ನಾನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡುವ ಬದಲು ನಿಮ್ಮದೆ ಅಧಿಕಾರವಿದೆ. ಸ್ಥಳಕ್ಕೆ ಅಧಿಕಾರಿಗಳನ್ನೇ ಕರೆದುಕೊಂಡು ಬಂದರೆ ನಾನೇ ನಿಂತು ಸರ್ವೇ ನಡೆಸಿ ಒತ್ತುವರಿಯಾಗಿರುವುದು ಸಾಬೀತುಪಡಿಸಿದೆ ಅಲ್ಲೇ ಒತ್ತುವರಿ ಬಿಟ್ಟುಕೊಡುತ್ತೇವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಭೂಮಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡುವ ಬದಲು ಅಧಿಕಾರಿಗಳನ್ನು ಸ್ಥಳಕ್ಕೆ ಕರೆ ತಂದರೆ ನಾನೇ ನಿಂತು ಸರ್ವೇ ಮಾಡಿಸುತ್ತೇನೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ರೈತಸಂಘದ ಅಧ್ಯಕ್ಷರ ಆರೋಪಕ್ಕೆ ತಿರುಗೇಟು ನೀಡಿದರು.

ತಾಲೂಕಿನ ಎಲೆಕೆರೆ ಗ್ರಾಮದ ಸಮೀಪ ಜೆಡಿಎಸ್ ಮುಖಂಡ, ಉದ್ಯಮಿ ಕೆಂಚನಹಳ್ಳಿ ಕುಮಾರ್ ಆರಂಭಿಸಿರುವ ಜೆಡಿಎಸ್ ಪಕ್ಷದ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಕಚೇರಿ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಗೋಮಾಳ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ರೈತ ಸಂಘದ ಅಧ್ಯಕ್ಷ ವಿಜಯಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಮಾಜಿ ಸಚಿವರು, ನಾನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡುವ ಬದಲು ನಿಮ್ಮದೆ ಅಧಿಕಾರವಿದೆ. ಸ್ಥಳಕ್ಕೆ ಅಧಿಕಾರಿಗಳನ್ನೇ ಕರೆದುಕೊಂಡು ಬಂದರೆ ನಾನೇ ನಿಂತು ಸರ್ವೇ ನಡೆಸಿ ಒತ್ತುವರಿಯಾಗಿರುವುದು ಸಾಬೀತುಪಡಿಸಿದೆ ಅಲ್ಲೇ ಒತ್ತುವರಿ ಬಿಟ್ಟುಕೊಡುತ್ತೇವೆ ಎಂದು ಸವಾಲು ಹಾಕಿದರು.

ನಾವೇ ನಮ್ಮ ಶಾಲೆ ನಿರ್ಮಿಸಬೇಕಾದರೆ ನಮ್ಮ ಜಾಗದಲ್ಲಿ 20 ಅಡಿ ಆಳಮಾಡಿ ಮಣ್ಣು ತೆಗೆದು ಹೊರಕ್ಕೆ ಹಾಕಿ ನಂತರ ಶಾಲೆ ನಿರ್ಮಿಸಿದ್ದೇವೆ. ಸರ್ಕಾರಿ ಗೋಮಾಳದಲ್ಲಿ ಮಣ್ಣು ತೆಗೆಯುವ ದರ್ದು ನಮಗಿಲ್ಲ. ಕನಗನಹಳ್ಳಿಯಲ್ಲಿ ಸೋಲಾರ್ ಪ್ಲಾಂಟ್ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ನಿಮಗೆ ರೈತರ ಮೇಲೆ ಕಳಕಳಿ ಇದ್ದರೆ 1500 ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿ ವಿದ್ಯುತ್ ಕೊಡಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ. ರೈತಸಂಘದ ಅಧ್ಯಕ್ಷರೇ ನಿಂತು ಬಳಕೆದಾರರ ಸಂಘದ ಜತೆಗೆ ಅಗ್ರಿಮೆಂಟ್ ಮಾಡಿಸಿಕೊಟ್ಟರೆ ನಮ್ಮ ಸಹಮತವಿದೆ, ಮೊದಲು ಆ ಕೆಲಸ ಮಾಡಲಿ ಎಂದರು.

ಪವರ್ ಪ್ಲಾಂಟ್‌ನಿಂದ ಚಿನಕುರಳಿ ಪವರ್ ಸ್ಟೇಷನ್‌ಗೆ ಲೈನ್ ಹೋಗುವ ಮಾರ್ಗದಲ್ಲಿ ಇರುವ ರೈತರಿಗೆ ಪರಿಹಾರ ನೀಡಿ ನಂತರ ಕೆಲಸ ಆರಂಭಿಸಲಿ ಎನ್ನುವುದು ನನ್ನ ಒತ್ತಾಯ. ಚಿನಕುರಳಿ ಮಂಜೂರಾಗಿದ್ದ ಠಾಣೆಯನ್ನು ಕ್ಯಾತನಹಳ್ಳಿಗೆ ವರ್ಗಾವಣೆಯಾಗಿಲ್ಲ ಎಂಬುದಾಗಿ ಹೇಳುತ್ತೀರಿ. ಠಾಣೆಯನ್ನು ರದ್ದುಪಡಿಸಲಾಗಿದೆ ಎಂದು ಆದೇಶವಿದೆಯಲ್ಲ ನಿಮಗೆ ಅದಕ್ಕಿಂತ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು.

ನನ್ನ ಮೇಲೆ ರೈತ ಸಂಘದ ಅಧ್ಯಕ್ಷರು ಮಾಡಿರುವ ಆರೋಪದಲ್ಲಿ ಯಾವುದೇ ತಿರುಳು ಇಲ್ಲ. ಬೇಕಿದ್ದರೆ ಯಾವುದೇ ತನಿಖೆ ನಡೆಸಿದರು ನಾವು ಎದುರಿಸಲು ಸಿದ್ದನಿದ್ದೇವೆ. ಜಿಲ್ಲೆಯಿಂದ ಜೆಡಿಎಸ್ ಪಕ್ಷವನ್ನು ಓಡಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಸನದಲ್ಲಿ ನಡೆದ ಸಮಾವೇಶದಲ್ಲಿ ಯಾರಿಗೆ ಉಳಿಗಾಲವಿಲ್ಲ ಎಂಬುದದನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಇದೇ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಸಿ.ಪುಟ್ಟಸ್ವಾಮೀಗೌಡ (ಹೊಸಕೋಟೆಪುಟ್ಟಣ್ಣ), ಮಾಜಿ ನಿರ್ದೇಶಕ ಶ್ಯಾದನಹಳ್ಳಿ ಚಲುವರಾಜು, ಟಿಎಪಿಸಿಎಂಎಸ್ ನಿರ್ದೇಶಕ ವಡ್ಡರಹಳ್ಳಿ ವಿ.ಎಸ್.ನಿಂಗೇಗೌಡ, ಮುಖಂಡರಾದ ಕೆಂಚನಹಳ್ಳಿ ಕುಮಾರ್, ಹಾರೋಹಳ್ಳಿ ಶ್ವೇತ ಉಮೇಶ್, ವೆಂಕಟೇಶ್ ಸೇರಿದಂತೆ ಜೆಡಿಎಸ್ ಪಕ್ಷದ ಹಲವು ಮುಖಂಡರು ಇದ್ದರು.