ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ್ತಪೇಟೆಯ ಅಂಗಡಿ ಮಾಲಿಕನ ಮೇಲೆ ಹನುಮಾನ್ ಚಾಲೀಸಾ ವಿಚಾರವಾಗಿಯೇ ಹಲ್ಲೆ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರವನ್ನು ಕೆಪಿಸಿಸಿ ವಕ್ತಾರ ಶಂಕರ ಗುಹ ದ್ವಾರಕನಾಥ್ ಆಗ್ರಹಿಸಿದ್ದಾರೆ.ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಸ್ಪಕ್ಷಪಾತ ತನಿಖೆ ನಡೆಸಬೇಕು. ಹಲ್ಲೆ, ಹೊಡೆದಾಟ ನಡೆಸುವುದು ಮೊದಲೇ ತಪ್ಪು, ಅದರಲ್ಲೂ ಹನುಮಾನ್ ಚಾಲೀಸಾ ಹಾಕಿದ್ದರಿಂದ ಈ ಹಲ್ಲೆ ಆಗಿರುವುದು ನಿಜವಾದರೆ ಅವರು ಯಾರೇ ಆಗಿರಲಿ ತೀವ್ರ ಶಿಕ್ಷೆ ಆಗಬೇಕು. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಅದರಲ್ಲೂ ಭಾರತೀಯರು ಹಿಂದುಗಳು. ತಾಳ್ಮೆ ಇರುವಂತಹ ಜನಾಂಗ. ಅತಿಥಿ ದೇವೋಭವ ಅನ್ನುವ ನಮ್ಮ ಸಂಸ್ಕೃತಿಗೆ ಇಂಥ ಘಟನೆಗಳು ಕಪ್ಪು ಚುಕ್ಕಿ. ಹಾಗಾಗಿ ಸರ್ಕಾರ ಅಂತಹವರಿಗೆ ಯಾವುದೇ ಕಾರಣಕ್ಕೂ ರಕ್ಷಣೆ ಕೊಡಬಾರದು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಘಟನಾ ಸ್ಥಳಕ್ಕೆ ಬಿಜೆಪಿ ಸಂಬಂಧ ಸಂಸದ ತೇಜಸ್ವಿ ಸೂರ್ಯ ಭೇಟಿ ಕುರಿತು ಟೀಕಿಸಿರುವ ಅವರು, ಐದು ವರ್ಷಗಳಿಂದ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ಮಲಗಿದ್ದ ತೇಜಸ್ವಿ ಸೂರ್ಯ ಕೋಮು ಗಲಭೆ ವಾಸನೆ ಬಂದಾಗ ಮಾತ್ರ ಗಾಢ ನಿದ್ರೆಯಿಂದ ಎದ್ದೇಳುವಂತೆ ಕಾಣುತ್ತಿದೆ. ಈ ಹಿಂದೆ ಪ್ರವೀಣ್ ನೆಟ್ಟಾರು ಹತ್ಯಾಕಾಂಡದಲ್ಲಿ ಇದೇ ಸಂಸದರು ಬಿಜೆಪಿ ಸರ್ಕಾರ ಇಲ್ಲದಿದ್ದರೆ ಕಲ್ಲುತೂರಾಟ ಮಾಡಬಹುದಿತ್ತು ಎಂದು ಹೇಳಿಕೆ ನೀಡಿ ಅವರ ನಿಜ ಸ್ವರೂಪವನ್ನು ತೋರಿಸಿದ್ದರು. ಇಷ್ಟು ದಿನ ನಗರ್ತಪೇಟೆಯ ಜನರ ಯಾವುದೇ ಸಮಸ್ಯೆಗಳಿಗೂ ಸ್ಪಂಧಿಸದ ಇವರು ಈಗ ತಮ್ಮ ರಾಜಕೀಯ ಬೇಳೆ ಬೇಯಿಸುವುದಕ್ಕೆ ಇಲ್ಲಿಗೆ ಹಾಜರಾಗಿ ಅಮಾಯಕರನ್ನು ಬಳಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.ತೇಜಸ್ವಿ ಸೂರ್ಯ ಒಬ್ಬ ಸುಳ್ಳಿನ ಸರದಾರ. ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ವಿಷಯದಲ್ಲಿ ಯಾವ ರೀತಿ ದಿನಕ್ಕೊಂದು ಬಣ್ಣ, ನಿಮಿಷಕ್ಕೊಂದು ಸುಳ್ಳು ಹೇಳಿದರು ಎಂದು ಜಗಜ್ಜಾಹಿರಾಗಿದೆ. ಆದ್ದರಿಂದ ಸಂಸದರು ಈ ವಿಷಯದಲ್ಲಿ ರಾಜಕೀಯ ಮಾಡಿದರೆ ಕೋಮು ಗಲಭೆಗೆ ದಾರಿಯಾಗಬಹುದು. ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.