ಭಾಷೆ ಬಲಗೊಳ್ಳದಿದ್ದರೆ ಕನ್ನಡದ ಅಸ್ತಿತ್ವ ನಾಶ: ಹಳೆಕೋಟೆ ರಮೇಶ್‌ ಕಳವಳ

| Published : Mar 30 2024, 12:45 AM IST

ಭಾಷೆ ಬಲಗೊಳ್ಳದಿದ್ದರೆ ಕನ್ನಡದ ಅಸ್ತಿತ್ವ ನಾಶ: ಹಳೆಕೋಟೆ ರಮೇಶ್‌ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಮಟ್ಟದಲ್ಲಿ ಕನ್ನಡ ಭಾಷೆ ಬಲಿಷ್ಠವಾಗಿ ಬಲಗೊಳ್ಳದಿದ್ದರೆ ನಮ್ಮ ನಾಡ ಭಾಷೆಗೆ ಸ್ಥಾನಮಾನ ಇಲ್ಲದಂತಾಗಿ ಕನ್ನಡದ ಅಸ್ತಿತ್ವವೆ ನಾಶವಾಗುವ ಆತಂಕವಿದೆ ಎಂದು ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್‌ ಕಳವಳ ವ್ಯಕ್ತಪಡಿಸಿದರು.

ಮೂಡಿಗೆರೆ: ರಾಷ್ಟ್ರಮಟ್ಟದಲ್ಲಿ ಕನ್ನಡ ಭಾಷೆ ಬಲಿಷ್ಠವಾಗಿ ಬಲಗೊಳ್ಳದಿದ್ದರೆ ನಮ್ಮ ನಾಡ ಭಾಷೆಗೆ ಸ್ಥಾನಮಾನ ಇಲ್ಲದಂತಾಗಿ ಕನ್ನಡದ ಅಸ್ತಿತ್ವವೆ ನಾಶವಾಗುವ ಆತಂಕವಿದೆ ಎಂದು ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್‌ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶುಕ್ರವಾರ ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವುದಕ್ಕೆ ಸರ್ಕಾರ ಮುಕ್ತ ಅವಕಾಶ ಕೊಡಬೇಕು. ಎಲ್ಲವೂ ಹೋರಾಟದಿಂದ ಆಗಬೇಕಾದ ಪ್ರಕ್ರಿಯೆಯಲ್ಲ ಎಂಬುದನ್ನು ಆಡಳಿತ ವರ್ಗತಿಳಿದುಕೊಳ್ಳಬೇಕು. ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಸಾಹಿತ್ಯದ ಪರಂಪರೆ ಸಾಮರ್ಥ್ಯವನ್ನು ಸರ್ಕಾರ ಗೌರವಿಸಬೇಕು. ಭಾಷೆಗಳು ಮೇಲು ಅಲ್ಲ, ಕೀಳು ಅಲ್ಲ ಅದೊಂದು ಸಂವಹನ ಸಾಧನ ಎಂಬುದನ್ನು ತಿಳಿದು ಆಡಳಿತ ವ್ಯವಸ್ಥೆಯಲ್ಲಿ ವ್ಯವಹಾರಿಸಬೇಕೆ ಹೊರತು ಪ್ರಬುದ್ಧ ಪ್ರಾದೇಶಿಕ ಭಾಷೆಯನ್ನು ಹಿಂದಕ್ಕೆ ಸರಿಸುವುದು ಸರಿಯಲ್ಲ ಎಂದರು.

ನಮ್ಮ ಭಾಷೆ ಮೇಲೆ ನಿರಂತರವಾಗಿ ನಡೆಯುವ ಸವಾರಿ ಬಗ್ಗೆ ಕನ್ನಡಿಗರು ಚಿಂತಿಸಬೇಕಾಗಿದೆ. ರಾಜ್ಯದ ಕೆಲವು ಕಚೇರಿಗಳಲ್ಲಿ ಇಂಗ್ಲಿಷ್‌ನಲ್ಲಿ ವ್ಯವಹರಿಸುತ್ತಿರುವುದು ದುರಂತ, ಕನ್ನಡನಾಡಿನಲ್ಲಿ ಜನಸಾಮಾನ್ಯರು ವ್ಯವಹರಿಸುವ ಯಾವುದೆ ಕ್ಷೇತ್ರವಿರಲಿ ಅಲ್ಲಿ ಮೊದಲು ಕನ್ನಡಭಾಷೆಗೆ ಪ್ರಥಮ ಆದ್ಯತೆ ಕೊಡಬೇಕು. ಆನಂತರ ಬೇರೆ ಭಾಷೆಯನ್ನು ಕಡ್ಡಾಯಗೊಳಿಸಲಿ ಎಂದು ತಿಳಿಸಿದರು.

ಕನ್ನಡ ಸಿರಿವಂತ ಭಾಷೆ, ಕನ್ನಡ ಸಾಹಿತ್ಯಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡದ ಎಲ್ಲಾ ಪ್ರಕಾರಗಳಲ್ಲೂ ಸಾಹಿತ್ಯ ರಚನೆಯಾಗಿದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಸಾಕಷ್ಟು ಪುರಸ್ಕಾರಗಳು ಮಾತ್ರ ವಲ್ಲದೆ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿದೆ. ಅರ್ಹತೆ ಇರುವ ಇನ್ನೂ ಹಲವು ಮಂದಿ ಕನ್ನಡಿಗ ಪಂಡಿತರಿದ್ದಾರೆ ಎಂದರು. ಶ್ರೀಸಾಮಾನ್ಯನು ಭಾಷೆ ಮತ್ತು ಸಾಹಿತ್ಯದ ಸವಿ ಸವಿಯಂತಾಗಬೇಕು. ಯುವ ಪೀಳಿಗೆಯನ್ನು ಕೂಡ ಕನ್ನಡ ಭಾಷೆ ಆಕರ್ಷಿಸಿಕೊಳ್ಳುವಂತಾಗಬೇಕು. ಬದುಕಿಗೆ ಹತ್ತಿರವಾಗಿರುವ ಮತ್ತು ಭವಿಷ್ಯ ರೂಪಿಸಿಕೊಳ್ಳಲು ಪ್ರೇರಕವಾಗುವ ಸಾಹಿತ್ಯದ ಅಗತ್ಯವಿದೆ ಎಂದರು. 29 ಕೆಸಿಕೆಎಂ 5ಮೂಡಿಗೆರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್‌ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು.