ಬದ್ಧತೆ ಇದ್ದಲ್ಲಿ ನರ್ಸಿಂಗ್‌ನಲ್ಲಿ ಯಶಸ್ಸು ಸಾಧ್ಯ: ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಧನಶೇಖರ್‌

| Published : May 25 2024, 12:49 AM IST

ಬದ್ಧತೆ ಇದ್ದಲ್ಲಿ ನರ್ಸಿಂಗ್‌ನಲ್ಲಿ ಯಶಸ್ಸು ಸಾಧ್ಯ: ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಧನಶೇಖರ್‌
Share this Article
  • FB
  • TW
  • Linkdin
  • Email

ಸಾರಾಂಶ

ಗಳಿಸಿದ ಜ್ಞಾನದ ಅನಾವರಣ ಮತ್ತು ಕರ್ತವ್ಯದಲ್ಲಿ ಬದ್ಧತೆ ಹಾಗೂ ನ್ಯಾಯ ಒದಗಿಸುವ ಮನೋಭಾವ ಇದ್ದಲ್ಲಿ ಶುಶ್ರೂಷಕ ವೃತ್ತಿಯಲ್ಲಿ ಆತ್ಮತೃಪ್ತಿ ಮತ್ತು ಸೇವಾ ಕಾರ್ಯದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಸಲಹೆ ನೀಡಿದರು. ಹೊಳೆನರಸೀಪುರದಲ್ಲಿ ನಡೆದ ಫ್ಲಾರೆನ್ಸ್ ನೈಟಿಂಗೇಲ್ ಡೇ ದಿನದ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಮರಣೆ ಕಾರ್ಯಕ್ರಮ । ಫ್ಲಾರೆನ್ಸ್ ನೈಟಿಂಗೇಲ್ ಡೇ ದಿನ ಆಚರಣೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಯಿಯಂತೆ ಉದಾತ್ತವಾದ ಮನೋಭಾವ, ಮಾತೃ ಹೃದಯ, ತಾಯಿತನ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಇರಲೇಬೇಕು. ವೈದ್ಯಕೀಯ ಹಾಗೂ ನರ್ಸಿಂಗ್ ಸೇವೆಯಲ್ಲಿ ಇರುವಾಗ ಕರ್ತವ್ಯದಲ್ಲಿ ಒಲವು, ಕಲಿಕೆಯ ತುಡಿತದಿಂದ ಗಳಿಸಿದ ಜ್ಞಾನದ ಅನಾವರಣ ಮತ್ತು ಕರ್ತವ್ಯದಲ್ಲಿ ಬದ್ಧತೆ ಹಾಗೂ ನ್ಯಾಯ ಒದಗಿಸುವ ಮನೋಭಾವ ಇದ್ದಲ್ಲಿ ಶುಶ್ರೂಷಕ ವೃತ್ತಿಯಲ್ಲಿ ಆತ್ಮತೃಪ್ತಿ ಮತ್ತು ಸೇವಾ ಕಾರ್ಯದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಸಲಹೆ ನೀಡಿದರು.

ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿ ಇರುವ ಸರ್ಕಾರಿ ಶುಶ್ರೂಷಕ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಫ್ಲಾರೆನ್ಸ್ ನೈಟಿಂಗೇಲ್ ಡೇ ದಿನದ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಶುಶ್ರೂಷಕ ವೃತ್ತಿಯಲ್ಲಿ ವಿಫುಲ ಅವಕಾಶಗಳು ಇದ್ದು, ಹಲವಾರು ವಿಭಾಗಗಳಲ್ಲಿ ಶುಶ್ರೂಷಕರ ಸೇವೆ ಅಗತ್ಯವಾಗಿದ್ದು, ಇವುಗಳಲ್ಲಿ ತೊಡಗಿಸಿಕೊಳ್ಳಲು ಕಲಿಕೆಯಲ್ಲಿ ತೋರುವ ತುಡಿತ ಮತ್ತು ಸಿಕ್ಕ ಅವಕಾಶದಲ್ಲಿ ಜ್ಞಾನದ ಅನಾವರಣ ಪ್ರಮುಖವಾಗಿರುತ್ತದೆ ಎಂದು ಹೇಳಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್ ಮಾತನಾಡಿ, ಪರಿಪೂರ್ಣ ವ್ಯಕ್ತಿ ನೀಡುವ ಹಿತನುಡಿಗಳು ಒಂದು ಪುಸ್ತಕ ಓದಿ ಗಳಿಸುವ ಜ್ಞಾನಕ್ಕೆ ಸಮನಾಗಿರುತ್ತದೆ. ವಿದ್ಯಾರ್ಥಿಗಳು ವ್ಯಾಸಂಗ ಮುಗಿಸುವ ತನಕ ಕಲಿಕೆಗೆ ಅಗತ್ಯವಾದ ಮಾಹಿತಿ ಪಡೆಯಲು ಮತ್ತು ಕೆಲವು ನಿಮಿಷಗಳು ಮಾತ್ರ ಮೊಬೈಲ್ ಬಳಸಬೇಕು, ಕಲಿಕೆಯ ಸಮಯದಲ್ಲಿ ಮೊಬೈಲ್ ಬಳಕೆ ಹೆಚ್ಚಾದಲ್ಲಿ ಯಶಸ್ಸುಗಳಿಸಲು ಅಸಾಧ್ಯ ಎಂದು ಹೇಳಿದರು.

