ಮಂತ್ರಿಸ್ಥಾನ ಕೊಟ್ಟರೇ ಬಾರಾಣೆ, ಕೊಡದಿದ್ದರೇ ಚಾರಾಣೆ

| Published : Jul 18 2024, 01:37 AM IST

ಸಾರಾಂಶ

ನನಗೆ ಮಂತ್ರಿಸ್ಥಾನ ಅವಶ್ಯಕತೆ ಇಲ್ಲ. ಜನರ ಒತ್ತಡಕ್ಕೆ ಮಣಿದು ಮಂತ್ರಿಸ್ಥಾನ ಕೇಳಿದ್ದೇನೆ. ಮಂತ್ರಿಸ್ಥಾನಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಕೊಟ್ಟರೇ ಬಾರಾಣೆ, ಕೊಡದಿದ್ದರೇ ಚಾರಾಣೆ ಎಂದು ಸಂಸದ ರಮೇಶ ಜಿಗಜಿಣಗಿ ಅಸಮಧಾನ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಇಂಡಿ

ನನಗೆ ಮಂತ್ರಿಸ್ಥಾನ ಅವಶ್ಯಕತೆ ಇಲ್ಲ. ಜನರ ಒತ್ತಡಕ್ಕೆ ಮಣಿದು ಮಂತ್ರಿಸ್ಥಾನ ಕೇಳಿದ್ದೇನೆ. ಮಂತ್ರಿಸ್ಥಾನಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಕೊಟ್ಟರೇ ಬಾರಾಣೆ, ಕೊಡದಿದ್ದರೇ ಚಾರಾಣೆ ಎಂದು ಸಂಸದ ರಮೇಶ ಜಿಗಜಿಣಗಿ ಅಸಮಧಾನ ಹೊರಹಾಕಿದರು.

