ಮುಳುಗಡೆ ಸಂತ್ರಸ್ಥರ ಬೇಡಿಕೆ ಈಡೇರಿಸದಿದ್ದರೆ ಧರಣಿ

| Published : Oct 20 2024, 01:56 AM IST

ಸಾರಾಂಶ

ವಿದ್ಯುತ್‌ ಉತ್ಪಾದನಾ ಕೇಂದ್ರಕ್ಕೆ ಮುತ್ತಿಗೆ ಹಾಕಲಾಗುವುದು : ಸಂತ್ರಸ್ತರ ವೇದಿಕೆ ಅಧ್ಯಕ್ಷ ಹೂವಪ್ಪಎಚ್ಚರಿಕೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಳುಗಡೆ ಸಂತ್ರಸ್ತರ ಬೇಡಿಕೆಗಳ ಈಡೇರಿಕೆಗಾಗಿ ಮಲೆನಾಡ ರೈತ ಸಂಘಟನೆಗಳ ಸಂಯುಕ್ತ ವೇದಿಕೆಯು ಅ.21 ರಿಂದ ಸಾಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಗೆ ತಾವು ಬೆಂಬಲಿಸಲಿದ್ದೇವೆ ಎಂದು ಶರಾವತಿ ಮುಳುಗಡೆ ಸಂತ್ರಸ್ತರ ವೇದಿಕೆ ಅಧ್ಯಕ್ಷ ಹೂವಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಹೋರಾಟದ ಭಾಗವಾಗಿ ಲಿಂಗನಮಕ್ಕಿ ಜಲಾಶಯಕ್ಕೂ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ಸಿಗಬೇಕು. ಭೂಮಿ ಹಂಚಿಕೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು ಹಾಗೂ ಭೂಮಿ ಹಕ್ಕಿನಿಂದ ವಂಚಿತವಾಗಿರುವ ರೈತರಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.

ಲಿಂಗನಮಕ್ಕಿ ಜಲಾಶಯದಿಂದಾಗಿ ಸಾಗರ ಮತ್ತು ಹೊಸನಗರ ತಾಲೂಕಿನ ಸುಮಾರು 166 ಗ್ರಾಮಗಳು ಮುಳುಗಡೆ ಆಗಿಯಾದ ಪರಿಣಾಮ 6,164 ಕುಟುಂಬಗಳು, ದೇವಸ್ಥಾನಗಳು, ಜಮೀನುಗಳು ಸೇರಿ ಸುಮಾರು 1ಲಕ್ಷ ಎಕರೆ ಭೂಮಿ ಮುಳುಗಡೆ ಆಗಿದೆ. ಇಷ್ಟು ಕುಟುಂಬಗಳಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲವೆಂದರೆ ಇಲ್ಲಿವರೆಗೂ ಆಳಿದ ಸರ್ಕಾರಗಳು ಮುಳುಗಡೆ ಸಂತ್ರಸ್ತರನ್ನು ಎಷ್ಟರ ಮಟ್ಟಿಗೆ ಕಡೆಗಣಿಸಿವೆ ಎನ್ನುವುದು ಅರ್ಥವಾಗುತ್ತದೆ ಎಂದು ಆಕ್ರೋಶ ಹೋರಹಾಕಿದರು.

ಇದೇ ವೇಳೆ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ.ಶ್ರೀನಿವಾಸ್ ಮಾತನಾಡಿ, ಮುಳಗಡೆ ಸಂತ್ರಸ್ತರ ಬೆಡಿಕೆಗಳನ್ನು ನ.1ರೊಳಗೆ ಬೇಡಿಕೆ ಈಡೇರಿಸದಿದ್ದರೆ ಲಿಂಗನಮಕ್ಕಿ ಅಣೆಕಟ್ಟಿಗೆ ಮುತ್ತಿಗೆ ಹಾಕಿ, ವಿದ್ಯುತ್‌ ಉತ್ಪಾದನಾ ಕೇಂದ್ರಕ್ಕೆ ನುಗ್ಗಿ ವಿದ್ಯುತ್‌ ಕಟ್‌ ಮಾಡುವಂತಹ ಉಗ್ರ ಹೋರಾಟದ ಬಗ್ಗೆ ಮುಳುಗಡೆ ಸಂತ್ರಸ್ತರ ಸಂಘಟನೆಗಳ ಸಂಯುಕ್ತ ವೇದಿಕೆ ತೀರ್ಮಾನಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ವೇದಿಕೆ ಉಪಾಧ್ಯಕ್ಷ ಎಂ.ಡಿ.ನಾಗರಾಜ್, ಕಾರ್ಯದರ್ಶಿ ಪ್ರಮೋದ್, ಸದಸ್ಯ ಮಂಜುನಾಥ್ ಇದ್ದರು.