ಸರ್ಕಾರ ಸ್ಪಂದಿಸದೇ ಹೋದಲ್ಲಿ ಹೋರಾಟ ರುದ್ರರೂಪ

| Published : Nov 05 2025, 03:15 AM IST

ಸರ್ಕಾರ ಸ್ಪಂದಿಸದೇ ಹೋದಲ್ಲಿ ಹೋರಾಟ ರುದ್ರರೂಪ
Share this Article
  • FB
  • TW
  • Linkdin
  • Email

ಸಾರಾಂಶ

ಸಕ್ಕರೆ ಕಾರ್ಖಾನೆಗಳು ರೈತರು ಪೂರೈಸುವ ಪ್ರತಿ ಟನ್ ಕಬ್ಬಿಗೆ ₹3500 ದರವನ್ನು ಘೋಷಿಸಬೇಕು. ರೈತರು ಕಳೆದ 6 ದಿನಗಳಿಂದ ಹೋರಾಟ ನಡೆಸಿದರೂ ಸರ್ಕಾರ ಮೊoಡುತನ ತೋರಿಸುತ್ತಿದೆ. ರೈತರ ಸಹನೆಯ ಕಟ್ಟೆ ಒಡೆದು ಪ್ರತಿಭಟನೆ ಉಗ್ರರೂಪ ತಾಳುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೇ ಹೋರಾಟದ ಸಂದರ್ಭದಲ್ಲಿ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಮಹಾದೇವ ಮಡಿವಾಳ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಸಕ್ಕರೆ ಕಾರ್ಖಾನೆಗಳು ರೈತರು ಪೂರೈಸುವ ಪ್ರತಿ ಟನ್ ಕಬ್ಬಿಗೆ ₹3500 ದರವನ್ನು ಘೋಷಿಸಬೇಕು. ರೈತರು ಕಳೆದ 6 ದಿನಗಳಿಂದ ಹೋರಾಟ ನಡೆಸಿದರೂ ಸರ್ಕಾರ ಮೊoಡುತನ ತೋರಿಸುತ್ತಿದೆ. ರೈತರ ಸಹನೆಯ ಕಟ್ಟೆ ಒಡೆದು ಪ್ರತಿಭಟನೆ ಉಗ್ರರೂಪ ತಾಳುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೇ ಹೋರಾಟದ ಸಂದರ್ಭದಲ್ಲಿ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಮಹಾದೇವ ಮಡಿವಾಳ ಎಚ್ಚರಿಕೆ ನೀಡಿದರು.

