ನಿವೇಶನ ಸ್ವಚ್ಛತೆ ಕಾಪಾಡದಿದ್ದರೆ ಮುಟ್ಟುಗೋಲು

| Published : Jun 15 2024, 01:06 AM IST

ನಿವೇಶನ ಸ್ವಚ್ಛತೆ ಕಾಪಾಡದಿದ್ದರೆ ಮುಟ್ಟುಗೋಲು
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರವನ್ನು ಹಸಿರು ಯಕ್ತ, ಕಸ ಮುಕ್ತ , ಪ್ಲಾಸ್ಟಿಕ್ ಮುಕ್ತ ಮಾಡಿ ಸ್ವಚ್ಚ ಚಿಕ್ಕಬಳ್ಳಾಪುರ ಮಾಡ ಬೇಕೆನ್ನುವ ಉದ್ದೇಶದಿಂದ ಈಗಾಗಲೇ ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಜನತೆಗೆ, ವ್ಯಾಪಾರಿಗಳಿಗೆ ಮನವರಿಕೆ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದ ರಸ್ತೆಗಳಲ್ಲಿ, ಖಾಲಿ ನಿವೇಶನಗಳಲ್ಲಿ, ಎಲ್ಲೆಂದರಲ್ಲಿ ಕಸ ಬಿಸಾಡದೆ ನಗರವನ್ನು ಸ್ವಚ್ಛವಾಗಿ ಇಟ್ಟು ಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ನಗರದ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮೂಲಕ ಕ್ಷೇತ್ರದ ನಗರದ ವಾರ್ಡ್ ಗಳ ಭೇಟಿ ಮಾಡುವ ಮೂಲಕ ಎಲ್ಲ ಮತದಾರರ ಸಮಸ್ಯೆಗಳನ್ನ ಆಲಿಸಿದ ಬಳಿಕ ಅವರು, 16 ನೇ ವಾರ್ಡ್ ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಿವೇಶನ ಮಾಲೀಕರ ಜವಾಬ್ದಾರಿ

ನಗರದಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಕಸತುಂಬಿರುವ ಬಗ್ಗೆ ಆಯಾ ಮಾಲೀಕರೆ ಎಚ್ಚರವಹಿಸಬೇಕು. ಕಸ ಸ್ವಚ್ಚತೆಗೆ ಮುಂದಾಗಬೇಕು. ಇಲ್ಲದಿದ್ದರೆ ನಗರಸಭೆ ವತಿಯಿಂದ ಎರಡು- ಮೂರು ಭಾರಿ ನೋಟಿಸ್ ನೀಡುತ್ತೇವೆ. ಆಗಲೂ ಅವರೇನಾದರೂ ನಿರ್ಲಕ್ಷ್ಯವಹಿಸಿದರೆ ನಿವೇಶನ ಮುಟ್ಟುಗೊಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.16ನೇ ವಾರ್ಡ್‌ ನಿವಾಸಿಗಳ ಭೇಟಿ ಮಾಡಿ ಅವರ ಸಮಸ್ಯೆಗಳಾದ ಮನೆ ಹಕ್ಕುಪತ್ರ ,ಮಾಸಾಶನ, ಪಡಿತರ ಚೀಟಿ ಮತ್ತು ಮೂಲಭೂತ ಸೌಕರ್ಯಗಳಾದ ನೀರು, ಚರಂಡಿ, ಬೀದಿ ಬದಿಯ ವಿದ್ಯತ್‌ ದೀಪ, ರಸ್ತೆ ರಿಪೇರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಾರ್ಡ್‌ಗಳ ಪರ್ಯಟನೆ ನಡೆಸಿದ್ದೇನೆ. ಮಳೆ ಬಂದರೆ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿಗಳ ಶುಚಿತ್ವಕ್ಕೆ ಆದ್ಯತೆ ನೀಡಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ

ಚುನಾವಣಾ ಪೂರ್ವ ತಿಳಿಸಿದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ್ದೇನೆ. ತಮ್ಮ ಸ್ವಂತ ಹಣದಿಂದ ಕ್ಷೇತ್ರದ ಸರ್ಕಾರಿ ಮತ್ತು ಅನುದಾನಿತ ಶಾಲೆ ಕಾಲೇಜುಗಳ 6500 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡಿದ್ದು, 1ರಿಂದ 10 ನೇ ತರಗತಿಯವರೆಗೆ ಸರ್ಕಾರಿ ಶಾಲೆಯ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಒಂದು ಜೊತೆ ಬಟ್ಟೆ, ಎಂಜಿನಿಯರಿಂಗ್‌ ಮತ್ತು ಮೆಡಿಕಲ್ ವ್ಯಾಸಾಂಗ ಮಾಡುತ್ತಿರುವ ಕ್ಷೇತ್ರದ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರದಂತೆ 650 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹತ್ತು ಆ್ಯಂಬುಲೆನ್ಸ್ ನೀಡಿದ್ದೇನೆ ಎಂದರು.

ಪ್ಲಾಸ್ಟಿಕ್‌ ಬಳಕೆ ಮಾಡಬೇಡಿ

ಕ್ಷೇತ್ರವನ್ನು ಹಸಿರು ಯಕ್ತ, ಕಸ ಮುಕ್ತ , ಪ್ಲಾಸ್ಟಿಕ್ ಮುಕ್ತ ಮಾಡಿ ಸ್ವಚ್ಚ ಚಿಕ್ಕಬಳ್ಳಾಪುರ ಮಾಡ ಬೇಕೆನ್ನುವ ಉದ್ದೇಶದಿಂದ ಈಗಾಗಲೇ ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಜನತೆಗೆ ಹೋಟೆಲ್ ಮಾಲಿಕರಿಗೆ ಮತ್ತು ವ್ಯಾಪಾರಿಗಳಿಗೂ ಮನವರಿಕೆ ಮಾಡಿ ಕೊಟ್ಟಿದ್ದು, ಜನರು ಆದಷ್ಟು ಮನೆಯಿಂದಲೇ ಬಟ್ಟೆ ಅಥವಾ ಸೆಣಬಿನ ಚೀಲಗಳನ್ನು ತೆಗೆದು ಕೊಂಡು ಹೋಗಿ ಸರಕು-ಸರಂಜಾಮುಗಳನ್ನು ತರಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು.

ಈ ವೇಳೆ ನಗರಸಭೆ ಪೌರಾಯುಕ್ತ ಮಂಜುನಾಥ್, ಪರಿಸರ ಅಭಿಯಂತರ ಉಮಾಶಂಕರ್, ಆಹಾರ ನೀರೀಕ್ಷಕ ನಾರಾಯಣಸ್ವಾಮಿ, ಮುಖಂಡರಾದ ಕೆ.ಎಲ್‌.ಶ್ರೀನಿವಾಸ್‌,ಪಿ.ಎಂ. ರಘು ವಿನಯ್ ಬಂಗಾರಿ, ಕುಭೇರ್ ಅಚ್ಚು, ಡ್ಯಾನ್ಸ್ ಶ್ರೀನಿವಾಸ್‌, ನಾಗಭೂಷಣ್, ಅಲ್ಲು ಅನಿಲ್,ನಗರಸಭೆ, ಕಂದಾಯ,ಆಹಾರ, ಬೆಸ್ಕಾಂ,ಆರೋಗ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳು, ಮತ್ತಿತರರು ಇದ್ದರು.