ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದಲಿತ ಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಲಿತ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ರವರಿರುವ ನಾಡಿನಲ್ಲಿ ಇಬ್ಬರು ದಲಿತ ಪೇದೆಗಳಿಗೆ ಅವರು ದಲಿತರು ಎನ್ನುವಕಾರಣಕ್ಕೆ ಅನ್ಯಾಯ ವಾಗುತ್ತಿದ್ದರೂ ಸಹ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ ರಾಜ್ಯ ಸಂಚಾಲಕ ಹರಿರಾಂ ಆರೋಪಿಸಿದರು.ಇಲಾಖಾ ವಿಚಾರಣೆ ಬಾಕಿ
ನಗರದಲ್ಲಿ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 4, 2023 ರಂದು ಬಾಗೇಪಲ್ಲಿ ತಾಲ್ಲೂಕು ಗಡಿದಂ ಗ್ರಾಮದಲ್ಲಿ ನಡೆದ ಹಣ ವಂಚನೆ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ರವಿ ಮತ್ತು ನಾಲ್ವರು ಪೇದೆಗಳು ಅಮಾನತಾಗಿದ್ದಾರೆ. ಆದರೆ ಮುಖ್ಯ ಪೇದೆ ನರಸಿಂಹಮೂರ್ತಿ ಮತ್ತು ಪೇದೆ ಆಶೋಕ್ ಇಬ್ಬರನ್ನು ಬಿಟ್ಟು ಉಳಿದ ಮೂವರ ಅಮಾನತು ರದ್ದಾಗಿ ಇಲಾಖಾ ವಿಚಾರಣೆ ಬಾಕಿ ಇಡಲಾಗಿದೆ. ವಿಚಾರಣಾ ಅಧಿಕಾರಿಯಾಗಿ ಗೌರಿಬಿದನೂರು ಪೋಲಿಸ್ ಇನ್ಸ್ ಪೆಕ್ಟರ್ ಸತ್ಯನಾರಾಯಣರನ್ನು ನೇಮಿಸಿರುತ್ತಾರೆ.ಎಸ್ಪಿ ನಾಗೇಶ್ ಮತ್ತು ಮಂಚೇನಹಳ್ಳಿ ಸಬ್ ಇನ್ಸ್‌ಪೆಕ್ಟರ್ ಮೂರ್ತಿಯ ನಿಂದಿಸಿದ್ದಾರೆಂದು ಪಜಾತಿ ಮತ್ತು ಪ.ಪಂ ಆಯೋಗಕ್ಕೆ ದೂರು ನೀಡಿದ ಕಾರಣಕ್ಕಾಗಿ ಪೆದೆ ಅಶೋಕ್ ಮತ್ತು ನರಸಿಂಹಮೂರ್ತಿಯನ್ನು ಕೆಲಸದಿಂದಲೇ ವಜಾ ಮಾಡಿಸಲು ಎಸ್ಪಿ ನಾಗೇಶ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಇಬ್ಬರೂ ಪೇದೆಗಳನ್ನು ಆರು ತಿಂಗಳ ನಂತರ ಅಮಾನತು ವಾಪಸ್ ಪಡೆದು ನಂತರ 20 ದಿನಗಳಲ್ಲಿ ಮತ್ತೆ ಅಮಾನತು ಮಾಡುತ್ತಾರೆ ಎಂದು ಆರೋಪಿಸಿದರು.
ತನಿಖೆ ಬೇರೆ ಜಿಲ್ಲೆಗೆ ವರ್ಗಾಯಿಸಿಕೂಡಲೇ ಇಲಾಖೆಯ ವಿಚಾರಣೆಯನ್ನು ಬೇರೆ ಜಿಲ್ಲೆಗೆ ವರ್ಗಾಯಿಸಬೇಕು. ಎಸ್ಪಿ ನಾಗೇಶ್, ಇನ್ಸ್‌ಪೆಕ್ಟರ್ ಸತ್ಯನಾರಾಯಣ ಮತ್ತು ಸಬ್ಇನ್ಸ್‌ಪೆಕ್ಟರ್ ಮೂರ್ತಿ ರವರನ್ನೂ ಅಮಾನತು ಮಾಡಬೇಕು. ಬಾಗೇಪಲ್ಲಿ ಪೋಲಿಸ್ ಇನ್ಸ್ ಪೆಕ್ಟರ್ ರವಿಕುಮಾರ್ ರವರ ಮುಂದೆ ಹಣದ ವಂಚನೆಗೆ ಒಳಗಾಗಿದ್ದ ಅನಿತಾ, ಹರೀಶ್ ಮತ್ತು ವಂಚನೆ ಮಾಡಿದ್ದ ಶ್ರೀಕಾಂತ್ ರೆಡ್ಡಿ ಇಬ್ಬರನ್ನೂ ಹಾಜರು ಪಡಿಸಿದ್ದರೂ ಸಣ್ಣ ಕೇಸು ಕೂಡಾ ದಾಖಲಿಸದೆ ಹಣ ಪಡೆದು ಕಳಿಸಿಕೊಟ್ಟಿರುತ್ತಾರೆ. ಇನ್ಸ್‌ಪೆಕ್ಟರ್ ರವಿಕುಮಾರ್ ರವರ ಈ ನಡೆಯ ಕುರಿತು ವಿಚಾರಣೆಯಾಗಬೇಕು. ಇಲ್ಲದಿದ್ದಲ್ಲಿ ರಾಜಭವನ ಚಲೋಗೆ ತಯಾರಿ ನಡೆಸಿ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕರಾದ ಜ.ನಾ.ನಾಗಪ್ಪ,ಬಿ.ಆರ್.ಭಾಸ್ಕರ್ ಪ್ರಸಾದ್,ದಲಿತರಮೇಶ್, ನಾಗೇಶ್,ನಾರಾಯಣಸ್ವಾಮಿ ಮತ್ತಿತರರು ಇದ್ದರು.ಸಿಕೆಬಿ-5 ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ ರಾಜ್ಯ ಸಂಚಾಲಕ ಹರಿರಾಂ ಮಾತನಾಡಿದರು.