ಪಟ್ಟಣದ ಶ್ರೀಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಇಂಡಿ ಮಂಡಲದ ವತಿಯಿಂದ ಬುಧವಾರ ಹಮ್ಮಿಕೊಂಡ ಮಂಡಲ ಕಾರ್ಯಕಾರಣಿ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಮೇಶ ಜಿಗಜಿಣಗಿ ಸಾಯುತ್ತಾರೆಂದು ಜಿಲ್ಲೆಯ ಕೆಲವೊಬ್ಬರು ಅಪಪ್ರಚಾರ ನಡೆಸಿದರು. ನಾನು 82 ವರ್ಷದವರೆಗೆ ಸಾಯುವುದಿಲ್ಲ. ಚುನಾವಣೆಯಲ್ಲಿ ಟಿಕೆಟ್‌ ವಿಷಯದಲ್ಲಿಯೂ ಕಾಡಿದ್ದಾರೆ. ಟಿಕೆಟ್‌ ವಿಷಯದಲ್ಲಿ ಮನಸಿಗೆ ಹಚ್ಚಿಕೊಂಡು ಆರೋಗ್ಯದಲ್ಲಿ ಸಮಸ್ಯೆಯಾಯಿತು. ರಾಷ್ಟ್ರೀಯ ನಾಯಕರು ಟಿಕೆಟ್‌ ನೀಡಿ ಉಪಕಾರ ಮಾಡಿದರು. ಆರೋಗ್ಯದಿಂದ ಚೇತರಿಸಿಕೊಂಡು, ತಲೆಯಲ್ಲಿ ರಕ್ತಸುರಿಸುತ್ತ ಕಾರ್ಯಕರ್ತರು, ಮುಖಂಡರೊಂದಿಗೆ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೇನೆ. ಕಾರ್ಯಕರ್ತರು, ಮತದಾರರು ನನ್ನ ಕೈ ಬಿಡಲಿಲ್ಲ. ನಾನು ಇರುವವರೆಗೂ ಇಂಡಿ ಸೇರಿದಂತೆ ಜಿಲ್ಲೆಯ ಮತದಾರರ ಋಣ ಮರೆಯುವುದಿಲ್ಲ ಎಂದು ಭಾವುಕರಾದರು.ಮತದಾರರು, ಕಾರ್ಯಕರ್ತರ ಶ್ರಮದಿಂದ ನಾನು 7 ಬಾರಿ ಚುನಾಚಣೆಯಲ್ಲಿ ಗೆದ್ದಿದ್ದೇನೆ. ಕಾರ್ಯಕರ್ತರೇ ನಾಯಕರು. ನರನಾಡಿಗಳಲ್ಲಿ ರಕ್ತ ಹರಿಯುತ್ತಿದ್ದಂತೆ ಕಾರ್ಯಕರ್ತರು ಶಕ್ತಿ ನೀಡಿ ಬೆಳೆಸಿದ್ದಾರೆ. ನಾನೆಂದು ಬಿಜೆಪಿ, ಕಾರ್ಯಕರ್ತರನ್ನು ಭೇದ-ಭಾವ ಮಾಡುವುದಿಲ್ಲ. ನನ್ನ ಗೆಲುವಿಗೆ ಶ್ರಮಿಸಿದ ಎಲ್ಲರ ಕೆಲಸ, ಕಾರ್ಯಗಳನ್ನು ಕೈಲಾದಮಟ್ಟಿಗೆ ಮಾಡಿಕೊಡುವೆ ಎಂದು ಭರವಸೆ ನೀಡಿದರು.ಇಂದಿನ ಜಗತ್ತಿನಲ್ಲಿ ಸಮಾಜಗಳ ಸಂಘರ್ಷದ ನಡುವೆ ದೀರ್ಘಕಾಲ ರಾಜಕಾರಣ ಮಾಡುವುದು ಸುಲಭವಲ್ಲ. ಅವಮಾನಗಳನ್ನು ಸಹಿಸಿಕೊಂಡು ಬೆಳೆದುಬಂದಿದ್ದೇನೆ. ಉಪಕಾರ ಮಾಡಿದವರನ್ನು ಸ್ಮರಿಸಿಕೊಳ್ಳುವುದು, ಅವರ ಸಹಾಯಕ್ಕೆ ಬರುವುದು ಧರ್ಮ. ಹೀಗಾಗಿ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲರ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಅಣೆಕಟ್ಟು ನಿರ್ಮಾಣವಾಯಿತು. ಜನರು ಭೂಮಿ ಕಳೆದುಕೊಂಡರು. ಅಣೆಕಟ್ಟಿನಿಂದ ನೀರು ಎತ್ತಿ ಕಾಲುವೆಗಳಿಗೆ ಹರಿಯಬೇಕಾದರೇ ವಿದ್ಯುತ್‌ ಅವಶ್ಯಕತೆ ಕಂಡಿತು. ಅಂದಿನ ಕಾಂಗ್ರೆಸ್‌ ಸರ್ಕಾರದ ಸುಶೀಲಕುಮಾರ ಶಿಂಧೆ ಬಳಿ ಹೋಗಿ ₹40 ಸಾವಿರ ಕೋಟಿ ವೆಚ್ಚದಲ್ಲಿ ಕೂಡಗಿಯಲ್ಲಿ ವಿದ್ಯುತ್‌ ಸ್ಥಾವರ ಮಂಜೂರು ಮಾಡಿಸಿದ್ದೇನೆ. ಕೂಡಗಿಯಲ್ಲಿ ವಿದ್ಯುತ್‌ ಸ್ಥಾವರ ನಿರ್ಮಾಣವಾಗಿಲ್ಲದಿದ್ದರೇ ಕಾಲುವೆಗಳಿಗೆ ನೀರು ಹರಿಯುತ್ತಿರಲಿಲ್ಲ ಎಂದು ತಿಳಿಸಿದರು.