ಪಟ್ಟಣದ ಶಿವಯೋಗಿ ವೃತ್ತದಲ್ಲಿ ಜೇವರಿಗಿ-ಸಂಕೇಶ್ವರ ಮತ್ತು ಜತ್ತ-ಜಂಬೋಟ ರಾಜ್ಯ ಹೆದ್ದಾರಿಗಳನ್ನು ತಡೆದು ಕಬ್ಬಿನ ಬೆಲೆಗೆ ಸೂಕ್ತ ದರ ಘೋಷಿಸಿ ಕಾರ್ಖಾನೆಗಳನ್ನು ಆರಂಭಿಸುವಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.ಕಳೆದ ನಾಲ್ಕೈದು ದಿನಗಳಿಂದ ಗುರ್ಲಾಪುರ ಕ್ರಾಸ್‌ದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ರೈತರ ಸಮಸ್ಯೆಗಳನ್ನು ಆಲಿಸಲು ಸ್ಥಳಕ್ಕೆ ಬಾರದೆ ಮೊಂಡತನ ತೋರಿಸುತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸಕ್ಕರೆ ಸಚಿವರು ಮತ್ತು ಈ ಭಾಗದ ಎಲ್ಲ ಶಾಸಕರು ರೈತರು ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿ ನಮ್ಮ ಬೇಡಿಕೆಗೆ ಕೂಡಲೇ ಸ್ಪಂದನೆ ಮಾಡಬೇಕು. ಇಂದು ಸಾಂಕೇತಿಕ ರಸ್ತೆ ತಡೆ ನಡೆಸಲಾಗಿದೆ. ನಾಳೆಯ ದಿನ ಈ ಹೋರಾಟ ಇನ್ನಷ್ಟು ಉಗ್ರರೂಪ ತಾಳಲಿದೆ. ರೈತರ ತಾಳ್ಮೆಯನ್ನು ಪರೀಕ್ಷಿಸದೆ ಸರ್ಕಾರ ಕೂಡಲೇ ರೈತರ ಕಬ್ಬಿಗೆ ₹3500 ದರ ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಈ ಪ್ರತಿಭಟನೆ ನಡೆದ ಸ್ಥಳಕ್ಕೆ ಅನೇಕ ಮಠಾಧೀಶರು, ರಾಜಕೀಯ ಮುಖಂಡರು, ಕನ್ನಡಪರ ಹೋರಾಟಗಾರರು, ವೈದ್ಯರು, ವಕೀಲರು, ಸಾಹಿತಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ವ್ಯಾಪಾರಸ್ಥರು ನೈತಿಕ ಬೆಂಬಲವನ್ನು ನೀಡುವುದರ ಜೊತೆಗೆ ತಮ್ಮ ದಿನನಿತ್ಯದ ಕಾರ್ಯಕ್ರಮ ಮತ್ತು ವ್ಯಾಪಾರವನ್ನು ಸ್ಥಗಿತಗೊಳಿಸಿ ಜ್ಯಾತ್ಯಾತೀತ ಮತ್ತು ಪಕ್ಷಾತೀತವಾಗಿ ಭಾಗವಹಿಸಿದ್ದರು. ಕಬ್ಬು ಬೆಳೆಗಾರರಿಗೆ ₹3500 ದರ ನೀಡುವುದರ ಜೊತೆಗೆ ರೈತರ ಇನ್ನಿತರ ಬೆಳೆಗೆ ಸೂಕ್ತ ದರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ಮಹದೇವ ಮಡಿವಾಳ ಮತ್ತು ಉದಯ ಮಾಕಾಣಿ ನೇತೃತ್ವದ ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಅಹೋ ರಾತ್ರಿ ಧರಣಿ ನಡೆಸುವ ಮೂಲಕ ಪ್ರತಿಭಟನೆ ಆರಂಭಿಸಿದ್ದಾರೆ. ಈ ಹೋರಾಟಕ್ಕೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಅಥಣಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎಂ.ಸಿ.ತಾಂಬೋಳಿ ನೇತೃತ್ವದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು, ಗುರಪ್ಪ ಮಗದಮ್ಮ ಅವರ ನೇತೃತ್ವದ ಮಾಜಿ ಸೈನಿಕರ ಸಂಘ, ಆಕಾಶ ನಂದಗಾವ ಅವರ ಜಯ ಕರ್ನಾಟಕ ಸಂಘಟನೆ ಬೆಂಬಲದೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಯಿತು. ರೈತರು ಅರೆಬೆತ್ತಲೆ ಪ್ರತಿಭಟನೆ ಮಾಡುವ ಮೂಲಕ ಬಾರೋಕೋಲು ಚಾಟಿ ಬೀಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಅಥಣಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ರೈತ ಮುಖಂಡ ಶಿವಾನಂದ ಖೋತ ಹಾಗೂ ಶಬ್ಬೀರ್ ಸಾತಬಚ್ಚೇ ನೇತೃತ್ವದ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ರಾಜಕೀಯ ಮುಖಂಡರು ಮತ್ತು ದಲಿತ ಮುಖಂಡರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಭಾಗವಹಿಸಿ ಪ್ರತಿಭಟನೆಗೆ ನೈತಿಕ ಬೆಂಬಲ ಸೂಚಿಸಿದರು.ರಸ್ತೆ ಮೇಲೆ ಅಡುಗೆ ತಯಾರಿಸಿದ ರೈತ ಮಹಿಳೆಯರು:

ಅಥಣಿ ಪಟ್ಟಣದ ಬಸವೇಶ್ವರ, ಶಿವಯೋಗಿ ವೃತ್ತ ಮತ್ತು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ರೈತ ಸಂಘಟನೆಯ ಮುಖಂಡರು ರಸ್ತೆಯಲ್ಲಿಯೇ ಉಪಹಾರ ಮತ್ತು ಊಟ ತಯಾರಿಸಿ ಆಹಾರ ಸೇವಿಸುವ ಮೂಲಕ ಇದು ಸಾಂಕೇತಿಕ ಹೋರಾಟವಲ್ಲ, ಅಹೋರಾತ್ರಿ ಮತ್ತು ನಿರಂತರ ನಡೆಸುವ ಸತ್ಯಾಗ್ರಹ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರೆ. ಪಟ್ಟಣದಲ್ಲಿ ಅಷ್ಟೇ ಅಲ್ಲ ಜಮಖಂಡಿಯ ರಸ್ತೆಯಲ್ಲಿನ ಘಟನಟ್ಟಿ ಗ್ರಾಮದಲ್ಲಿ, ಗೋಕಾಕ ರಸ್ತೆಯ ದರೂರು ಸೇತುವೆ ಮೇಲೆ ರೈತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಒಂದು ಸುತ್ತಿನ ಮಾತುಕತೆ ನಡೆಸಿ ₹3150, ₹3200 ದರ ಕೊಡಿಸುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆ. ಆದರೆ, ಇದಕ್ಕೆ ನಮ್ಮದು ಸಮ್ಮತಿ ಇಲ್ಲ, ಪ್ರತಿ ಟನ್ ಕಬ್ಬಿಗೆ ₹8000 ಲಾಭಗಳಿಸುತ್ತಿರುವ ಕಾರ್ಖಾನೆಗಳು ರೈತರಿಗೆ ಕನಿಷ್ಠ ರೈತರಿಗೆ ಕನಿಷ್ಠ ₹3500 ದರ ಕೊಡಲೇಬೇಕು. ಅಲ್ಲಿಯವರೆಗೆ ಕಾರ್ಖಾನೆಗಳನ್ನು ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.ವ್ಯಾಪಾರ ವಹಿವಾಟ ಬಂದ್

