ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸುತ್ತಾರೆ. ಇದನ್ನು ಸಾಬೀತುಪಡಿಸಲು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ. ಒಂದು ವೇಳೆ ಸಾಬೀತುಪಡಿಸಿದರೆ ಬಿಜೆಪಿ ರಾಜ್ಯದ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನೇ ಹಾಕಲ್ಲ. ಸಾಬೀತುಪಡಿಸದಿದ್ದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದು ಎಂದು ಮಾಜಿ ಸಚಿವ ಸಿ.ಟಿ.ರವಿ ಸವಾಲೆಸೆದರು.ಶನಿವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಂಕಿ ಅಂಶ ಮುಚ್ಚಿಟ್ಟು ಕೇಂದ್ರದ ವಿರುದ್ದ ಸುಳ್ಳು ಆರೋಪ ಮಾಡುತ್ತಿದೆ. ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ಜನರಲ್ಲಿ ತಪ್ಪು ಕಲ್ಪನೆ ಬರುವ ತರಹ ಸುಳ್ಳು ಆರೋಪ ಮಾಡುತ್ತಿದ್ದಾರೆ. 2004ರಿಂದ 2014ರವರೆಗೆ ಕಾಂಗ್ರೆಸ್ ಸರ್ಕಾರ ಇತ್ತು. ಆವಾಗ ಕರ್ನಾಟಕಕ್ಕೆ ಬಂದ ಅನುದಾನ ಎಷ್ಟು, ಪಾಲೆಷ್ಟು ಎಂದು ತಿಳಿಸಬೇಕು. 2004ರಿಂದ 2014ರವರೆಗೆ ಯುಪಿಎ ಸರ್ಕಾರ ಆಡಳಿತ ಇತ್ತು. ಆಗ ಹತ್ತು ವರ್ಷದಲ್ಲಿ ರಾಜ್ಯಕ್ಕೆ ನೀಡಬೇಕಾದ ತೆರಿಗೆಯ ಹಣವನ್ನು 81795 ಕೋಟಿ ರೂ. ಕೊಟ್ಟಿತ್ತು. ಎನ್‌ಡಿಎ ಸರ್ಕಾರ 2,80,130 ಕೋಟಿ ನೀಡಿದೆ. ಅಂದರೆ ಶೇ. 243ರಷ್ಟು ಹೆಚ್ಚುವರಿಯಾಗಿ ನೀಡಿದೆ. ವಿವಿಧ ಯೋಜನೆಗಳಿಗೆ ನೀಡುವ ಅನುದಾನ ಯುಪಿಎ 60,779 ಕೋಟಿ ನೀಡಿದ್ದರೆ, ಎನ್‌ಡಿಎ 2,08,832 ಕೋಟಿ ನೀಡಿದೆ. ಸಿಎಂಗೆ ಇದು ಗೊತ್ತಿದ್ದರೂ ಸುಳ್ಳು ಹೇಳುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದರು.
