ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಸರ್ಕಾರಿ ಆಸ್ಪತ್ರೆ ನನ್ನ ಸ್ವಂತ ಮನೆ ಇದ್ದಂತೆ. ಅಲ್ಲಿ ಭ್ರಷ್ಟಾಚಾರ ನಡೆದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಮೇಶ ಜಾರಕಿಹೊಳಿ ಗುಡುಗಿದರು.ಗುರುವಾರ ನಗರದ ಸಮುದಾಯ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ತಾಲೂಕು ಆರೋಗ್ಯ ಇಲಾಖೆ ಕಾರ್ಯಾಲಯ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಹಾಗೂ ಗೋಕಾಕ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ವೈದ್ಯರು ಮತ್ತು ದಾದಿಯರು ರಾತ್ರಿ ವೇಳೆ ಆಸ್ಪತ್ರೆಗೆ ಬಂದ ರೋಗಿಗಳೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಹೊಂದಾಣಿಕೆ ಮಾಡಿಕೊಂಡು ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕುಳುಹಿಸಿ ಅವರಿಂದ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಆದಷ್ಟು ಬೇಗ ಅಂತಹ ವೈದ್ಯರನ್ನು ಕಂಡು ಹಿಡಿದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ನಾನು ಶಾಸಕ ಆಗಲಿಕ್ಕೆ ಮೂಲ ಕಾರಣ ಗೋಕಾಕ ಸಾರ್ವಜನಿಕ ಆಸ್ಪತ್ರೆ. ನಾನು ಶಾಸಕನಾಗುವ ಮೊದಲು ಆಸ್ಪತ್ರೆಯಲ್ಲಿ ವೈದ್ಯರು ಮುಂಜಾನೆ ಬಂದು ಆಸ್ಪತ್ರೆಯಲ್ಲಿ ಸುಮ್ಮನೆ ಕುಳಿತು ಸಂಜೆಗೆ ಮನೆಗೆ ಹೋಗುತ್ತಿದ್ದರು. ಶಾಸಕನಾದ ಮೇಲೆ ಅದನ್ನು ನಿಯಂತ್ರಣದಲ್ಲಿ ತಂದಿದ್ದೇನೆ. ಆದರೆ, ಕಳೆದ ಹಲವು ತಿಂಗಳಿನಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಮೇಲ್ನೋಟಕ್ಕೆ ಅವು ನಿಜವೆಂದು ಕಂಡು ಬಂದಿದ್ದು, ಆದಷ್ಟು ಬೇಗ ಸುಧಾರಣೆ ಆಗಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ ಶಾಸಕರು, ಆಶಾ ಕಾರ್ಯಕರ್ತರು ಸಹ ರಾಜಕೀಯ ಬಲದಿಂದ ನೌಕರಿ ಗಿಟ್ಟಿಸಿಕೊಂಡಿದ್ದು, ವೈದ್ಯರಿಗಿಂತ ನಾವೇ ಹೆಚ್ಚು ಎಂಬಂತೆ ವರ್ತನೆ ತೋರುತ್ತಿದ್ದಾರೆ. ಇದು ಸಹ ನಿಲ್ಲಬೇಕು ಅವರು ಎಷ್ಟೇ ಪ್ರಭಾವಿಗಳಿದ್ದರೂ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಬಹುಮುಖ್ಯವಾಗಿ ರಾತ್ರಿ ವೇಳೆಯಲ್ಲಿ ಆಸ್ಪತ್ರೆಗೆ ಬಂದ ರೋಗಿಗಳನ್ನು ಹೋರಗಡೆ ಕಳುಹಿಸಕೊಡಬಾರದು. ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಆಗಬೇಕು. ಚಿಕ್ಕಮಕ್ಕಳ ತಜ್ಞರು ಸಹ ಮುತುವರ್ಜಿಯಿಂದ ಕೆಲಸ ಮಾಡಬೇಕು. ಇದು ಗೋಕಾಕ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಕೊನೆಗೆ ಎಚ್ಚರಿಕೆ ಹೀಗೆ ಮುಂದುವರಿದರೆ ನಿಮಗೆ ಗೋಕಾಕದಲ್ಲಿ ಜಾಗ ಇಲ್ಲಾ ಎಂದು ಎಚ್ಚರಿಕೆ ನೀಡಿದರು.ಡಾ.ಎಸ್.ವಿ. ಮುನ್ಯಾಳ ಮಾತನಾಡಿ, ಸೊಳ್ಳೆಗಳನ್ನು ನಿಯಂತ್ರಣ ಮಾಡಬೇಕು. ಮನೆಗಳ ಮುಂದೆ ನೀರಿನ ಸಂಗ್ರಹ ಮಾಡಬಾರದು, ರೋಗಿಗಳಲ್ಲಿ ಜ್ವರ ಕಾಣಿಸಿಕೊಂಡಾಗ ತಕ್ಷಣ ತಪಾಸಣೆ ಮಾಡುತ್ತಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ ಬಂದ ರೋಗಿಗಳ ಬಗ್ಗೆ ಮಾಹಿತಿಯನ್ನು ಸಹ ಪಡೆಯುತ್ತಿದ್ದೇವೆ. ಜನರು ಸಹ ಆರೋಗ್ಯ ಇಲಾಖೆಯ ಜೊತೆಗೆ ಸಹಕರಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಡಾ. ಎಂ.ಎಸ್. ಕೊಪ್ಪದ, ಡಾ.ರವೀಂದ್ರ ಅಂಟೀನ ಉಪಸ್ಥಿತರಿದ್ದರು.