ಸಾರಾಂಶ
ಪರಿಸರವನ್ನು ತಾಯಿಯಂತೆ ಪ್ರೀತಿಸಿ ಮತ್ತು ತಂದೆಯಂತೆ ಗೌರವಿಸಿದಾಗ ಮಾತ್ರ ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮುಂಡಗೋಡ: ಪರಿಸರ ನಾಶವಾದರೆ ಇಡೀ ಮನುಕುಲವೇ ನಾಶವಾಗುತ್ತದೆ ಎಂಬ ಪರಿಕಲ್ಪನೆ ಪ್ರತಿಯೊಬ್ಬರಲ್ಲಿ ಬರಬೇಕಿದೆ. ಪರಿಸರ ಉತ್ತಮವಾಗಿದ್ದರೆ ಮಾತ್ರ ಆರೋಗ್ಯವಂತ ಬದುಕು ಸಾಗಿಸಲು ಸಾಧ್ಯ. ಪರಿಸರ ಪ್ರತಿಯೊಬ್ಬರ ಜೀವನದ ನಾಡಿಮಿಡಿತವಾಗಿದೆ ಎಂದು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಎಸ್.ಬಿ. ಹೂಗಾರ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಹೀಗೆ ಹಲವಾರು ರೀತಿಯಲ್ಲಿ ಪರಿಸರಮಾಲಿನ್ಯ ಮಾಡುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಭಾರಿ ಸಂಕಷ್ಟ ಎದುರಿಸಬೇಕಾಗುತ್ತದೆ. ಪರಿಸರವನ್ನು ತಾಯಿಯಂತೆ ಪ್ರೀತಿಸಿ ಮತ್ತು ತಂದೆಯಂತೆ ಗೌರವಿಸಿದಾಗ ಮಾತ್ರ ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಕಸಾಪ ಅಧ್ಯಕ್ಷ ವಸಂತಕೊಣಸಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ದಿನಾಚರಣೆ ಅಂಗವಾಗಿ ಪರಿಸರ ವಿಷಯದ ಕುರಿತು ಯುವ ಕವಿಗಳು ಸುಂದರ ಕವಿತೆಗಳನ್ನು ವಾಚಿಸಿದ್ದಾರೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿಗೋಷ್ಠಿಯಲ್ಲಿ ಸಹನಾ ಅರ್ಕಸಾಲಿ, ಬಾಲಚಂದ್ರ ಹೆಗಡೆ, ಸಂತೋಷ ತಳವಾರ, ಪಾಂಡುರಂಗ ಟಿಕ್ಕೋಜಿ, ಶ್ರೀಕಾಂತ ಹೊಂಡದಕಟ್ಟಿ, ಕೃಷ್ಣ ಗುಜಮಾಗಡಿ, ಸಂತೋಷ ಕುಸನೂರ ಕವನ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಚಂದ್ರಕಾಂತ ಮದಭಾವಿಯವರ ಕುಟುಂಬದ ವತಿಯಿಂದ ಕವಿ ಹಾಗೂ ಅತಿಥಿಗಳಿಗೆ ಸಸಿ ವಿತರಿಸಲಾಯಿತು.ಈ ವೇಳೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಕೆ. ಬೋರ್ಕರ್, ವಿನಾಯಕ ಶೇಟ್, ರಾಮಣ್ಣ ಬೆಳ್ಳೆನವರ, ಮಂಜುನಾಥ ಕಲಾಲ, ಸಂಗಪ್ಪ ಕೋಳೂರು, ರಾಮಚಂದ್ರ ಕಲಾಲ, ನಾಗರಾಜ ಅರ್ಕಸಾಲಿ, ನೀರಲಗಿ, ಬರ್ಮಣ್ಣ ಚಕ್ರಸಾಲಿ ಮುಂತಾದವರು ಉಪಸ್ಥಿತರಿದ್ದರು.