ರಸ್ತೆ ಜಾಗ ಒತ್ತುವರಿಯಾಗಿದ್ದರೆ ವಾಸಿಗಳ ದಾಖಲೆ ಹಾಗೂ ನಗರಸಭೆ ದಾಖಲೆಗಳನ್ನು ಪರಿಶೀಲಿಸಿ. ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಲು ಪೌರಾಯುಕ್ತರು ಮತ್ತು ಎಂಜಿನಿಯರ್‌ಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಪಿ.ಹರೀಶ್ ತಾಕೀತು ಮಾಡಿದ್ದಾರೆ.
- ಶೋಭಾ ಟಾಕೀಸ್ ರಸ್ತೆ, ಪೋಸ್ಟ್ ಆಫೀಸ್ ರಸ್ತೆ ಚರಂಡಿ ಕಾಮಗಾರಿಗೆ ಸ್ಥಳೀಯರ ತಕರಾರು
- - -ಕನ್ನಡಪ್ರಭ ವಾರ್ತೆ ಹರಿಹರ
ರಸ್ತೆ ಜಾಗ ಒತ್ತುವರಿಯಾಗಿದ್ದರೆ ವಾಸಿಗಳ ದಾಖಲೆ ಹಾಗೂ ನಗರಸಭೆ ದಾಖಲೆಗಳನ್ನು ಪರಿಶೀಲಿಸಿ. ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಲು ಪೌರಾಯುಕ್ತರು ಮತ್ತು ಎಂಜಿನಿಯರ್‌ಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಪಿ.ಹರೀಶ್ ತಾಕೀತು ಮಾಡಿದರು.ನಗರದ ಶೋಭಾ ಟಾಕೀಸ್ ರಸ್ತೆ ಸುತ್ತಮುತ್ತ ಚರಂಡಿ ಕಾಮಗಾರಿ ಬಗ್ಗೆ ಸ್ಥಳೀಯ ನಿವಾಸಿಗಳು ತಕರಾರು ವ್ಯಕ್ತಪಡಿಸುತ್ತಿದ್ದ ಕಾರಣ ಶಾಸಕರು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಜಾಗ ಪರಿಶೀಲನೆ ನಡೆಸಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದೇ ದುಸ್ತರವಾಗಿದೆ. ಒತ್ತುವರಿ ಮಾಡಿಕೊಂಡಿರುವ ನಿವಾಸಿಗಳು ತಮ್ಮ ಮನೆ ಮತ್ತು ಅಂಗಡಿಗಳ ಮುಂದೆ ಚರಂಡಿ ಮತ್ತು ರಸ್ತೆ ನಿರ್ಮಿಸಲು ಹೋದ ಅಧಿಕಾರಿಗಳಿಗೆ ವಿನಾಕಾರಣ ತಕರಾರು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಈ ರಸ್ತೆಯಲ್ಲಿ 15 ದಿನಗಳಿಂದ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಕೆಲವರು ನಮ್ಮ ಜಾಗ ಎಷ್ಟಿದೆ, ಅದನ್ನು ಬಿಟ್ಟು ಚರಂಡಿ ಮಾಡಿ ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಕಾಮಗಾರಿ ತಡೆಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿನ ವಸ್ತುಸ್ಥಿತಿ ಖುದ್ದು ಪರಿಶೀಲನೆ ಮಾಡಿದ್ದೇನೆ. ಅಧಿಕಾರಿಗಳು ನಿವಾಸಿಗಳ ಬಳಿಯಿರುವ ದಾಖಲೆ ಹಾಗೂ ನಗರಸಭೆ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ನಿವಾಸಿಗಳಿಂದಲೇ ಒತ್ತುವರಿ ಮಾಡಿದ್ದಲ್ಲಿ ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಿ ಕಾಮಗಾರಿ ಪ್ರಾರಂಭಿಸಲು ಸೂಚಿಸಿದ್ದೇನೆ ಎಂದು ಹೇಳಿದರು.
ಹರಿಹರದಲ್ಲಿ ಒತ್ತುವರಿ ಮಾಡಿಕೊಂಡವರು ಕೋರ್ಟಿಗೆ ಹೋಗಿ ಸ್ಟೇ ತಂದಿರುವ ಕಾರಣ ಹರಿಹರದ ಹಳೇ ಪಿ.ಬಿ. ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಮಾಡಲು ಆಗುತ್ತಿಲ್ಲ. ಹೀಗಾದರೆ ನಗರದಲ್ಲಿ ಅಭಿವೃದ್ಧಿ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.ನಗರಸಭೆಯಲ್ಲಿ ಕೆಲವು ಗುತ್ತಿಗೆದಾರರೂ ಬ್ಲಾಕ್ ಮೇಲ್ ಮೂಲಕ ಕಾಮಗಾರಿಗಳ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಇವರು ತಾವು ಕಾಮಗಾರಿ ಮಾಡುವುದಿಲ್ಲ, ಬೇರೆಯವರಿಗೂ ಮಾಡಲು ಬಿಡುವುದಿಲ್ಲ. ಒಂದು ಕಾಮಗಾರಿಗೆ 3 ಬಿಲ್ಲುಗಳನ್ನು ತೆಗೆದುಕೊಂಡಿರುವ ಘಟನೆಗಳು ನಗರಸಭೆಯಲ್ಲಿವೆ ಎಂದು ಆರೋಪಿಸಿದರು.
