ಬೀಜ ವಿತರಣೆಯಲ್ಲಿ ತೊಂದರೆಯಾದ್ರೆ ಗಮನಕ್ಕೆ ತನ್ನಿ

| Published : Jun 20 2024, 01:05 AM IST

ಸಾರಾಂಶ

ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿರುವ ರೈತ ಕೃಷಿ ಸಂಪರ್ಕ ಕೇಂದ್ರಕ್ಕೆ ಜಿಲ್ಲಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿರುವ ರೈತ ಕೃಷಿ ಸಂಪರ್ಕ ಕೇಂದ್ರಕ್ಕೆ ಜಿಲ್ಲಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ರೈತ ಕೃಷಿ ಸಂಪರ್ಕ ಕೇಂದ್ರಕ್ಕೆ ಬೀಜ ತೆಗೆದುಕೊಳ್ಳಲು ಆಗಮಿಸಿದ್ದ ರೈತ ಬಾಂಧವರೊಂದಿಗೆ ಮಾತನಾಡಿದ ಅವರು, ಬೀಜಗಳು ಸರಿಯಾಗಿ ವಿತರಣೆಯಾಗುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು. ಬೀಜ ವಿತರಣೆಯಲ್ಲಿ ಏನಾದರೂ ತೊಂದರೆಯಾದರೆ ನಮ್ಮ ಗಮನಕ್ಕೆ ತರಬೇಕು. ರೈತ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಎಲ್ಲ ಅಗತ್ಯ ಬೀಜಗಳು ದಾಸ್ತಾನು ಇದೆ. ಬೀಜಗಳಿಗೆ ಸರಿಯಾಗಿ ಬೀಜೋಪಚಾರ ಮಾಡಿ ಬಿತ್ತನೆ ಕಾರ್ಯ ಕೈಗೊಳ್ಳಬೇಕು. ಇದರಿಂದಾಗಿ ಮುಂದಿನ ದಿನಗಳಲ್ಲಿ ಬೆಳೆಗಳು ಯಾವುದೇ ರೋಗ, ಕೀಟಬಾಧೆಗೆ ತುತ್ತಾಗುವುದಿಲ್ಲ. ಈಗ ಬಿತ್ತನೆಗೆ ಸಕಾಲವಾಗಿದೆ. ರೈತ ಬಾಂಧವರು ಬಿತ್ತನೆ ಕಾರ್ಯ ಕೈಗೊಳ್ಳಬಹುದು. ಸರ್ಕಾರ ರೈತ ಬಾಂಧವರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ಆಗಮಿಸಿದ ರೈತ ಬಾಂಧವರಿಗೆ ಬೀಜಗಳ ಪ್ಯಾಕೇಟ್‌ಗಳನ್ನು ವಿತರಿಸಿದರು. ರೈತ ಬಾಂಧವರು ಗುಣಮಟ್ಟದ ಬೀಜಗಳು ಪೂರೈಕೆಯಾಗಿವೆ ಎಂದು ಜಂಟಿ ಕೃಷಿ ನಿರ್ದೇಶಕರ ಗಮನಕ್ಕೆ ತಂದರು. ತಾಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ಅವರು, ಅಖಂಡ ತಾಲೂಕಿನಲ್ಲಿ ತೊಗರಿ, ಮೆಕ್ಕೆಜೋಳ, ಸಜ್ಜೆ ಬೀಜ ಸೇರಿದಂತೆ ಅಗತ್ಯ ಬೀಜಗಳ ದಾಸ್ತಾನು ಇದೆ. ರೈತ ಬಾಂಧವರಿಗೆ ತೊಂದರೆಯಾಗದಂತೆ ಬೀಜಗಳ ವಿತರಣೆ ಕಾರ್ಯ ನಡೆಯುತ್ತಿದೆ. ಸರದಿಯಂತೆ ಕೂಪನ್ ನೀಡಿ ಬೀಜ ನೀಡಲಾಗುತ್ತಿದೆ. ರೈತ ಬಾಂಧವರು ಸಹಕಾರ ನೀಡುವ ಮೂಲಕ ಬೀಜಗಳನ್ನು ಪಡೆದುಕೊಳ್ಳಬೇಕೆಂದರು. ರಸಗೊಬ್ಬರ ಮಳಿಗೆಗಳಿಗೆ ಭೇಟಿ:ಪಟ್ಟಣದಲ್ಲಿರುವ ವಿವಿಧ ರಸಗೊಬ್ಬರ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕ ಡಾ.ವಿಲಿಯಂ ರಾಜಶೇಖರ ಅವರು ಕೃಷಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿರುವ ಗೊಬ್ಬರ ದಾಸ್ತಾನು ಪರಿಶೀಲಿಸಿದರು.ರಸಗೊಬ್ಬರ ಮಳಿಗೆಗಳ ಮಾಲೀಕರಿಗೆ ಅವರು, ಮಳಿಗೆಯಲ್ಲಿ ಎಲ್ಲ ಗೊಬ್ಬರಗಳ ದರ ಪಟ್ಟಿ ಪ್ರದರ್ಶಿಸಬೇಕು. ಸರ್ಕಾರ ನಿಗದಿಪಡಿಸಿದ ಗೊಬ್ಬರದ ದರದಲ್ಲಿ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು. ರೈತ ಬಾಂಧವರಿಗೆ ಕಡ್ಡಾಯವಾಗಿ ಗೊಬ್ಬರ ಮಾರಾಟದ ರಶೀದಿ ನೀಡಬೇಕು. ಸರ್ಕಾರ ನಿಗದಿಪಡಿಸಿದ ದರಕ್ಕೆ ಗೊಬ್ಬರವನ್ನು ಮಾರಾಟ ಮಾಡಬೇಕು. ಒಂದು ವೇಳೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದರೆ ಅಂತಹವರ ಮೇಲೆ ಕ್ರಮ ತೆಗೆದುಕೈಗೊಳ್ಳಬೇಕಾಗುತ್ತದೆ. ಅವಧಿ ಮುಗಿದ ಕೀಟನಾಶಕಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಕೀಟನಾಶಕಗಳನ್ನು ಮಾರಾಟ ಮಾಡುವಾಗ ರೈತ ಬಾಂಧವರಿಗೆ ಅವುಗಳ ಉಪಯೋಗಿಸುವ ಕುರಿತು ಎಚ್ಚರಿಕೆ ಕ್ರಮಗಳನ್ನು ತಿಳಿಸಬೇಕು. ರೈತ ಬಾಂಧವರ ಬಿತ್ತನೆಗೆ ಸಮರ್ಪಕವಾದ ಗೊಬ್ಬರವನ್ನು ಸಿಗುವಂತೆ ನೋಡಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ತಾಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚಿದಾನಂದ ಹಿರೇಮಠ, ಕೃಷಿ ಅಧಿಕಾರಿ ಆರ್.ಬಿ.ಕುಲಕರ್ಣಿ ಇತರರು ಇದ್ದರು.