ಮಾಜಿ ಎಂಎಲ್ಸಿ ಅರುಣ ಶಹಾಪುರ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರ ದುಡ್ಡು ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡದಷ್ಟು ಹೀನಾಯ ಆರ್ಥಿಕ ಸ್ಥಿತಿ ತಲುಪಿದೆ. ಲೋಕಸಭಾ ಚುನಾವಣೆಯಲ್ಲಿ ಇಂಡಿ ಮತಕ್ಷೇತ್ರದಿಂದ ಹೆಚ್ಚಿನ ಮತಗಳನ್ನು ನೀಡಿ ಇಡಿ ರಾಜ್ಯಕ್ಕೆ ಸಂದೇಶ ನೀಡಿದಕ್ಕಾಗಿ ಪಕ್ಷದ ವತಿಯಿಂದ ಇಂಡಿ ತಾಲೂಕಿನ ಕಾರ್ಯಕರ್ತರು, ಮತದಾರರಿಗೆ ಅಭಿನಂದಿಸುವುದಾಗಿ ತಿಳಿಸಿದರು.ರಮೇಶ ಜಿಗಜಿಣಗಿ ಅವರು ಯಾವುದೇ ರಾಜಕಾರಣಿಗಿಂತ ಕಡಿಮೆ ಇಲ್ಲ. ದೂರದೃಷ್ಟಿ ಇಟ್ಟುಕೊಂಡು ರಾಜಕಾರಣ ಮಾಡಿದವರು. ಜಾತಿ, ಉಪಜಾತಿ ನೋಡುವ ಇಂದಿನ ಕಾಲಘಟ್ಟದಲ್ಲಿ ಕುಗ್ರಾಮದ ದಲಿತ ಕುಟುಂಬದಿಂದ ಬಂದ ರಮೇಶ ಜಿಗಜಿಣಗಿ ಅವರು 7 ಬಾರಿ ಸಂಸದರಾಗಿ ಆಯ್ಕೆಯಾಗುವುದು ಸುಮ್ಮನೆ ಮಾತಲ್ಲ ಎಂದರು.ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಮಳುಗೌಡ ಪಾಟೀಲ, ಜೆಡಿಎಸ್‌ ಮುಖಂಡ ಬಿ.ಡಿ.ಪಾಟೀಲ, ಮರೇಪ್ಪ ಗಿರಣಿವಡ್ಡರ ಮಾತನಾಡಿದರು.ರಾಜಕುಮಾರ ಸಗಾಯಿ, ಸಿದ್ದಲಿಂಗ ಹಂಜಗಿ, ಎಸ್‌.ಎ.ಪಾಟೀಲ, ಅಶೋಕಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಅನೀಲ ಜಮಾದಾರ, ಎಸ್‌.ಎಸ್‌.ಮಜ್ಜಗಿ, ಮುತ್ತಪ್ಪ ಪೊತೆ, ದೇವೆಂದ್ರ ಕುಂಬಾರ, ಅಪ್ಪುಗೌಡ ಪಾಟೀಲ, ಅಯುಬ್‌ ನಾಟೀಕಾರ, ಮಹಾದೇವ ರಜಪೂತ, ಚನ್ನುಗೌಡ ಪಾಟೀಲ, ಶ್ರೀಪತಿಗೌಡ ಬಿರಾದಾರ, ಅನೀಲಗೌಡ ಬಿರಾದಾರ, ರಾಚು ಬಡಿಗೇರ, ಹಣಮಂತ್ರಾಯಗೌಡ ಪಾಟೀಲ, ವಿಜು ಮಾನೆ, ಭೀಮರಾಯ ಮದರಖಂಡಿ, ರಮೇಶ ಧರೆನವರ, ಶಿವು ಬಗಲಿ, ಸಂಜು ದಶವಂತ, ವೆಂಕಟೇಶ ಕುಲಕರ್ಣಿ, ರಾಮಸಿಂಗ ಕನ್ನೊಳ್ಳಿ, ಮಹೇಶ ಹೂಗಾರ, ಮಲ್ಲು ವಾಲಿಕಾರ, ದತ್ತಾ ಬಂಡೇನವರ, ಸಚಿನ ಬೊಳೆಗಾಂವ, ಸಿದ್ದಪ್ಪ ಗುನ್ನಾಪೂರ, ಬತ್ತುಸಾಹುಕಾರ ಹಾವಳಗಿ, ಗಿರಮಲ್ಲಗೌಡ ಬಿರಾದಾರ, ಭೀಮರಾಯಗೌಡ ಬಿರಾದಾರ, ಸಿಕಿಂದರ ಬೊರಾಮಣಿ, ಮಂಜು ದೇವರ, ಸುನಂದಾ ವಾಲಿಕಾರ, ವಿಜಯಲಕ್ಷ್ಮಿ ರೂಗಿಮಠ, ಸುನಂದಾ ಗಿರಣಿವಡ್ಡರ, ಅನಸೂಯಾ ಮದರಿ, ರಾಜಶೇಖರ ಯರಗಲ್ಲ, ರವಿ ವಗ್ಗಿ, ಎಸ್‌.ಜೆ.ವಾಲಿಕಾರ, ಬಾಳು ಮುಳಜಿ ಮೊದಲಾದವರು ಇದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಇಂಡಿ ಮಂಡಲದ ವತಿಯಿಂದ ಸಂಸದ ರಮೇಶ ಜಿಗಜಿಣಗಿ ಅವರನ್ನು ಸನ್ಮಾನಿಸಲಾಯಿತು.ಕಾಂಗ್ರೆಸ್‌ ಸರ್ಕಾರ ಪತನವಾದರೇ ಸರ್ಕಾರ ಮಾಡುವುದಿಲ್ಲ:

