ಸಾರಾಂಶ
ಮೆರಿಟ್ ಪದ್ಧತಿ ಕೈಬಿಟ್ಟು ಸೇವಾನುಭವದ ಆಧಾರದಲ್ಲಿ ನೇಮಕಾತಿ ಮಾಡಬೇಕು. ಸೇವಾ ಭದ್ರತೆ ಒದಗಿಸಬೇಕು. ಸೇವಾ ಪ್ರಮಾಣಪತ್ರ ನೀಡಬೇಕು. ಗೌರವಧನ ಹೆಚ್ಚಿಸುವ ಜತೆಗೆ ಅದನ್ನು ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಒದಗಿಸಬೇಕು. ವರ್ಷದ 12 ತಿಂಗಳು ವೇತನ ನೀಡಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದಲ್ಲಿ ಸುಮಾರು 43 ಸಾವಿರ, ದ.ಕ. ಜಿಲ್ಲೆಯಲ್ಲಿ 900ರಷ್ಟು ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿದ್ದಾರೆ. ನಮ್ಮ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಆತ್ಮಹತ್ಯೆಯೇ ಮುಂದಿನ ದಾರಿಯಾಗಲಿದೆ ಎಂದು ಜಿಲ್ಲೆಯ ಅತಿಥಿ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅತಿಥಿ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾಮಣಿ ಕೆ., ಶಿಕ್ಷಕರಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಗೌರವಧನ ನೀಡಿಲ್ಲ. ಸಾಮಾನ್ಯ ಶಿಕ್ಷಕರ ಭಾರವನ್ನೂ ಹೊತ್ತುಕೊಂಡು ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರು ದಿನವೊಂದಕ್ಕೆ ತಲಾ 333 ರು.ನಂತೆ ಮಾಸಿಕ 10 ಸಾವಿರ ರು. ಮಾತ್ರ ಗೌರವಧನ ಪಡೆಯುತ್ತಿದ್ದಾರೆ. ಈ ವೇತನದಲ್ಲಿ ಜೀವನ ಸಾಗಿಸಲು ಕಷ್ಟವಾಗುತ್ತಿದೆ, ಹಲವು ಬಾರಿ ಮನವಿ ಅಭಿಯಾನ, ಶಾಲೆ ತೊರೆಯೋಣ ಅಭಿಯಾನದ ಮೂಲಕ ಸರ್ಕಾರದ ಗಮನ ಸೆಳೆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಹೇಳಿದರು.
ಮೆರಿಟ್ ಪದ್ಧತಿ ಕೈಬಿಟ್ಟು ಸೇವಾನುಭವದ ಆಧಾರದಲ್ಲಿ ನೇಮಕಾತಿ ಮಾಡಬೇಕು. ಸೇವಾ ಭದ್ರತೆ ಒದಗಿಸಬೇಕು. ಸೇವಾ ಪ್ರಮಾಣಪತ್ರ ನೀಡಬೇಕು. ಗೌರವಧನ ಹೆಚ್ಚಿಸುವ ಜತೆಗೆ ಅದನ್ನು ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಒದಗಿಸಬೇಕು. ವರ್ಷದ 12 ತಿಂಗಳು ವೇತನ ನೀಡಬೇಕು ಎಂದು ಆಗ್ರಹಿಸಿದರು.ಸರ್ಕಾರಿ ಶಾಲೆಗಳಲ್ಲಿ ಕ್ಲರ್ಕ್ ಹುದ್ದೆಗಳು ಬಾಕಿಯಾಗಿದ್ದು, ನೇಮಕಾತಿ ಸಂದರ್ಭ ಟಿಇಟಿ, ಸಿಇಟಿ ಪರಿಗಣನೆಯ ಬದಲು ಸೇವಾನುಭವ ಹೊಂದಿದವರಿಗೆ ಆ ಹುದ್ದೆಯನ್ನಾದರೂ ಒದಗಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ದಯಾಮಣಿ ಹೇಳಿದರು.
ಜಿಲ್ಲಾ ಸಂಘದ ಅಧ್ಯಕ್ಷೆ ಚಂದ್ರಿಕಾ, ಕೋಶಾಧಿಕಾರಿ ರೇವತಿ, ಬಂಟ್ವಾಳ ಘಟಕದ ಅಮಿತಾ, ಸದಸ್ಯೆ ಪ್ರಮೀಳಾ ಇದ್ದರು.