ಪ್ರಾಂಶುಪಾಲ ಚಂದ್ರಶೇಖರ್ ಅಡಪದ, ಶುಶ್ರೂಷಕ ವೃತ್ತಿಯೂ ಇತ್ತೀಚಿನ ವರ್ಷಗಳಲ್ಲಿ ಮಹತ್ವದ ಸ್ಥಾನ ಪಡೆಯುತ್ತಿದ್ದರೂ, ಶುಶ್ರೂಷಕ ಕಾಲೇಜುಗಳ ಬಗ್ಗೆ ತಾತ್ಸಾರ ಮನೋಭಾವ ಇದ್ದು, ಕಾಲೇಜುಗಳ ನಿರ್ವಹಣೆಗೆ ನಿರ್ದೇಶಕರ ನೇಮಕವಾಗಿಲ್ಲ ಅಥವಾ ಒಂದು ವಿಶ್ವವಿದ್ಯಾನಿಲಯವಿಲ್ಲ. ನರ್ಸಿಂಗ್ ಕಾಲೇಜಿಗೆ ಅನುದಾನ ಏಕೆ ಬೇಕು ಎಂದು ಪ್ರಶ್ನಿಸುತ್ತಾರೆ. ಉಪನ್ಯಾಸಕರ ಕೊರತೆಯನ್ನು ಹೋಗಲಾಡಿಸಲು ಉಪನ್ಯಾಸಕರನ್ನು ನಿಯೋಜಿಸಿ ಎಂಬ ವಿನಂತಿಗೆ ಸ್ಪಂದಿಸುತ್ತಿಲ್ಲ, ಕಾಲೇಜು ಪ್ರಾರಂಭಗೊಂಡ ನಂತರದ ವರ್ಷಗಳಲ್ಲಿ ೧೫ ಉಪನ್ಯಾಸಕರು ಇದ್ದರು, ಈಗ ೭ ಉಪನ್ಯಾಸಕರು ಇದ್ದಾರೆ ಎಂದು ಬೇಸರದಿಂದ ನುಡಿದರು.

ನರ್ಸಿಂಗ್ ಸಮಸ್ಯೆಗಳು ಮತ್ತು ಸವಾಲುಗಳನ್ನು ಕೇಳುವವರೇ ಇಲ್ಲ. ಇಂತಹ ಸನ್ನಿವೇಶದಲ್ಲಿ ನಮ್ಮಗಳ ಒಳಿತಿಗಾಗಿ ಮತ್ತು ಮುಂದಿನ ದಿನಗಳಲ್ಲಿ ಸಮಸ್ಯೆಗಳಾದ ಸಂದರ್ಭಕ್ಕೆ ಪ್ರಯೋಜನ ಬರುವಂತಹ ಒಂದು ರಾಷ್ಟ್ರ ಒಂದು ನರ್ಸಿಂಗ್ ನೋಂದಣಿ ಚಾಲ್ತಿಯಲ್ಲಿದ್ದು, ತಪ್ಪದೇ ಎಲ್ಲರೂ ನೋಂದಣಿ ಮಾಡಿಸಿಕೊಳ್ಳಿ ಎಂದರು.

ಉಪನ್ಯಾಸಕ ವಿ.ಎನ್.ರಾಮು, ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ ಮಾಲತಿ ಪ್ರಭಾಕರ್ ಮಾತನಾಡಿದರು.

ವಿದ್ಯಾರ್ಥಿನಿ ಅಕ್ಷತ ಸ್ವಾಗತಿಸಿದರು. ತೇಜಸ್ವಿನಿ ಮತ್ತು ಚೈತ್ರ ನಿರೂಪಿಸಿದರು

ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ ಶಾಂತಿ, ಉಪನ್ಯಾಸಕರಾದ ಶೈಲಜಾ, ಸರಸ್ಪತಿ, ಸಾವಿತ್ರಮ್ಮ, ಕ್ಲಿನಿಕಲ್ ಇನ್‌ಸ್ಪೆಕ್ಟರ್ ಸೋಮಶೇಖರ್, ವಿಜಯಕುಮಾರ್, ಇತರರು ಇದ್ದರು.