ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮನಸ್ಸು ಪಾವಿತ್ರ್ಯತೆ ಹಾಗೂ ಭಕ್ತಿಯಿಂದ ಕೂಡಿದ್ದರೆ ಬದುಕಿನಲ್ಲಿ ಉತ್ತಮ ಫಲಗಳ ಜೊತೆಗೆ ಮುಕ್ತಿಯು ಪ್ರಾಪ್ತಿಯಾಗಲಿದೆ ಎಂದು ವೈದ್ಯನಾಥಪುರ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಗುಳ್ಳಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಕಲ್ಲೇಶ್ವರ ದೇವಾಲಯದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕಿನಲ್ಲಿ ಮುಕ್ತಿ ಕಾಣದ ಜೀವ ಹಾಗೂ ಜೀವನ ಶೂನ್ಯ ಎಂದು ಆಶೀರ್ವಚನ ನೀಡಿದರು. ಭಗವಂತನನ್ನು ತಿಳಿದುಕೊಳ್ಳಲು ಅಥವಾ ಪರಿಚಯಿಸಿಕೊಳ್ಳಲು ಗುರು ಬೇಕು. ಹಣವಂತರು ದಾನ ಮಾಡಿದರೆ ಬಡವರು ಧ್ಯಾನ ಮಾಡಬೇಕು. ಇಲ್ಲಿ ಭಗವಂತನಿಲ್ಲದೆ ಯಾರ ಬದುಕು ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಮಾತನಾಡಿ, ಭಾರತೀಯ ಸಂಸ್ಕೃತಿಯು ಹಿಂದೂ ಧರ್ಮದ ತಳಹದಿಯ ಮೇಲೆ ನಿಂತಿದ್ದು ದೈನಂದಿನ ಬದುಕು, ಸಂಸ್ಕಾರ ಹಾಗೂ ಸಂಸ್ಕೃತಿಯೇ ಸನಾತನ ಧರ್ಮವಾಗಿ ಸ್ಥಾಪನೆಗೊಂಡಿದೆ. ಹಿಂದೂ ಧರ್ಮ ನಿನ್ನೆ ಮೊನ್ನೆಯದಲ್ಲ. ಯುಗಯುಗಗಳಲ್ಲಿ ಆಯಾ ಕಾಲಘಟ್ಟದ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿಯಾಗಿದೆ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ದೇಗುಲದ ನಿರ್ಮಾಣಕ್ಕೆ ಹೇಮಾವತಿ ಸಕ್ಕರೆ ಕಾರ್ಖಾನೆ ಸೇರಿದಂತೆ ವಿವಿಧ ಮೂಲಗಳಿಂದ ೫೦ ಲಕ್ಷ ರು. ಅನುದಾನ ಕಲ್ಪಿಸಲಾಗಿದೆ. ಮತ್ತಷ್ಟು ಅನುದಾನ ಕಲ್ಪಿಸಿ ದೇವರ ಕಾರ್ಯ ಸೇರಿದಂತೆ ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದರು.ನಾನು ಚುನಾವಣೆ ವೇಳೆ ಬರುವ ವ್ಯಕ್ತಿಯಲ್ಲ, ಜನಗಳ ಮಧ್ಯ ನಿಂತು ಅವರ ಕಷ್ಟಗಳಿಗೆ ಸ್ಪಂದಿಸುತ್ತೇನೆ. ರಾಜಕೀಯವೇ ಬೇರೆ ಜನಗಳ ಸಂಕಷ್ಟಗಳಿಗೆ ನೆರವಾಗುವ ವಿಚಾರವೇ ಬೇರೆ. ತಾಲೂಕಿನ ನೀರಾವರಿ ಯೋಜನೆಗೆ ಹಗಲಿರುಳು ಶ್ರಮಿಸಿರುವ ಫಲವಾಗಿ ೨೦೦ಕ್ಕೂ ಹೆಚ್ಚು ಕೆರೆಕಟ್ಟೆಗಳಿಗೆ ಕಳೆದ ೨-೩ ವರ್ಷಗಳಿಂದ ನೀರು ತುಂಬಿಸಲಾಗುತ್ತಿದೆ. ಇದರಿಂದ ವ್ಯಾಪ್ತಿಯ ಅಂತರ್ಜಲ ಚೇತರಿಕೆ ಕಂಡಿದೆ. ಕೊಳವಿ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಏರಿಕೆಯಾಗಿದ್ದು ರೈತರ ಬದುಕು ಹಸನಾಗಿದೆ ಎಂದು ತಿಳಿಸಿದರು.
ಕೆರೆಯ ಮೂಲ ಉಳಿಸುವುದು ಹಾಗೂ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜಮೀನುಗಳಿಗೆ ಮಣ್ಣು ಸಾಗಿಸುವ ಬರದಲ್ಲಿ ಕೆರೆ ಅಂಗಳದ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಅತಿ ಹೆಚ್ಚು ಆಳವಾಗಿ ಮಣ್ಣು ತೆಗೆಯಲಾಗಿದೆ. ಇದರಿಂದ ಸಂಗ್ರಹವಾಗುವ ನೀರು ಹೆಚ್ಚು ದಿನಗಳು ಉಳಿಯುವುದಿಲ್ಲ. ದಯವಿಟ್ಟು ಕೆರೆ ಮೂಲ ಉಳಿಸುವಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ತೆಂಡೆಕೆರೆ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಹಳ್ಳಿ ಮಂಜೇಗೌಡ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಂಜುಂಡೇಗೌಡ, ನುಗ್ಗೇಹಳ್ಳಿ ಸೊಸೈಟಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ದೇಗುಲದ ಶಿಲ್ಪಿ ರಮೇಶ್, ಅರ್ಚಕರಾದ ಶಂಭುಲಿಂಗ ಸ್ವಾಮೀಜಿ, ಪ್ರಮುಖರಾದ ರಾಜೇಶ್, ಧರ್ಮಣ್ಣ, ಶಂಕರ್, ಕೃಷ್ಣ ಗೌಡ, ರಘು, ಸತೀಶ್, ಹರೀಶ್, ಯುವರಾಜ್, ಸ್ವಾಮಿ, ಮಂಜುನಾಥ್, ದೀಪು, ಶಿವಣ್ಣ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಪಾಲ್ಗೊಂಡಿದ್ದರು.