಕದ ಪಾಲಿಗೆ ಬರಬೇಕಾಗಿದ್ದ ಬರ ಪರಿಹಾರ ಕೊಟ್ಟಿಲ್ಲ. 7 ತಿಂಗಳ ಹಿಂದೆಯೇ ಬರ ಪರಿಹಾರಕ್ಕೆ ಮನವಿ ಮಾಡಿದರೂ ಒಂದೇ ಒಂದು ನಯಾಪೈಸೆ ಕೊಡಲಿಲ್ಲ. ನಮಗೆ ಶ್ರೀಮಂತರ ಸಹಕಾರ ಇಲ್ಲ. ಏನಿದ್ದರೂ ಬಡವ ದೀನ ದಲಿತರು ಮಾತ್ರ ಕಾಂಗ್ರೆಸ್ ಪರ ಇದ್ದಾರೆ ಎಂದು ತಿಳಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಬಿಜೆಪಿ ಸುಳ್ಳಿನ‌ ಅರಮನೆ ಇದ್ದಂತೆ. ಜನರನ್ನು ದಿಕ್ಕು ತಪ್ಪಿಸಿ, ಅಧಿಕಾರಕ್ಕೇರಿದೆ. ಆದರೆ, ಕಾಂಗ್ರೆಸ್ ಪಕ್ಷ ಬದ್ಧತೆಗೆ ಹೆಸರಾಗಿದೆ. ಬಡ ಜನರ ಪಾಲಿಗೆ ಆಶಾಕಿರಣವಾಗಿದೆ. ಬಿಜೆಪಿ ಕೊರೋನಾ ವೇಳೆ ಸಂಸ್ತ್ರರಿಗೆ ಪರಿಹಾರ ನೀಡುವುದಾಗಿ ಘೋಷಿಸಿ,‌ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿದೆ. ಎಲ್ಲಿ ಹೋಯಿತು ಆ ಹಣ? ಪ್ರಶ್ನಿಸುವವರೇ ಯಾರು ಇಲ್ಲ ಎಂದರು.

ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು, ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‌

ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ, ಮಾಜಿ ಸಚಿವ ಎ.ಬಿ.ಪಾಟೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ್ ಮಾತನಾಡಿದರು.

ಈ ಸಮಾರಂಭದಲ್ಲಿ ಬೆಳಗಾವಿ ರೆಡ್ಡಿ ಸಂಘದ ಅಧ್ಯಕ್ಷರಾದ ರಾಮಣ್ಣ ಮುಳ್ಳೂರ, ಉಪಾಧ್ಯಕ್ಷ ಟಿ.ಕೆ.ಪಾಟೀಲ್, ಶಾಸಕ ರಾಜು ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸವದತ್ತಿ ಮಾಜಿ ಶಾಸಕ ರಾಮನಗೌಡ ಪಾಟೀಲ್, ಕೆಪಿಸಿಸಿ ಸದಸ್ಯ ರಾಜೇಂದ್ರ ಪಾಟೀಲ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ, ಡಾ.ಗಿರೀಶ್ ಸೋನ್ವಾಲ್ಕರ್, ಶಿವನಗೌಡ ಪಾಟೀಲ, ರಮೇಶ್ ಜಂಗಲ್, ಉಮೇಶ್ ಬಾಳಿ ಸೇರಿದಂತೆ ಸಮಾಜದ ನೂರಾರು ಮುಖಂಡರು ಉಪಸ್ಥಿತರಿದ್ದರು.

ಕೋಟ್‌..

ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಯೊಬ್ಬ ಮುಖಂಡರು ತಮ್ಮದೇ ಚುನಾವಣೆ ಎನ್ನುವಂತೆ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಗಳಾದ ಮೃಣಾಲ್‌ ಹೆಬ್ಬಾಳಕರ, ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕು.

-ಎಚ್.ಕೆ.ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು.