ಬರಿದಾಗುತ್ತಿದೆ ಜಕ್ಕಲಮೊಡಗು ಜಲಾಶಯ, ಮುಂದೇನು?

| Published : Mar 27 2024, 01:03 AM IST

ಬರಿದಾಗುತ್ತಿದೆ ಜಕ್ಕಲಮೊಡಗು ಜಲಾಶಯ, ಮುಂದೇನು?
Share this Article
  • FB
  • TW
  • Linkdin
  • Email

ಸಾರಾಂಶ

ಜಲಾಶಯದ ಅಂಗಳ ಮತ್ತು ಜಲಾಶಯಕ್ಕೆ ನೀರು ಹರಿದು ಬರುವ ಕಾಲುವೆಗಳು, ಮಾರ್ಗಗಳಲ್ಲಿ ಹೂಳು ತುಂಬಿದೆ. ಈ ಹೂಳಿನ ಕಾರಣದಿಂದಾಗಿಯೂ ಕೂಡ ನೀರು ಸಂಗ್ರಹ ಸಾಮರ್ಥ್ಯ ಕುಸಿದಿದೆ. ಇತ್ತೀಚೆಗೆ ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ನಡೆಸಿದ ಸಭೆಯಲ್ಲಿ ಜಕ್ಕಲಮಡುಗು ಜಲಾಶಯದಲ್ಲಿ ತುಂಬಿರುವ ಹೂಳಿನ ಬಗ್ಗೆ ಪ್ರಸ್ತಾಪಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಮಳೆಯಿಲ್ಲದೇ ಬರ ಕಾಡುತ್ತಿರುವುದು ಒಂದು ಕಡೆಯಾದರೆ, ನಗರಕ್ಕೆ ನೀರು ಸರಬರಾಜು ಮಾಡುವ ಜಕ್ಕಲಮೊಡಗು ಜಲಾಶಯದಲ್ಲಿ ನೀರಿನಮಟ್ಟ ದಿನದಿಂದ ದಿನಕ್ಕೆ ಕುಸಿತವಾಗುತ್ತಿರುವುದು ಇನ್ನೊಂದೆಡೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಎರಡೂ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಜಲಾಶಯವಾಗಿರುವ ಜಕ್ಕಲಮೊಡಗುವಿನಲ್ಲಿ ಗರಿಷ್ಠ 58 ಅಡಿಯಷ್ಟು ನೀರು ಸಂಗ್ರಹಣವಾಗುವ ಸಾಮರ್ಥ್ಯ ಹೊಂದಿದೆ. ಆದರೆ, ಈಗ ನೀರಿನ ಮಟ್ಟ 26 ಅಡಿಗೆ ಕುಸಿದಿದೆ.

ಜಕ್ಕಲಮಡಗು ಜಲಾಶಯದಲ್ಲಿ ಸದ್ಯ 2 ಸಾವಿರ ಎಂಎಲ್‌ಡಿ ಪ್ರಮಾಣದಲ್ಲಿ ನೀರು ಲಭ್ಯವಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಎರಡೂ ನಗರಗಳಲ್ಲಿರುವ ತಲಾ 31 ವಾರ್ಡ್‌ಗಳಿಗೆ ಬಡಾವಣೆ ವಾರು ವಾರಕ್ಕೆ ಒಮ್ಮೆ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ.

2022ರ ಆಗಸ್ಟ್‌ನಲ್ಲಿ ಜಕ್ಕಲಮೊಡಗು ಜಲಾಶಯ ನಾಲ್ಕು ಬಾರಿ ತುಂಬಿ ಕೋಡಿ ಹರಿದಿತ್ತು. ಆದರೆ, ಈ ಬಾರಿ ಮಳೆಯ ತೀವ್ರ ಕೊರತೆಯಿಂದಾಗಿ ಜಲಾಶಯದಲ್ಲಿ ಶೇಖರಣೆಯಾಗಿರುವ ನೀರನ್ನು ಮುಂದಿನ 4 ತಿಂಗಳ ಕಾಲ ಮಾತ್ರ ಬಳಸಬಹುದಾಗಿದೆ.

ಮಳೆ ಕೊರತೆಯಿಂದ ಜಲಾಶಯಕ್ಕೆ ಹರಿದು ಬರುವ ನೀರು ಕಡಿಮೆಯಾಗುತ್ತಿರುವುದರಿಂದ ನಗರದಲ್ಲಿ ನೀರಿನ ಬವಣೆ ನಿವಾರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್.ಎಂ.ವಿಶ್ವೇಶ್ವರಯ್ಯ ಅವರ ನಕಾಶೆಯಂತೆ ನಿರ್ಮಿಸಿದ್ದ ಈ ಜಲಾಶಯದ ಮಟ್ಟವನ್ನು 2007 ರಲ್ಲಿ ಸಮ್ಮಿಶ್ರ ಸರ್ಕಾರ 48.75 ಅಡಿ ಎತ್ತರಕ್ಕೆ ಏರಿಸಲು ಅನುಮೋದನೆ ನೀಡಿ ಕಾಮಗಾರಿ ಆರಂಭಿಸಿತ್ತು. ನಂತರ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಾಮಗಾರಿ ಪೂರ್ಣಗೊಂಡಿತು. ಜಲಾಶಯವು 4,390 ದಶಲಕ್ಷ ನೀರು ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ಜಕ್ಕಲಮಡುಗು ಜಲಾಶಯದ ನೀರನ್ನು ಚಿಕ್ಕಬಳ್ಳಾಪುರ ನಗರಕ್ಕೆ ಶೇ. 65ರಷ್ಟು ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಶೇ 35ರಷ್ಟು ಬಳಸಿಕೊಳ್ಳಲಾಗುತ್ತಿದೆ.ಜಲಾಶಯದ ಅಂಗಳ ಮತ್ತು ಜಲಾಶಯಕ್ಕೆ ನೀರು ಹರಿದು ಬರುವ ಕಾಲುವೆಗಳು, ಮಾರ್ಗಗಳಲ್ಲಿ ಹೂಳು ತುಂಬಿದೆ. ಈ ಹೂಳಿನ ಕಾರಣದಿಂದಾಗಿಯೂ ಕೂಡ ನೀರು ಸಂಗ್ರಹ ಸಾಮರ್ಥ್ಯ ಕುಸಿದಿದೆ. ಇತ್ತೀಚೆಗೆ ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ನಡೆಸಿದ ಸಭೆಯಲ್ಲಿ ಜಕ್ಕಲಮಡುಗು ಜಲಾಶಯದಲ್ಲಿ ತುಂಬಿರುವ ಹೂಳಿನ ಬಗ್ಗೆ ಪ್ರಸ್ತಾಪಿಸಲಾಯಿತು.ಜಲಾಶಯದ ನೀರು ಸಂಗ್ರಹಣ ಸಾಮರ್ಥ್ಯ ಮತ್ತು ಹೂಳು ತೆಗೆಸುವ ವಿಚಾರವಾಗಿ ಚರ್ಚಿಸಲು ಇತ್ತೀಚೆಗೆ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಪಾಲ್ಗೊಂಡಿದ್ದರು. ಆ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆಯಾದ ನಂತರ ಹೂಳು ತೆಗೆಸಲು ಕ್ರಿಯಾ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದ್ದಾರೆ. ಸದ್ಯ ಜಕ್ಕಲಮಡುಗು ಜಲಾಶಯದ ಹೂಳು ತೆಗೆಯಲು ಕ್ರಿಯಾ ಯೋಜನೆ ಸಿದ್ಧವಾಗಬೇಕಿದೆ ಅಷ್ಟೇ.

ಹೂಳು ತೆಗೆದು ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಿದರೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಾಗುತ್ತದೆ. ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳ ಜನಸಂಖ್ಯೆ ಹೆಚ್ಚುತ್ತಿದೆ. ಜಕ್ಕಲಮಡುಗು ಜಲಾಶಯವನ್ನು ಹೊರತುಪಡಿಸಿ ಕುಡಿಯುವ ನೀರಿಗೆ ಬೇರೆ ಮೂಲಗಳಿಲ್ಲ. ಆದ್ದರಿಂದ ಜಲಾಶಯದ ಹೂಳು ತೆಗೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಅವಳಿ ನಗರಗಳ ಜೀವನಾಡಿ...!:

ಅಂದಾಜು 90 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಚಿಕ್ಕಬಳ್ಳಾಪುರ ನಗರವು ಹೊಂದಿದೆ. ಸುಮಾರು 9500 ಕೊಳಾಯಿ ಸಂಪರ್ಕಗಳಿವೆ.ನಗರದ ಜನರಿಗೆ ನಿತ್ಯ 5 ಎಂಎಲ್‌ಡಿ ಪ್ರಮಾಣದಲ್ಲಿ ಜಕ್ಕಲ ಮಡುಗು ಜಲಾಶಯದಿಂದ ನೀರನ್ನು ಪೂರೈಸಲಾಗುತ್ತಿದೆ.1.40 ಲಕ್ಷ ಜನಸಂಖ್ಯೆ ಹೊಂದಿರುವ ದೊಡ್ಡಬಳ್ಳಾಪುರ ನಗರದಲ್ಲಿ 14,500 ಕೊಳಾಯಿ ಸಂಪರ್ಕಗಳಿವೆ. ಪ್ರತಿ ದಿನ ನಗರಕ್ಕೆ 13 ಎಂ.ಎಲ್‌.ಡಿ (ದಶಲಕ್ಷ ಲೀಟರ್‌) ನೀರಿನ ಅಗತ್ಯವಿದೆ. ಆದರೆ, ಜಕ್ಕಲಮೊಡಗು ಜಲಾಶಯದಿಂದ ಪ್ರತಿ ದಿನ ಕೊಳಾಯಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ಜಲಾಶಯದ ನೀರು ಪೂರೈಕೆಯಾಗದಿದ್ದರೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತದೆ. ನಗರದ ವಾರ್ಡ್‌ಗಳಿಗೆ ಈಗ ಪೂರೈಸುತ್ತಿರುವಂತೆಯೇ ಮುಂದೆಯೂ ವಾರಕ್ಕೆ ಒಮ್ಮೆ ನೀರು ಪೂರೈಸಿದರೆ ಚಿಕ್ಕಬಳ್ಳಾಪುರಕ್ಕೆ ಸಂಗ್ರಹದಲ್ಲಿರುವ ನೀರನ್ನು ಕನಿಷ್ಠ 130 ದಿನಗಳು ಮತ್ತು ದೊಡ್ಡಬಳ್ಳಾಪುರಕ್ಕೆ60 ದಿನಗಳವರೆಗೆ ಬಳಸಬಹುದು ಎಂದು ಜಲಮಂಡಳಿಯು ನಗರಸಭೆಗಳಿಗೆ ತಿಳಿಸಿದೆ. ಈ ಜಲಾಶಯದ ನೀರು ಬಳಕೆಗೆ ಮುಂದೆ ಯಾವ ರೀತಿ ದೊರೆಯಲಿದೆ ಎನ್ನುವುದು ಮಳೆಯನ್ನು ಅವಲಂಬಿಸಿದೆ.