ರೈತ ಸಂಘಟನೆಗಳು ಕರೆ ನೀಡಿದ ಅಥಣಿ ಬಂದ್‌ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಳಗ್ಗೆ ಸಾರಿಗೆ ಸಂಚಾರ ಸ್ಥಗಿತವಾಗಿದ್ದರಿಂದ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪರದಾಡಿದ ಪ್ರಸಂಗ ಕಂಡು ಬಂತು. ಅಥಣಿ ಸಾರಿಗೆ ಘಟಕದಲ್ಲಿ ಯಾವುದೇ ಬಸ್‌ಗಳು ಸಂಚಾರವಾಗದೆ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಒಂದು ದಿನ ಈ ರೀತಿ ಕಳೆದು ಹೋಯಿತು, ಆದರೆ, ನಾಳೆಯ ದಿನ ಹೇಗೆ ಎಂಬ ಚಿಂತೆ ಎಲ್ಲ ವ್ಯಾಪಾರಸ್ಥರಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಸರ್ಕಾರ ಬೇಗನೆ ರೈತರ ಬೇಡಿಕೆಯನ್ನು ಇತ್ಯರ್ಥ ಮಾಡಬೇಕು ಎಂಬುದು ಸಾರ್ವಜನಿಕರು, ವರ್ತಕರು ಅಗ್ರಹಿಸಿದ್ದಾರೆ.ಅನ್ನದಾತನ ಶಾಪಕ್ಕೆ ಗುರಿಯಾಗಬೇಡಿ

ದೇಶಕ್ಕೆ ಅನ್ನ ನೀಡುವ ರೈತನ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರಿಗೆ ಬೆಳೆದ ಬೆಳೆಗಳಿಗೆ ಸೂಕ್ತ ದರ ಸಿಗದೇ ಇರುವುದು ದೊಡ್ಡ ಅನ್ಯಾಯ. ದೇಶದಲ್ಲಿ ಶೇ.80ರಷ್ಟು ರೈತರಿದ್ದರೆ ಶೇ.10ರಷ್ಟು ಇರುವ ಉದ್ಯಮಿಗಳು ಮತ್ತು ರಾಜಕಾರಣಿಗಳು ಇವರನ್ನು ಆಳುವಂತಾಗಿದೆ. ರೈತ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬಂತೆ ರೈತನ ಶಾಪಕ್ಕೆ ಸರ್ಕಾರಗಳು ಗುರಿಯಾಗಬಾರದು. ಕೂಡಲಿ ಅವರ ಕಬ್ಬಿಗೆ ನ್ಯಾಯಯುತ ಬೆಲೆಯನ್ನು ನೀಡಬೇಕು.

-ಅಮರೇಶ್ವರ ಮಹಾರಾಜರು,

ಕವಲಗುಡ್ಡ.

ಅಧಿಕಾರದ ಆಸೆ ಬಿಟ್ಟು, ರೈತರಿಗೆ ನ್ಯಾಯ ಕೊಡಿ

ರೈತರು ಕಬ್ಬಿನ ಬೆಲೆಗೆ ಯೋಗ್ಯ ದರ ನೀಡುವಂತೆ ಪ್ರತಿಭಟನೆ ನಡೆಸಿದರೇ ಅತ್ತ ಮುಖ್ಯಮಂತ್ರಿಗಳು, ಸಚಿವರು ಮತ್ತು ಶಾಸಕರು ತಮ್ಮ ಕುರ್ಚಿಗಳಿಗಾಗಿ ಗುದ್ದಾಡುತ್ತಿದ್ದಾರೆ. ರೈತರು 6 ದಿನಗಳಿಂದ ಹೋರಾಟ ಸರ್ಕಾರ ಸ್ಪಂದನೆ ನೀಡದೆ ಇರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರದ ಆಸೆಯನ್ನು ಬಿಟ್ಟು, ಮೊದಲು ದೇಶಕ್ಕೆ ಅನ್ನ ನೀಡುವ ಕಬ್ಬಿಗೆ ಯೋಗ್ಯ ಬೆಲೆ ನೀಡಲು ಸರ್ಕಾರ ಮುಂದಾಗಬೇಕು.

-ಮಹೇಶ ಕುಮಟಳ್ಳಿ,
ಮಾಜಿ ಶಾಸಕ ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರು ನಡೆಸುತ್ತಿರುವ ಪ್ರತಿಭಟನೆ 6ನೇ ದಿನಕ್ಕೆ ಕಾಲಿಟ್ಟರು ಇನ್ನು ಕಣ್ಣು ಮುಚ್ಚಿಕೊಂಡು ಕೂತಿದ್ದಾರೆ. ಕೂಡಲು ಸರ್ಕಾರ ರೈತರ ಕಣ್ಣೀರು ಉರಿಸಲು ಮುಂದಾಗಬೇಕು. ಇಲ್ಲವಾದರೂ ಪ್ರತಿಭಟನೆ ಸ್ವರೂಪ ಬದಲಾಗುತ್ತಿದೆ. ಅದಕ್ಕೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ.

-ಜಗನ್ನಾಥ ಬಾಮನೆ, ಕನ್ನಡಪರ ಹೋರಾಟಗಾರ.