ಸಾರಾಂಶ
ಇಂಡಿ : ಇಂಡಿ ಜಿಲ್ಲೆ ತಡವಾದರೂ, ಜಿಲ್ಲೆಯ ವಾತಾವರಣ ಸೃಷ್ಟಿ ಮಾಡಲಾಗಿದೆ. ಸುಮಾರು 35 ವರ್ಷಗಳಿಂದ ತಾಲೂಕಿನ ಜನರು ಮತ ನೀಡಿ ಆಶೀರ್ವಾದ ಮಾಡಿದ್ದರಿಂದ ಮತಕ್ಷೇತ್ರವನ್ನು ಸರ್ವವಿಧದಲ್ಲಿ ಅಭಿವೃದ್ಧಿ ಮಾಡುವುದರ ಮೂಲಕ ಋಣಭಾರ ಕಡಿಮೆ ಮಾಡಿಕೊಂಡಿದ್ದೇನೆ. ಆಲಮಟ್ಟಿ ಅಣೆಕಟ್ಟು 524 ಎತ್ತರವಾಗಬೇಕು ಎಂಬ ಗುರಿ ಇದೆ. ಜನರು ಹಾಗೂ ರಾಜ್ಯ ಸರ್ಕಾರದ ಪರವಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲಮಟ್ಟಿ ಅಣೆಕಟ್ಟು ಎತ್ತರವಾದರೆ ಕೆಲವು ಗ್ರಾಮಗಳು ಮುಳುಗಡೆಯಾಗುತ್ತವೆ. ಅವುಗಳಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು. ಆಲಮಟ್ಟಿ ಅಣೆಕಟ್ಟು 524ಕ್ಕೆ ಎತ್ತರಿಸಿದರೆ ಇಂಡಿ ಭಾಗ ಸುಮಾರು ಶೇ.79ರಷ್ಟು ನೀರಾವರಿಯಾಗುತ್ತದೆ. ಈ ಭಾಗ ನೀರಾವರಿಯಾದರೆ ಆರ್ಥಿಕ ಬೆಳವಣಿಗೆಯಿಂದ ತಾಲೂಕು ಬದಲಾವಣೆ ಆಗುತ್ತದೆ ಎಂದು ಹೇಳಿದರು.
ಹೈದ್ರಾಬಾದ ಕರ್ನಾಟಕ ಅಭಿವೃದ್ಧಿಪಡಿಸಲು ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿದಂತೆ ಮುಂಬೈ ಕರ್ನಾಟಕ ಅಭಿವೃದ್ಧಿಗಾಗಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಗೆ ಸರ್ಕಾರದ ಮೇಲೆ ಒತ್ತಡ ಹೆರಲಾಗುತ್ತದೆ. ಪ್ರಾದೇಶಿಕ ಅಸಮಾನತೆ ತೊಲಗಿಸಲು ಸಿಎಂ ಸಿದ್ದರಾಮಯ್ಯನವರು ಉತ್ತರ ಕರ್ನಾಟಕ ಭಾಗಕ್ಕೆ ನೀರಾವರಿ ಯೋಜನೆಗಳಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿದ್ದಾರೆ. ಅಪ್ಪರ್ ಕೃಷ್ಣಾ ಯೋಜನೆ ರಾಷ್ಟ್ರೀಯ ಯೋಜನೆ ಆದಾಗ ಮಾತ್ರ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲು ಸಾಧ್ಯ. ಹೀಗಾಗಿ ಕೇಂದ್ರ ಸರ್ಕಾರ ಅಪ್ಪರ್ ಕೃಷ್ಣಾ ಯೋಜನೆಗಳು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು. ನರ್ಮದಾಕ್ಕೆ ಅವಕಾಶ ಕೊಟ್ಟಂತೆ ಕೃಷ್ಣೆಯ ಯೋಜನೆಗಳು ನೀಡಬೇಕು ಎಂದರು.
10 ವರ್ಷದ ಹಿಂದಿನ ಚಿತ್ರಣ ಮೆಲುಕು ಹಾಕಿದರೆ, ಇಂಡಿ ಮತಕ್ಷೇತ್ರ ಅಭಿವೃದ್ಧಿಯತ್ತ ಸಾಗಿದೆ. ಮಹಾರಾಷ್ಟ್ರದ ಸೋಲಾಪೂರ ಭಾಗದ ಜನಪ್ರತಿನಿಧಿಗಳ ಜತೆ ಉತ್ತಮ ಬಾಂಧವ್ಯ ಹೊಂದಿ ಭೀಮಾನದಿಗೆ ಕಾಲ ಕಾಲಕ್ಕೆ ನೀರು ಹರಿಸುವಂತೆ ಮಾಡಿದ್ದೇನೆ. ತಾಲೂಕಿನಲ್ಲಿ ಸಾಮಾಜಿಕ ನ್ಯಾಯದಡಿ ರಾಜಕಾರಣ ಮಾಡುತ್ತಿದ್ದು, ಅಧಿಕಾರಿಗಳನ್ನು ತರುವುದು ಹಾಗೂ ಕಾರ್ಯಕರ್ತರಿಗೆ ಅಧಿಕಾರ ಒದಗಿಸುವುದು ಸಾಮಾಜಿಕ ನ್ಯಾಯದಡಿ ಮಾಡುತ್ತಿದ್ದೇನೆ. ಬೂದಿಹಾಳ ಬಳಿಯಲ್ಲಿ ನಡೆಯುತ್ತಿರುವ ಸಣ್ಣ ಕೈಗಾರಿಕೆ ವಸಾಹತು ಕಾಮಗಾರಿ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ನಾನು ಶಾಸಕನಾದ ಮೊದಲ ಬಾರಿಗೆ ನಡೆದ ಸದನಲ್ಲಿ ವಿಜಯಪುರ ಜಿಲ್ಲೆಗೆ 371ಜೆ ಮೀಸಲು ದೊರಕಿಸಿಕೊಡಲು ಒತ್ತಾಯಿಸಿದ್ದೇನೆ. ಹಿಂದೆ ನಮ್ಮನಾಳಿದ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ವಿಜಯಪುರ ಜಿಲ್ಲೆ 371ಜೆ ದಿಂದ ವಂಚಿತಗೊಂಡಿದೆ. ನಾನು ವಿದೇಶದಲ್ಲಿ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ನಗರಾಭಿವೃದ್ಧಿ ಸಚಿವರು, ಅಧಿಕಾರಿಗಳು ಇಂಡಿಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿದಕ್ಕಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸಿ ಅನುರಾಧಾ ವಸ್ತ್ರದ, ಡಿವೈಎಸ್ಪಿ ಜಗದೀಶ, ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ಇಒ ಡಾ.ಕನ್ನೂರ, ಪುರಸಭೆ ಮುಖ್ಯಾಧಿಕಾರಿ ಸಿದ್ರಾಯ ಕಟ್ಟಿಮನಿ, ಕೃಷಿ ಇಲಾಖೆ ಅಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕೆ ಅಧಿಕಾರಿ ಎಚ್.ಎಸ್.ಪಾಟೀಲ, ಎಇಇ ಎಸ್.ಆರ್.ಮೆಂಡೆಗಾರ, ದಯಾನಂದ ಮಠ, ಶಿವಾಜಿ ಬನಸೋಡೆ ಇತರರು ಇದ್ದರು.