ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜನ ಜಾನುವಾರು ಕುಡಿಯುವ ನೀರಿಗಾಗಿ ಬತ್ತಿ ಹೋಗಿರುವ ಭೀಮಾ ನದಿಗೆ ಉಜನಿಯಿಂದ 5 ಟಿಎಂಸಿ ನೀರು ಹರಿಸಬೇಕು ಎಂದು ಆಗ್ರಹಿಸಿ ಶುರುವಾಗಿರುವ ಹೋರಾಟ 13ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಗಾರ ಶಿವಕುಮಾರ್ ನಾಟೀಕಾರ್ ಅಫಜಲ್ಪುರದ ಅಂಬೇಡ್ಕರ್ ಪುತ್ಥಳಿ ಮುಂದೆ ಶುರು ಮಾಡಿರುವ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ.ಏತನ್ಮಧ್ಯೆ ಶಿವಕುಮಾರ್ ಮಾತನಾಡಿದ್ದು ನೀರಿಗಾಗಿ ನಿರಶನ ನಡೆಯುತ್ತಿದೆ. ಉಜನಿಯಿಂದ ನೀರು ಬಿಟ್ಟಿದ್ದಾರೆ, ಅದು ಮಣ್ಣೂರು ತಲುಪಿದೆ, ಇತ್ತ ನಾರಾಯಣಪುರದಿಂದಲೂ 1 ಟಿಎಂಸಿ ನೀರು ಹರಿ ಬಿಡುವ ಭರವಸೆ ಸಿಕ್ಕಿದೆ. ನೀರು ಹರಿಬಿಡುವ ಆದೇಶದೊಂದಿಗೆ ಸ್ಥಳೀಯ ಶಾಸಕರು ಅಫಜಲ್ಪುರಕ್ಕೆ ಬರೋರಿದ್ದಾರೆ. ಆದೇಶ ಪ್ರತಿ ಕೈ ಸೇರಿದ ಮರುಕ್ಷಣವೇ ತಾವು ನಿರಶನ ಅಂತ್ಯಗೊಳಿಸೋದಾಗಿ ಘೋಷಿಸಿದ್ದಾರೆ.
ಉಜನಿಯಿಂದ ಭೀಮೆಗೆ ಕಳೆದ 15 ದಿನದಿಂದ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ಉಜನಿ ನೀರು ಅದಾಗಲೇ ಮಹಾರಾಷ್ಟ್ರದ ಹಿಳ್ಳಿ ಬಾಂದಾರು ದಾಟಿಕೊಂಡು ಮಣ್ಣೂರು ತಲುಪಿವೆ. ಇಲ್ಲಿರುವ ಭುಯ್ಯಾಂರ್ ಬಾಂದಾರು ತುಂಬಿ ನೀರು ಹೊರಗೆ ಹರಿದಲ್ಲಿ ಇನ್ನೆರಡು ದಿನದಲ್ಲಿ ಅಫಜಲ್ಪುರ ತಲುಪುವ ಸಾಧ್ಯತೆಗಳಿವೆ.ಇತ್ತ ರಾಜ್ಯ ಸರ್ಕಾರ ಸಹ ಕೃಷ್ಣಾ ನದಿಯಿಂದ ನಾರಾಣಪುರ ಜಲಾಶಯದಿಂದ 1 ಟಿಎಂಸಿ ನೀರನ್ನು ಇಂಡಿ ಶಾಖಾ ಕಾಲುವೆಯಿಂದ ಬಳಗಾನೂರ ಕ್ಯಾನಲ್ ಮೂಲಕ ವಿತರಣಾ ಕಾಲುವೆಗೆ ಹರಿಸಿ ಅಲ್ಲಿಂದ ಭೀಮಾ ನದಿ ಸೇರುವಂತೆ ಮಾಡುವುದಾಗಿ ಭರವಸೆ ನೀಡಿದೆ.