ಶೀಘ್ರದಲ್ಲಿಯೇ ನಗರಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ಕರೆದು ನಗರಸಭೆಯಲ್ಲಿ ನಡೆಯುವ ಘಟನೆಗಳನ್ನ ಬಹಿರಂಗಪಡಿಸಿ ಕಾಮಗಾರಿಗೆ ಯಾರು ಅಡ್ಡಿಪಡಿಸುತ್ತಿದ್ದಾರೆ ಎಂಬುದನ್ನು ಸಾರ್ವಜನಿಕರ ಮುಂದೆ ಬಿಚ್ಚಿಡಲಾಗುವುದು. ಜೊತೆಗೆ ಫುಟ್ ಪಾತ್‌ನಲ್ಲಿ ವ್ಯಾಪಾರ ಮಾಡುವವರಿಗೆ ಬೇರೆಡೆ ಸ್ಥಳಾಂತರ ಮಾಡುವ ಬಗ್ಗೆ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.ಶಿವಮೊಗ್ಗ ರಸ್ತೆಯ ಎಲ್ಐಸಿ ಆಫೀಸ್ ಹತ್ತಿರ ನಡೆಯುತ್ತಿರುವ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಮಂಗಳವಾರದ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರ ಮಾಡಲಾಗುವುದು. ಈಗ ತಾತ್ಕಾಲಿಕವಾಗಿ ಗ್ರಾಮ ದೇವತೆ ದೇವಸ್ಥಾನದ ಮುಂಭಾಗದಲ್ಲಿ ನಡೆಸಲು ಅವಕಾಶ ನೀಡಲಾಗಿದೆ ಎಂದರು.
ಪೌರಯುಕ್ತೆ ಈರಮ್ಮ ಮಾತನಾಡಿ, ನಿವಾಸಿಗಳ ದಾಖಲೆಗಳನ್ನು ಪರಿಶೀಲನೆ ಮಾಡಿ ಅಳತೆ ಮಾಡಿ ಒತ್ತುವರಿ ಇದ್ದಲ್ಲಿ ನಮ್ಮ ಜೆಸಿಬಿ ಯಂತ್ರದಿಂದಲೇ ತೆರವು ಮಾಡಿ ಕಾಮಗಾರಿಯನ್ನು ಆರಂಭಿಸುತ್ತೇವೆ. ಈಗಾಗಲೇ ಈ ರಸ್ತೆಯ ನಿವಾಸಿಗಳಿಗೆ ತಮ್ಮ ಆಸ್ತಿಯ ದಾಖಲೆಗಳನ್ನು ಒದಗಿಸುವಂತೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.ಸ್ಥಳದಲ್ಲಿದ್ದ ಕೆಲವರು ಪಾರದರ್ಶಕವಾಗಿ ಕಾಮಗಾರಿ ಆಗಬೇಕು. ಶ್ರೀಮಂತರಿಗೂಂದು ನ್ಯಾಯ, ಬಡವರಿಗೊಂದು ನ್ಯಾಯ ಆಗಬಾರದು. ಯಾರೇ ಒತ್ತುವರಿ ಮಾಡಿದ್ದರೂ ಮುಲಾಜ್ ಇಲ್ಲದೇ ತೆರವು ಮಾಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ನಗರಸಭೆ ಎಇಇ ವಿನಯ್ ಕುಮಾರ್, ಎಇ ಪ್ರಕಾಶ್ ಕಂದಾಯ ಅಧಿಕಾರಿಗಳಾದ ಗುರುನಾಥ್ ರಮೇಶ್, ಗುತ್ಯಪ್ಪ, ಮುಖಂಡರಾದ ಬಾತಿ ಚಂದ್ರಶೇಖರ್, ರಾಜು ರೋಖಡೆ, ಅಜಿತ್ ಸಾವಂತ್, ತುಳಜಪ್ಪ ಭೂತೆ, ಎಚ್.ಮಂಜಾನಾಯ್ಕ್, ಭರತ್ ಶೆಟ್ಟಿ, ರಾಜು, ಹನುಮಂತಪ್ಪ, ಲೋಹಿತ್ ಇತರರು ಉಪಸ್ಥಿತರಿದ್ದರು.- - -
-14HRR.02:ಹರಿಹರದ ಶೋಭಾ ಟಾಕೀಸ್ ರಸ್ತೆ ಸುತ್ತಮುತ್ತ ಚರಂಡಿ ಕಾಮಗಾರಿಯ ಬಗ್ಗೆ ಸ್ಥಳೀಯ ನಿವಾಸಿಗಳು ತಕರಾರು ವ್ಯಕ್ತಪಡಿಸುತ್ತಿರುವ ಕಾರಣ ಶಾಸಕ ಬಿ.ಪಿ.ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.