ಹೀಗಾಗಿ, ನರೇಂದ್ರ ಮೋದಿ ಸರ್ಕಾರ ಕೊಟ್ಟ ಅನುದಾನ ಎಷ್ಟು ಎಂಬುದನ್ನು ಶ್ವೇತಪತ್ರ ಹೊರಡಿಸಲಿ. ಒಂದು ವೇಳೆ ಮೋದಿ ಸರ್ಕಾರ ಅನುದಾನ ಕಡಿಮೆ ಕೊಟ್ಟಿದೆ ಎಂದಾದರೆ ಸಾಬೀತುಪಡಿಸಲಿ. ಅನ್ಯಾಯ ಮಾಡಿದ್ದೇ ನಿಜವಾದರೆ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ರಾಜ್ಯದಲ್ಲಿ ಕಣಕ್ಕಿಳಿಸದೇ, ಕಾಂಗ್ರೆಸ್ ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಸಹಕಾರ ಕೊಡುತ್ತೇವೆ. ಸಾಬೀತು ಪಡಿಸಲು ಸಾಧ್ಯವಾಗದಿದ್ದಲ್ಲಿ ನೀವು ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದು ಎಂದು ಸವಾಲೆಸೆದರು. ಜತೆಗೆ ಜನತೆಯ ಹಾದಿ ತಪ್ಪಿಸಿದ್ದಕ್ಕೆ ಕ್ಷಮೆ ಕೇಳಲಿ ಎಂದರು.ಗುಜರಾತ್‌ಗೆ ಕರ್ನಾಟಕಕ್ಕಿಂತ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಜನಸಂಖ್ಯೆ ಆಧಾರದಲ್ಲಿ ಅನುದಾನ ಹಂಚಿಕೆಯಾಗುತ್ತಿರಲಿಲ್ಲ. ಈಗ ಜನಸಂಖ್ಯೆ ಆಧಾರದಲ್ಲಿ ಅನುದಾನ ಹಂಚಿಕೆಯಾಗುತ್ತಿದೆ ಎಂದರು.
ಕಾಂಗ್ರೆಸ್‌ಗೆ ರೈತರು, ದಲಿತರ ಮೇಲೆ ಪ್ರೀತಿ ಇಲ್ಲ. ದಲಿತರ ಹಣ ಡೈವರ್ಟ್ ಮಾಡಿದರು. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ ಎಂದರು.ರಾಮರಾಜ್ಯದ ಆಶಯಶ್ರೀರಾಮನೊಬ್ಬನೇ ದೇವರು ಎಂದು ನಾವು ಎಲ್ಲಿಯೂ ಹೇಳಿಲ್ಲ. ರಾಮರಾಜ್ಯದ ಆಶಯದೊಂದಿಗೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ಆ ಶ್ರೀರಾಮನೆ ಬುದ್ಧಿ ಕರುಣಿಸಲಿ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ಶ್ರೀರಾಮ ಒಬ್ಬನೇ ದೇವರಾ? ಎಂಬ ಸಚಿವ ಆರ್.ಬಿ. ತಿಮ್ಮಾಪುರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸನಾತನ ಧರ್ಮದ ಪುನರುತ್ಥಾನ, ದೇವನೊಬ್ಬ ನಾಮಹಲವು ಎನ್ನುವಂತೆ ನಮ್ಮಲ್ಲಿ ಮುಕ್ಕೋಟಿ ದೇವತೆಗಳಿದ್ದಾರೆ. ಆದರೆ, ಶ್ರೀರಾಮ ಹಿಂದುತ್ವದ ಪ್ರತೀಕ ಎಂದರು.ಬಿಜೆಪಿಯ ಎಲ್.ಕೆ. ಅಡ್ವಾನಿ ಅವರು ಹೋರಾಟ ಆರಂಭಿಸುವ ಮುನ್ನ ಕಾಂಗ್ರೆಸ್ ನಾಯಕರು ಯಾರಾದರೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು ಎಂಬ ಹೇಳಿಕೆ ನೀಡಿದ್ದರೆ ತೋರಿಸಲಿ. ಬಾಬರ್ ಬಿಡದ, ರಾಮನ ಹಿಡಿಯದ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದರು ಎಂದು ತಿಳಿಸಿದರು.
ರಾಮ ಕಾಲ್ಪನಿಕ ವ್ಯಕ್ತಿ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ನಾಲ್ಕು ಕರಸೇವಕರ ಬಂಧನ, ದಾವಣಗೆರೆ, ಚನ್ನಪಟ್ಟಣದಲ್ಲಿ, ಬೆಂಗಳೂರಿನಲ್ಲಿ ಗೋಲಿಬಾರ್ ನಡೆಸಿದವರಿಂದ ಇಂತಹ ಹೇಳಿಕೆ ನಿರೀಕ್ಷಿತ. ಇಂಥವರಿಂದ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.