ಸಾರಾಂಶ
ಹರಪನಹಳ್ಳಿ ಪಟ್ಟಣದ ಬಿಇಒ ಕಾರ್ಯಾಲಯದ ಆವರಣದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ, ಶಿಕ್ಷಣಾ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಸಸಿಗಳನ್ನು ನೆಡುವುದು ವಿಶ್ವ ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗದಿರಲಿ ಎಂದು ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ತಿಳಿಸಿದರು.ಪಟ್ಟಣದ ಬಿಇಒ ಕಾರ್ಯಾಲಯದ ಆವರಣದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ, ಶಿಕ್ಷಣಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಪೃಥ್ವಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ. ಪಂಚಭೂತಗಳಿಂದ ನಿರ್ಮಿತವಾದ ನಮ್ಮ ಪರಿಸರ ಹಾಳಾದರೆ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.ಇಂದು ಸ್ವರ್ಧಾತ್ಮಕ, ಯಾಂತ್ರಿಕ ಜೀವನದ ಜಂಜಾಟದಲ್ಲಿ ನಾವೆಲ್ಲರೂ ತಲ್ಲಿನರಾಗಿದ್ದೇವೆ. ಅಭಿವೃದ್ಧಿ, ಹಣದ ಬೆನ್ನತ್ತಿ ಓಡುವ ಈ ಓಟದಲ್ಲಿ ಪ್ರಕೃತಿ, ಪರಿಸರದ ಕುರಿತಾದ ಆಸ್ಥೆ ಮರೆಯಾಗಿದೆ. ಆ ಕಾರಣದಿಂದ ದಿನೇ ದಿನೇ ಪ್ರಕೃತಿ ತನ್ನತನ ಕಳೆದುಕೊಳ್ಳುತ್ತಿದೆ ಎಂದು ನುಡಿದರು.
ಜೀವವೈವಿಧ್ಯತೆ, ನೈಸರ್ಗಿಕ ಸೌಂದರ್ಯ ಕಳೆದು ಹೋಗುತ್ತದೆ. ಆದ್ದರಿಂದ ಪ್ರತಿದಿನ, ಪ್ರತಿ ಕ್ಷಣ ಪರಿಸರದ ಕುರಿತು ಕಾಳಜಿ ವಹಿಸಬೇಕಾಗಿದೆ. ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಷಬೇಕಾಗಿದೆ ಎಂದು ತಿಳಿಸಿದರು.ಕ್ಷೇತ್ರಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಮಾತನಾಡಿ, ಗಿಡ ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ನಿರ್ಲಕ್ಷ್ಯ ವಹಿಸದೆ ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಕೆ. ಮಲ್ಲಪ್ಪ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ ಮಾತನಾಡಿದರು, ಸಾಮಾಜಿಕ ಅರಣ್ಯಾಧಿಕಾರಿ ದೇವರಾಜ, ಬಿಆರ್‌ಸಿ ಹೊನ್ನತ್ತೆಪ್ಪ, ಬಿಆರ್‌ಪಿ ನಾಗರಾಜ, ವಕೀಲರಾದ ಎಂ. ಮೃತಂಜಯ್ಯ, ಜೆ. ಸೀಮಾ, ನಳೀನಾಕುಮಾರಿ, ತಾಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂದಿ ಕೊಟ್ರೇಶ್, ಬಸವರಾಜ್, ಇಸಿಒ ಲಕ್ಷ್ಮವ್ವ ರಂಗಣ್ಣನವರ್, ಸೇರಿದಂತೆ ಇತರರು ಇದ್ದರು.