ಸಾರಾಂಶ
ಶಿವಮೊಗ್ಗ/ ತೀರ್ಥಹಳ್ಳಿ : ಪಟ್ಟಣದಲ್ಲಿ ನಡೆದಿರುವ 20 ಕೋಟಿ ರು. ಅನುದಾನದ ಅಭಿವೃದ್ಧಿ ಕಾಮಗಾರಿ ಮಳೆಗಾಲದಲ್ಲಿ ಸೋರಿಕೆ ಸೇರಿದಂತೆ ಸಣ್ಣಪುಟ್ಟ ದೋಷಗಳು ಬಂದಿರುವುದು ನಿಜ. ಅದನ್ನು ಸರಿಪಡಿಸುವ ಕೆಲಸ ನಡೆದಿದೆ. ಈ ಕಾಮಗಾರಿ ಬಗೆಗಿನ ಆರೋಪ ರಾಜಕೀಯ ಮನಃಸ್ಥಿತಿಯಿಂದ ಕೂಡಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದಲ್ಲಿ ಶನಿವಾರ ತುಂಗಾನದಿಗೆ ಬಾಗಿನ ಅರ್ಪಿಸಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಕ್ಷೇತ್ರಕ್ಕೆ ಒಳ್ಳೆ ಕೆಲಸ ಮಾಡೋ ಜವಾಬ್ದಾರಿ ನನ್ನದು. ಅಭಿವೃದ್ಧಿ ಸಹಿಸಲಾಗದೇ ರಾಜಕಾರಣದಲ್ಲಿ ತಪ್ಪು ಹುಡುಕುವ ಮನಃಸ್ಥಿತಿಯವರಿಂದ ಬಂದ ಆರೋಪದ ಇದು. ಹೊಸದಾಗಿ ನಿರ್ಮಿಸಲಾಗಿರುವ ಕಟ್ಟಡಗಳಲ್ಲಿ ಸಣ್ಣ ಪ್ರಮಾಣದಲ್ಲಿ ಸೋರಿಕೆ ಇದ್ದು ಈ ನ್ಯೂನತೆಯನ್ನು ಸರಿಪಡಿಸಲಾಗುವುದು.
ಒಂದೊಮ್ಮೆ ತೀರಾ ಕಳಪೆಯಾಗಿದ್ದಲ್ಲಿ ಸಂಬಂಧಿಸಿದ ಅಧಿಕಾರಿ ಮತ್ತು ಗುತ್ತಿಗೆದಾರರು ಇದರ ಹೊಣೆಯನ್ನು ಹೊರಬೇಕಾಗುತ್ತದೆ ಎಂದರು.ಈ ವರ್ಷ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರೂ ವಾಡಿಕೆಗಿಂತ ಕಡಿಮೆಯಿದೆ. ಗಾಳಿ ಮಳೆಯಿಂದಾಗಿ ತಾಲೂಕಿನಲ್ಲಿ ಹಲವಾರು ಮನೆಗಳಿಗೆ ಹಾನಿ ಸಂಭವಿಸಿದ್ದು ಸರ್ಕಾರ ದಾಖಲೆ ವಿಚಾರದಲ್ಲಿ ತಾರತಮ್ಯ ಎಣಿಸದೇ ಎಲ್ಲಾ ಸಂತ್ರಸ್ಥರಿಗೆ ಒಂದೇ ರೀತಿಯ ಮಾನದಂಡದೊಂದಿಗೆ ಸೂಕ್ತ ಪರಿಹಾರವನ್ನು ನೀಡಬೇಕು.
ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ಈ ವರ್ಷ ಮಳೆಯಿಂದಾಗಿ ತಾಲೂಕಿನಲ್ಲಿ ಬಹಳ ಮಂದಿ ಮನೆ ಕೊಟ್ಟಿಗೆಗೆ ಸಂಭವಿಸಿದ ಹಾನಿಯಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಾಖಲೆ ಇಲ್ಲದ ಸಂತ್ರಸ್ಥರು ಸೇರಿದಂತೆ ಸರ್ಕಾರ ನೀಡುವ ಪರಿಹಾರದಲ್ಲಿ ಒಂದೇ ರೀತಿಯ ಮಾನದಂಡವನ್ನು ಅನುಸರಿಸಲಾಗುತ್ತಿತ್ತು. ಹಾಲಿ ಸರ್ಕಾರ ಸೂಕ್ತ ದಾಖಲೆ ಇಲ್ಲದ ಸಂತ್ರಸ್ತರಿಗೆ ಕನಿಷ್ಠ ಪರಿಹಾರ ನೀಡುತ್ತಿದ್ದು,ಇದು ಸರಿಯಾದ ಕ್ರಮವಲ್ಲ. ಮನೆ ಹಾನಿ ಪ್ರಕರಣವನ್ನು ಸರ್ಕಾರ ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕಿದೆ ಎಂದೂ ಹೇಳಿದರು.ತಹಸಿಲ್ದಾರ್ ಜಕ್ಕನಗೌಡರ್, ತಾಪಂ ಇಓ ಎಂ. ಶೈಲಾ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಇದ್ದರು.
