ಸರ್ಕಾರ ಬೀಳಿಸುವುದಾಗಿದ್ದರೆ ನಾನೇ ನೇತೃತ್ವ ವಹಿಸ್ತಿದ್ದೆ: ಶಾಸಕ ರಮೇಶ ಜಾರಕಿಹೊಳಿ

| Published : Nov 23 2024, 01:16 AM IST / Updated: Nov 23 2024, 12:28 PM IST

ಸರ್ಕಾರ ಬೀಳಿಸುವುದಾಗಿದ್ದರೆ ನಾನೇ ನೇತೃತ್ವ ವಹಿಸ್ತಿದ್ದೆ: ಶಾಸಕ ರಮೇಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬೀಳಿಸುವ ಮನಸ್ಸು ಮಾಡಿದ್ದರೆ ಅದರ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತಿದ್ದೆ, ಆದರೆ ನಮಗ್ಯಾರಿಗೂ ಸರ್ಕಾರ ಬೀಳಿಸುವ ಉದ್ದೇಶ ಇಲ್ಲ

  ಅಥಣಿ :  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿಯವರು ಒಬ್ಬ ಶಾಸಕನಿಗೆ ₹50 ಕೋಟಿ ನೀಡಿ ಖರೀದಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬೀಳಿಸುವ ಮನಸ್ಸು ಮಾಡಿದ್ದರೆ ಅದರ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತಿದ್ದೆ, ಆದರೆ ನಮಗ್ಯಾರಿಗೂ ಸರ್ಕಾರ ಬೀಳಿಸುವ ಉದ್ದೇಶ ಇಲ್ಲ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಶುಕ್ರವಾರ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಅವರು ಬಿಜೆಪಿಗೆ ಬರುವ ಇಚ್ಛೆ ವ್ಯಕ್ತಪಡಿಸಿದ್ದರೂ ಕೂಡ ನಾನೇ ಈ ಸರ್ಕಾರದ ಅಧಿಕಾರ ಅವಧಿ ಮುಗಿಯುವವರೆಗೆ ಅಲ್ಲಿಯೇ ಇರುವಂತೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.

ಬಸನಗೌಡ ಪಾಟೀಲ ಯತ್ನಾಳ ಮತ್ತು ನನ್ನ ನೇತೃತ್ವದಲ್ಲಿ ಬರುವ 25ರಿಂದ ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಪಕ್ಷದಿಂದಲೇ ಪ್ರತ್ಯೇಕವಾಗಿ ಅಭಿಯಾನ ನಡೆಸುತ್ತೇವೆ. ಆದರೆ, ರಾಜ್ಯಾಧ್ಯಕ್ಷ ವಿಜಯೇಂದ್ರ ರಚಿಸಿರುವ ತಂಡದಲ್ಲಿ ನಾವು ಭಾಗಿಯಾಗಲ್ಲ. ನಾವು ಪ್ರತ್ಯೇಕ ತಂಡ ರಚಿಸಿಕೊಂಡು ಅಭಿಯಾನ ನಡೆಸುತ್ತೇವೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವವನ್ನ ನಾವು ಮೊದಲಿನಿಂದಲೂ ಒಪ್ಪಿಕೊಂಡಿಲ್ಲ. ಅದರ ಬಗ್ಗೆ ಪದೇ ಪದೆ ಹೇಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ಮಾಜಿ ಶಾಸಕರಾದ ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ, ಬಿಜೆಪಿ ಮುಖಂಡ ಧರೆಪ್ಪ ಟಕ್ಕಣ್ಣವರ, ಅಪ್ಪಾಸಾಹೇಬ ಅವತಾಡೆ, ಸಿದ್ದಪ್ಪ ಮುದುಕಣ್ಣವರ ಇತರರು ಉಪಸ್ಥಿತರಿದ್ದರು.