ಅಫಜಲ್ಪುರ ಶಾಸಕ ಎಂವೈ ಪಾಟೀಲರು ಈ ಆದೇಶದೊಂದಿಗೆ ನಾಳೆ ಅಫಜಲ್ಪುರ ತಲುಪಿದ್ದೇ ಆದಲ್ಲಿ ಶಿವಕುಮಾರ್ ನಾಟೀಕಾರ್ ತಮ್ಮ 14 ದಿನಗಳ ಸುದೀರ್ಘ ಆಮರಣ ನಿರಶನ ಅಂತ್ಯಗೊಳಿಸಲಿದ್ದಾರೆ.ಕೋರ್ಟ್‌ಲ್ಲಿ ಪ್ರಶ್ನಿಸಿ ಎಂದು ಹಿರೇಮಠ ಸಲಹೆ: ಹೋರಾಟದ ಟೆಂಟ್‌ಗೆ ಭೇಟಿ ನೀಡಿ ಮಂಗಳವಾರ ಮಾತನಾಡಿರುವ ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಅವರು, ಭೀಮಾ ನದಿ ಸಹ್ಯಾದ್ರಿ ಪರ್ವತ ಶ್ರೇಣಿಯ ಪ್ರಮುಖ ನದಿಯಾಗಿದ್ದು, ಇದು ವರ್ಷದ ಎಲ್ಲಾ ದಿನಗಳಲ್ಲಿಯೂ ನೀರಿನಿಂದ ಕೂಡಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಮಹಾರಾಷ್ಟ್ರದ್ದು ಎಂದು ಷರತ್ತು ಹಾಕಿಯೇ ನೀರು ಹಂಚಿಕೆ ಮಾಡಿದ್ದರೂ ಕೂಡಾ ಮಹಾರಾಷ್ಟ್ರ ಸರ್ಕಾರ ಈ ನದಿಗುಂಟ ಅಕ್ರಮ ಅನೇಕ ಬಾಂದಾರು, ನೀರಾವರಿ ಯೋಜನೆ ಕೈಗೆತ್ತಿಕೊಂಡು ತನ್ನ ಪಾಲಿಗಿಂತ ಹೆಚ್ಚಿನ ನೀರು ಕಬಳಿಸಿದೆ. ಇದರಿಂದಲೇ ಭೀಮಾ ಬತ್ತಿ ಬರಿದಾಗುತ್ತಿದೆ ಎಂದು ದೂರಿದರು.
ಬಚಾವತ್ ತೀರ್ಪನ್ನೇ ಉಲ್ಲಂಘಿಸುವ ಕೆಲಸ ಮಹಾರಾಷ್ಟ್ರ ಸರ್ಕಾರ ಮಾಡಿದ್ದರೂ ನಾವು ಕೇಳಿಲ್ಲ. ಮೊದಲು ನಾವು ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿ ನ್ಯಾಯ ಪಡಯಬೇಕು. ಅಂದಾಗ ಭೀಮಾ ನದಿ ಜೀವಂತ ಉಳಿಯುತ್ತದೆ. ಹೋರಾಟದಿಂದ 1, 2 ಟಿಎಂಸಿ ನೀರು ಭಿಕ್ಷೆ ಪಡೆಯಬಹುದೇ ವಿನಹಃ ನಮ್ಮ ನೀರಿನ ಸಮಸ್ಯೆ ನೀಗೋದಿಲ್ಲವೆಂದರು.ಭೀಮಾ ನದಿ ನೀರಿನ ಬಳಕೆಗೆ ರಾಜ್ಯ ಸರ್ಕಾರ ಆಸಕ್ತಿಯನ್ನೇ ತೋರಿಲ್ಲ, ಈ ನದಿ ನೀರಲ್ಲಿ ನಮ್ಮ ಪಾಲಿನ 45 ಟಿಎಂಸಿ ನೀರಿನ ಬಳಕೆಗೆ ನಾವು ಮುಂದಾಗದ ಕಾರಣ ಅದು 15 ಟಿಎಂಸಿಗೆ ಬಂದು ತಲುಪಿದೆ. ನಾವು ಅಚ್ಚುಕಟ್ಟು ಪ್ರದೇಶ ವಿಸ್ತರಿಸಿ ದಾಖಲೆ ತೋರದೆ ಹೋದಲ್ಲಿ ನಮ್ಮ ಪಾಲಿನ ನೀರಿನ ಪ್ರಮಾಣ ಇನ್ನೂ ತಗ್ಗುವ ಆಂಕವಿದೆ ಎಂದು ಹಿರೇಮಠ ಕಳವಳ ಹೊರಹಾಕಿದರು.
ಭೀಮಾ ನೀರಿನ ಬಳಕೆ ಮೇಲೆ ರಾಜಕೀಯಾ ಇಚ್ಛಾಶಕ್ತಿ ಕರಿನೆರಳು ಹರಡಿದೆ. ಇದು ಹೋಗಬೇಕಾದಲ್ಲಿ ನಾವೆಲ್ಲರೂ ಸೇರಿಕೊಂಡು ನಮ್ಮ ಜನನಾಯಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಬೇಕು, ಅಂದಾಗ ಮಾತ್ರ ನಮ್ಮ ಸಮಸ್ಯೆಗೆ ಪರಿಹಾರ ಸಾಧ್ಯವೆಂದು ಹಿರೇಮಠ ಹೇಳಿದರು.ಅಫಜಲ್ಪುರ ಪಟ್ಟಣದ ವರ್ತಕರು, ಅಡತ್ ವ್ಯಾಪಾರಿಗಳು, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಾಂದಕವಠೆ, ವಿವಿದ ಸಂಘಟನೆಗಳ ಮುಖಡರು, ಮಹಿಲಾ ಸಂಘಗಳ ಸಹೋದರಿಯರು ಇಂದಿನ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಿಂದಗಿ ಮಾಜಿ ಶಾಸಕ ಶರಣಪ್ಪ ಸುಣಗಾರ್ ಭೇಟಿ ನೀಡಿ ಬೆಂಬಲ ಸೂಚಿಸಿದರು.