ರಾಜ್ಯ ಕಾಂಗ್ರೆಸ್‌ ಸರ್ಕಾರ ಯಾವಾಗ ಮುಳುಗುತ್ತದೆಯೋ ಗೊತ್ತಿಲ್ಲ. ಒಂದು ವೇಳೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನವಾದರೇ ಬಿಜೆಪಿ ರಾಜ್ಯದಲ್ಲಿ ಸರ್ಕಾರ ಮಾಡುವುದಿಲ್ಲ. ಚುನಾವಣೆ ಎದುರಿಸಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತಾರೆ ಎಂದು ತಿಳಿಸಿದರು.ರಾಜ್ಯ ಕಾಂಗ್ರೆಸ್‌ ಸರ್ಕಾರ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಜನರನ್ನು ಮತಕ್ಕಾಗಿ ಬಳಕೆ ಮಾಡಿಕೊಂಡು ಅವರ ಅಭಿವೃದ್ಧಿಗಾಗಿ ಇಟ್ಟ ಅನುದಾನ ದುರುಪಯೋಗಪಡಿಸಿಕೊಳ್ಳುವುದಾದರೇ ದಲಿತರು,ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮೇಲೆ ಕಾಂಗ್ರೆಸ್‌ನವರಿಗೆ ಎಷ್ಟು ಪ್ರೀತಿ, ಕಾಳಜಿ ಇದೇ ಎಂಬುವುದು ಎದ್ದು ತೊರುತ್ತದೆ. ಕಾಂಗ್ರೆಸ್‌ನವರು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದರೇ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಿ ಎಂದು ಸವಾಲ ಹಾಕಿದರು.ನನ್ನ ಮಕ್ಕಳನ್ನು ರಾಜಕಾರಣಕ್ಕೆ ತಂದು ಕುಟುಂಬ ರಾಜಕಾರಣ ಮಾಡಲಿಲ್ಲ. ಮುಂದೆಯೂ ನನ್ನ ಮಕ್ಕಳನ್ನು ರಾಜಕಾರಣಕ್ಕೆ ತರಲಾರೆ. ರಾಜಕಾರಣದಲ್ಲಿ ನಾನು ಬಹಳ ನೋವು, ಅವಮಾನ ಅನುಭವಿಸಿದ್ದೇನೆ. ಆ ನೋವು ನನ್ನ ಮಕ್ಕಳಿಗೆ ಬರಬಾರದು. ಚೆಂದನ ಸಂಸಾರದಲ್ಲಿ ನನ್ನ ಮಕ್ಕಳು ಇದ್ದಾರೆ. ಹೀಗಾಗಿ ಮಕ್ಕಳನ್ನು ರಾಜಕಾರಣಕ್ಕೆ ತರಲಾರೆ.

- ರಮೇಶ ಜಿಗಜಿಣಗಿ, ಸಂಸದರು.