ಕನ್ನಡಕ್ಕೆ ಅನ್ಯಾಯವಾದಲ್ಲಿ ಬೀದಿಗಿಳಿದು ಹೋರಾಡಿ

| Published : Nov 25 2024, 01:04 AM IST

ಕನ್ನಡಕ್ಕೆ ಅನ್ಯಾಯವಾದಲ್ಲಿ ಬೀದಿಗಿಳಿದು ಹೋರಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಉಳಿಸುವ ಪ್ರಕ್ರಿಯೆ ಪರಿವಾರದಿಂದ ಆರಂಭವಾಗಬೇಕು. ಇಂದು ರಾಜ್ಯದಲ್ಲಿ ಕನ್ನಡಕ್ಕೆ ನೆಲೆ ಇಲ್ಲದಂತಾಗುತ್ತಿದೆ. ಮನೆ-ಮನೆಗಳಲ್ಲಿ ಕನ್ನಡ ಮಾತಾಡಬೇಕು.

ಹುಬ್ಬಳ್ಳಿ:

ಕನ್ನಡಕ್ಕೆ ಅನ್ಯಾಯ, ಅವಮಾನ ಮಾಡಿದರೆ ಸರ್ಕಾರಕ್ಕೆ ಪತ್ರ ಚಳವಳಿ ನಡೆಸಬೇಕು. ಕೇಂದ್ರದಿಂದ ರಾಜ್ಯಕ್ಕೆ ಏನಾದರೂ ಅನ್ಯಾಯವಾದಲ್ಲಿ ಪ್ರತಿಯೊಬ್ಬರೂ ಬೀದಿಗಿಳಿದು ಹೋರಾಟ ಮಾಡಬೇಕು. ಅಂದಾಗ ಮಾತ್ರ ನಮ್ಮ ನಾಡಿಗೆ ಸಕಲ ಸೌಲಭ್ಯ ದೊರೆಯಲು ಸಾಧ್ಯ ಎಂದು ಸಾಹಿತಿ ಡಾ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ಅವರು ಇಲ್ಲಿನ ಚಾಲುಕ್ಯ ರೈಲ್ವೆ ಸಭಾಭವನದಲ್ಲಿ ನೈಋತ್ಯ ರೈಲ್ವೆ ಕನ್ನಡ ಸಂಘದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವ, ಸಂಘದ 20ನೇ ವಾರ್ಷಿಕೋತ್ಸವ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಉಳಿಸುವ ಪ್ರಕ್ರಿಯೆ ಪರಿವಾರದಿಂದ ಆರಂಭವಾಗಬೇಕು. ಇಂದು ರಾಜ್ಯದಲ್ಲಿ ಕನ್ನಡಕ್ಕೆ ನೆಲೆ ಇಲ್ಲದಂತಾಗುತ್ತಿದೆ. ಮನೆ-ಮನೆಗಳಲ್ಲಿ ಕನ್ನಡ ಮಾತಾಡಬೇಕು. ಯಾವ ಭಾಷೆ ಕಲಿತರೂ ಕನ್ನಡದಲ್ಲೇ ವ್ಯವಹರಿಸಬೇಕು. ಮಕ್ಕಳಿಗಾಗಿ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಬೇಕು. ನಿಯತಕಾಲಿಕೆ ತರಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇತು ಎಂದು ಕರೆ ನೀಡಿದರು.

ಹುಬ್ಬಳ್ಳಿಯಲ್ಲೇ ರೈಲ್ವೆ ಇಲಾಖೆಯ ಕಚೇರಿ ಇರುವುದರಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ರೈಲಿನ ಪ್ರಯಾಣ ಪ್ರೀತಿಯುತವಾದುದು. ರೈಲ್ವೆ ಬಡವರ ಇಲಾಖೆ. ಕೋಟ್ಯಂತರ ಜನರಿಗೆ ಉತ್ಕೃಷ್ಟವಾದ ಸೇವೆ ಸಲ್ಲಿಸುವ ಕಾರ್ಯ ಶ್ಲಾಘನೀಯ. ಇಲ್ಲಿನ ರೈಲ್ವೆ ವ್ಯವಸ್ಥೆ ಬೇರೆ ಯಾವ ದೇಶದಲ್ಲಿಯೂ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೈಋತ್ಯ ರೈಲ್ವೆ ವಲಯದ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಸತ್ಯಪ್ರಕಾಶ ಶಾಸ್ತ್ರಿ ಮಾತನಾಡಿ, ಕನ್ನಡ ಮಾತನಾಡಲು ಖುಷಿಯಾಗುತ್ತದೆ. ಈ ಹಿಂದೆ ರೈಲ್ವೆ ಇಲಾಖೆ ಸೇರುವವರ ಸಂಖ್ಯೆ ವಿರಳವಾಗಿತ್ತು. ರಾಜ್ಯದವರು ಪರೀಕ್ಷೆ ಬರೆಯುತ್ತಿರಲಿಲ್ಲ. ಈಗ ವರ್ಷಕ್ಕೆ 50 ಜನ ಕನ್ನಡಿಗರು ರೈಲ್ವೆ ಇಲಾಖೆಗೆ ಆಯ್ಕೆಯಾಗುತ್ತಿದ್ದಾರೆ. ಕನ್ನಡಿಗರು ಬಹುಸಂಖ್ಯಾತರಾಗಿದ್ದೇವೆ. ಉನ್ನತಾಧಿಕಾರಿಗಳೂ ಇದ್ದಾರೆ. ಸಿಬ್ಬಂದಿ ಸಮಸ್ಯೆ ಅರ್ಧದಷ್ಟು ನಮ್ಮ ಮಾತೃ ಭಾಷೆಯಿಂದಲೇ ಪರಿಹಾರವಾಗುತ್ತಿದೆ ಎಂದರು.

ಸಿ.ಎಂ. ಮುನಿಸ್ವಾಮಿ ಮಾತನಾಡಿದರು. ಇದೇ ವೇಳೆ "ನಾಡಹಬ್ಬ ನುಡಿತೋರಣ " ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಅನೂಪ್ ದಯಾನಂದ ಸಾಧು, ಅನಿತಾ ಶಾಸ್ತ್ರಿ, ಕನ್ನಡ ಸಂಘದ ಅಧ್ಯಕ್ಷ ಮಹಾಂತಪ್ಪ ನಂದೂರ, ಪ್ರಧಾನ ಕಾರ್ಯದರ್ಶಿ ಮಹೇಶ ಎ.ಎಸ್, ಪ್ರಮುಖರಾದ ಅರವಿಂದ ಹೆಗಡೆ, ಸಂತೋಷ ಹೆಗಡೆ, ಡಾ. ರಾಮು ಮೂಲಗಿ, ವೆಂಕಟೇಶ ಮರೆಗುದ್ದಿ, ರವಿಶಂಕರ ಗದಿಗೆಪ್ಪ ಸೇರಿದಂತೆ ಹಲವರಿದ್ದರು.