ಸರ್ಕಾರಿ ಕಟ್ಟಡ ಸೋರಿದ್ರೆ ನಾನೇನು ಗುತ್ತಿಗೆದಾರನಲ್ಲ, ಮೇಸ್ತ್ರಿ ಅಲ್ಲ: ಆರಗ
ಶಿವಮೊಗ್ಗ: ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕೆಲವು ಕಟ್ಟಡಗಳು ಲೀಕೇಜ್ ಆಗುವುದು ಸಹಜ. ಹಾಗಂತ ಎಲ್ಲ ಕಟ್ಟಡಗಳು ಸೋರುತ್ತಿಲ್ಲ. ಎಲ್ಲವೂ ಸುರಕ್ಷಿತವಾಗಿಯೇ ಇವೆ. ರಾಜಕಾರಣಕ್ಕಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ್ಥಹಳ್ಳಿಯ ಸರ್ಕಾರಿ ಕಟ್ಟಡಗಳು ಸೋರುತ್ತಿವೆ ಎಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ. ನಾನು ಗುತ್ತಿಗೆದಾರನೂ ಅಲ್ಲ, ಮೇಸ್ತ್ರಿಯೂ ಅಲ್ಲ ಎಂದು ಕುಟುಕಿದರು.ತಾಲೂಕು ಪಂಚಾಯಿತಿ ಕಟ್ಟಡ ಸುಮಾರು 13 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿದೆ. ಸಣ್ಣಪುಟ್ಟ ತೊಂದರೆಗಳು ಇರಬಹುದು. ಆದರೆ, ನಾನು ನಿಂತು ಕೆಲಸ ಮಾಡಿಸಲು ಸಾಧ್ಯವಿಲ್ಲ. ಮಣ್ಣು ರಸ್ತೆಗೆ ಬರಬಾರದು ಎಂದು ತಡೆಗೋಡೆ ಕಟ್ಟಿದ್ದು, ಆದರೆ ಗುಡ್ಡವೇ ಕುಸಿದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಕುರಿತು ಡೆತ್‍ನೋಟ್‍ನಲ್ಲಿ ಸಚಿವರ ಹೆಸರು ಉಲ್ಲೇಖವಾಗಿದ್ದರೂ ಕೂಡ ಎಫ್‍ಐಆರ್‌ನಲ್ಲಿ ದಾಖಲಾಗಿಲ್ಲ. ಸರ್ಕಾರ ಅವರನ್ನು ರಕ್ಷಣೆ ಮಾಡಲು ಹೊರಟಿದೆ. ಎಸ್.ಐ.ಟಿ. ಸಂಸ್ಥೆ ರಾಜ್ಯ ಸರ್ಕಾರದ್ದೇ ಆಗಿದೆ. ಸತ್ಯ ಹೇಗೆ ಹೊರಬರಲು ಸಾಧ್ಯ. ವಾಲ್ಮೀಕಿ ನಿಗಮದ ಹಣ ಬಳ್ಳಾರಿಯ ಚುನಾವಣೆಗೆ ಬಳಕೆಯಾಗಿದೆ ಎಂದು ಈಗಾಗಲೇ ಇಡಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.ಮೂಡ ಹಗರಣ ಕೂಡ ನಮ್ಮ ಮುಂದಿದೆ. ನನ್ನ ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಈಗ ಮೈತುಂಬ ಕಪ್ಪುಚುಕ್ಕೆಯೇ ಆಗಿದೆ. ಎಲ್ಲವೂ ತನಿಖೆಯಾಗಬೇಕು. ಸದನದಲ್ಲಿಯೂ ಕೂಡ ನಾವು ಇದಕ್ಕೆ ಒತ್ತಡ ಹೇರಿದ್ದೇವೆ ಎಂದು ತಿಳಿಸಿದರು.