ರೋಗ ಆರಂಭದಲ್ಲೇ ಪತ್ತೆ ಮಾಡಿದರೆ ಶೀಘ್ರ ಗುಣಮುಖ: ಡಾ. ಜುನೇದ್

| Published : Jan 26 2024, 01:48 AM IST

ಸಾರಾಂಶ

ಇಂದು ಹಲವರು ಹಣ ಹಾಗೂ ಕೆಟ್ಟ ವಿಚಾರಗಳ ಹಿಂದೆ ಬಿದ್ದಿರುವುದುರಿಂದ ಸಂಬಂಧಗಳು ಹಾಳಾಗುತ್ತಿವೆ. ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು.

ಸಂಡೂರು: ಪಟ್ಟಣದ ರೋಟರಿ ಬಾಲಭವನದಲ್ಲಿ ಭಾನುವಾರ ಸ್ಥಳೀಯ ರೋಟರಿ ಕ್ಲಬ್ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಸಪ್ತಗಿರಿ ಆಸ್ಪತ್ರೆಯ ವೈದ್ಯ ಡಾ. ಜುನೇದ್ ಸವಣೂರ ಶಿಬಿರವನ್ನು ಉದ್ಘಾಟಿಸಿ, ಎದೆನೋವು, ಹೆಚ್ಚು ಬೆವರುವುದು ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಅವುಗಳನ್ನು ನಿರ್ಲಕ್ಷ ಮಾಡದೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗವನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿದರೆ, ಅದನ್ನು ಶೀಘ್ರ ಗುಣಪಡಿಸಬಹುದು. ಸಪ್ತಗಿರಿ ಆಸ್ಪತ್ರೆಯಲ್ಲಿ 1ರಿಂದ ೧೦ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಹೃದಯ ಸಮಸ್ಯೆ ಕಂಡುಬಂದು, ಚಿಕಿತ್ಸೆ ಅಗತ್ಯವೆನಿಸಿದರೆ, ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು ಎಂದರು. ರೋಟರಿ ಸಂಸ್ಥೆಯ ಸದಸ್ಯರಾದ ಬಸವರಾಜ್ ಮಸೂತಿ ಮಾತನಾಡಿ, ಆರೋಗ್ಯವೇ ಮಹಾಭಾಗ್ಯ. ಇಂದು ಜನರಲ್ಲಿ ಹಣವಿದೆ, ಆರೋಗ್ಯವಿಲ್ಲದಂತಾಗಿದೆ. ಇಂದು ಹಲವರು ಹಣ ಹಾಗೂ ಕೆಟ್ಟ ವಿಚಾರಗಳ ಹಿಂದೆ ಬಿದ್ದಿರುವುದುರಿಂದ ಸಂಬಂಧಗಳು ಹಾಳಾಗುತ್ತಿವೆ. ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ರೋಟರಿ ಸಂಸ್ಥೆ ಹಲವು ಶೈಕ್ಷಣಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ರೋಟರಿ ಸಂಸ್ಥೆಯ ಜಿಲ್ಲಾ ಅಸಿಸ್ಟಂಟ್ ಗವರ್ನರ್ ಜೆ.ಎಂ. ಬಸವರಾಜ್ ಮಾತನಾಡಿದರು. ಶಿಬಿರದಲ್ಲಿ ಡಾ. ಅಭಿಷೇಕ್, ಡಾ. ಸರವಣ ರೆಡ್ಡಿ, ಡಾ. ಜುನೇದ್ ಸವಣೂರ್, ಡಾ. ಹನುಮಂತಯ್ಯ ಹಾಗೂ ಅವರ ತಂಡದವರು ಶಿಬಿರದಲ್ಲಿ ಭಾಗವಹಿಸಿದ್ದ ೧೮೨ ಜನರ ಆರೋಗ್ಯ ತಪಾಸಣೆ ನಡೆಸಿದರು. ಇವರಲ್ಲಿ ೨೭ ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ರೋಟರಿ ಕ್ಲಬ್ ಅಧ್ಯಕ್ಷ ಕೆ. ನಾಗರಾಜ, ಕಾರ್ಯದರ್ಶಿ ಎಚ್.ಎಂ. ಶಿವಮೂರ್ತಿ, ಸಮುದಾಯ ಸೇವಾ ನಿರ್ದೇಶಕರಾದ ಎ. ಕೊಟ್ರೇಶ್, ರೋಟರಿ ಸಂಸ್ಥೆಯ ವಿವಿಧ ಘಟಕಗಳ ನಿರ್ದೇಶಕರಾದ ಡಿ. ಕೃಷ್ಣಪ್ಪ, ಮಾರುತಿರಾಬ್ ಭೋಸ್ಲೆ, ಸುರೇಶ್‌ಗೌಡ, ಗೌರೀಶ್, ಎಂ.ವಿ. ಹಿರೇಮಠ್, ಜೆ.ಎಂ. ಅನ್ನದಾನಸ್ವಾಮಿ ಹಾಗೂ ಹಲವು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವೆಸ್ಕೋ ಕಂಪನಿಯ ಮಾಲೀಕ ಕೆ.ಎಸ್. ನಾಗರಾಜ ವಹಿಸಿಕೊಂಡಿದ್ದರು.