ಭಕ್ತಿ ಇದ್ದರೆ ಬದುಕಿನಲ್ಲಿ ಸಾರ್ಥಕತೆ: ಶ್ರೀ

| Published : Feb 22 2024, 01:55 AM IST

ಸಾರಾಂಶ

ಮಲೇಬೆನ್ನೂರಿನಲ್ಲಿ ರಟ್ಟೀಹಳ್ಳಿಯ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮೈಲಾರಲಿಂಗೇಶ್ವರ ಕಳಸಾರೋಹಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮಲೆಬೆನ್ನೂರು

ಮಾನವರಿಗೆ ಭಗವಂತನ ಮೇಲೆ ಭಕ್ತಿ ಇರಬೇಕು ಆಗ ಬದುಕಿನಲ್ಲಿ ಸಾರ್ಥಕತೆ ಕಾಣುತ್ತಾನೆ ಎಂದು ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಬುಧವಾರ ಬೆಳಗ್ಗೆ ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣೆ ಮತ್ತು ಕಳಸಾರೋಹಣ ನೆರವೇರಿಸಿ, ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಶಿಬಾರಕಟ್ಟೆಗೆ ನಮಿಸಿ ಗ್ರಾಮ ಪ್ರವೇಶ ಮಾಡಲಿ ಎಂದು ಪೂರ್ವಜರು ಗ್ರಾಮಗಳ ಹೊರಭಾಗದಲ್ಲಿ ಶಿಬಾರಕಟ್ಟೆಯನ್ನು ಪ್ರತಿಷ್ಠಾಪಿಸುವುದು ವಾಡಿಕೆಯಾಗಿತ್ತು. ಶಿವನ ಕೈಯಲ್ಲಿರುವ ತ್ರಿಶೂಲದ ಮೂರು ಮೊನಚುಗಳು ರಜಸ್ಸು, ತಮಸ್ಸು, ಸತ್ವ ಎಂಬ ಮೂರು ಗುಣಗಳ ಸಂಕೇತವಾಗಿದೆ ಆದ್ದರಿಂದ ಪರಮೇಶ್ವರನನ್ನು ತ್ರಿಗುಣಾತೀತ ಎಂದು ಕರೆಯುತ್ತಾರೆ ಎಂದರು.

ಮನುಷ್ಯರಲ್ಲಿ ಯಾವ ಗುಣ ಹೆಚ್ಚಿರುತ್ತೋ ಆ ರೀತಿ ವರ್ತಿಸುತ್ತಾನೆ. ಪ್ರತಿಯೊಬ್ಬರೂ ಈ ಮೂರು ಗುಣಗಳನ್ನು ಮೀರಿ ಜೀವಿಸಬೇಕು ಎಂದರು. ಬರಗಾಲದಲ್ಲೂ ದೇಣಿಗೆ ನೀಡಿ ಧಾರ್ಮಿಕ ಕಾರ್ಯಗಳಿಗೆ ಸಹಕರಿಸುವ ಭಕ್ತರ ಕೊರತೆಯಿಲ್ಲ. ಪ್ರತಿಯೊಬ್ಬರೂ ವಿಲಾಸಿ ಜೀವನದಿಂದ ವಿಮುಕ್ತರಾಗಿ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳ ಬೇಕು ಎಂದು ಕರೆ ನೀಡಿದರು.

ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಮತ್ತು ಗಂಗಮಾಳಮ್ಮ ದೇವಿಗೆ ಹಾಗೂ ಶಿಬಾರಕಟ್ಟೆಗೆ ಹೂವಿನಿಂದ ಅಲಂಕರಿಸಲಾಗಿತ್ತು. ಸ್ವಾಮಿಗೆ ಬಂಢಾರದ ಅಭಿಷೇಕ, ಪೂಜೆ, ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಂಗಳವಾರ ರಾತ್ರಿ ಹೋಮ ಹವನ, ನವಗ್ರಹ ಪೂಜೆ, ಕಳಸಸ್ಥಾಪನೆ, ಅಧಿವಾಸ ಪೂಜೆ ಮುಂತಾದ ಧಾರ್ಮಿಕ ಕಾರ್ಯಗಳು ಜರುಗಿದವು. ಗೋಪುರ ನಿರ್ಮಿಸಿದ ವಸಂತಪ್ಪ ಹಳ್ಳೂರು, ಸಮಿತಿ ಅಧ್ಯಕ್ಷ ಮೈಲಾರಪ್ಪ, ಉಪಾಧ್ಯಕ್ಷ ನಿಟುವಳ್ಳಿ ನಿಂಗಪ್ಪ, ಕಾರ್ಯದರ್ಶಿ ಎಂ.ಕೆ. ರಾಮಶೆಟ್ಟಿ, ಖಜಾಂಚಿ ತಿಪ್ಪೇಶಪ್ಪ, ಮುಖಂಡರಾದ ಹೆಚ್. ಉಮೇಶ್, ಮಾಸಣಗಿ ಶೇಖರಪ್ಪ, ಸಿರಿಗೆರೆ ನಿಂಗಪ್ಪ, ಕಣ್ಣಾಳ್ ಪರಶುರಾಮಪ್ಪ, ಚಂದ್ರಣ್ಣ, ಕೊಟ್ರೇಶ್, ಹಾಲೇಶ್, ನಿಟುವಳ್ಳೇ ರಾಜು, ರಾಮಣ್ಣ ರೊಡ್ಡಮಲ್ಲಾಚಾರಿ, ಗಂಗಧರ, ರವಿ, ಜಿಗಳೇರ ಮಾರುತಿ, ಗಿರೀಶ್ ಹಳ್ಳೂರು ಮತ್ತಿತರರು ಉಪಸ್ಥಿತರಿದ್ದರು.