ಕಳಪೆ ಕಾಮಗಾರಿಯಾದರೆ ದಾಖಲೆ ಸಮೇತ ದೂರು ಸಲ್ಲಿಸಿ

| Published : Sep 06 2025, 01:01 AM IST

ಸಾರಾಂಶ

ಸಾಮಾಜಿಕ ಲೆಕ್ಕಪರಿಶೋಧನ ಸಭೆಯಲ್ಲಿ 2024-25ನೇ ಸಾಲಿನಲ್ಲಿ ನಡೆಸಲಾದ ಕಾಮಗಾರಿಗಳನ್ನು ಓದಿ ಹೇಳಲಾಗುತ್ತದೆ. ಈ ಕಾಮಗಾರಿಗಳಲ್ಲಿ ಬೋಗಸ್ ಕಾಮಗಾರಿ ಅಥವಾ ಕಳಪೆ ಕಾಮಗಾರಿ ಆಗಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ದೂರು ಸಲ್ಲಿಸಬೇಕು.

ಕುಷ್ಟಗಿ:

ನರೇಗಾ ಯೋಜನೆಯಲ್ಲಿ ನಡೆದ ಕಾಮಗಾರಿಗಳು ಕಳಪೆ ಹಾಗೂ ನಿಯಮ ಬಾಹಿರ ಎಂದು ಕಂಡು ಬಂದಲ್ಲಿ ಸೂಕ್ತ ದಾಖಲೆಗಳೊಂದಿಗೆ ದೂರು ಸಲ್ಲಿಸಬಹುದು ಎಂದು ಸಾಮಾಜಿಕ ಲೆಕ್ಕಪರಿಶೋಧನಾ ಕಾರ್ಯಕ್ರಮ ಅಧಿಕಾರಿ ರವಿಗೌಡ ಜಂಬಲದಿನ್ನಿ ಹೇಳಿದರು.

ತಾಲೂಕಿನ ಕೇಸೂರು ಗ್ರಾಮದ ಶ್ರೀವಿಜಯ ಮಹಾಂತೇಶ್ವರ ಮಠದ ಆವರಣದಲ್ಲಿ ನಡೆದ ಕೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ ಯೋಜನೆಯಲ್ಲಿ 2024-25ನೇ ಸಾಲಿನಲ್ಲಿ ನಡೆದ ಕಾಮಗಾರಿಗಳ ಸಾಮಾಜಿಕ ಲೆಕ್ಕ ಪರಿಶೋಧನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಸಾಮಾಜಿಕ ಲೆಕ್ಕಪರಿಶೋಧನ ಸಭೆಯಲ್ಲಿ 2024-25ನೇ ಸಾಲಿನಲ್ಲಿ ನಡೆಸಲಾದ ಕಾಮಗಾರಿಗಳನ್ನು ಓದಿ ಹೇಳಲಾಗುತ್ತದೆ. ಈ ಕಾಮಗಾರಿಗಳಲ್ಲಿ ಬೋಗಸ್ ಕಾಮಗಾರಿ ಅಥವಾ ಕಳಪೆ ಕಾಮಗಾರಿ ಆಗಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ದೂರು ಸಲ್ಲಿಸಬೇಕು. ನಂತರದಲ್ಲಿ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಾಮಾಜಿಕ ಲೆಕ್ಕಪರಿಶೋಧನ ಅಧಿಕಾರಿ ವೀರೇಶ ಹಿರೇಮಠ, 2024-25ನೇ ಸಾಲಿನಲ್ಲಿ ನಡೆದ ನರೇಗಾ ಕಾಮಗಾರಿ ಓದಿ ತಿಳಿಸಿದರು. ನೋಡಲ್ ಅಧಿಕಾರಿ ಬಸವರಾಜ ನಿಲೋಗಲ್ ಮಾತನಾಡಿ, ನರೇಗಾ ಯೋಜನೆಯಲ್ಲಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳು ಇದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಪಿಡಿಒ ಗಂಗಯ್ಯ ವಸ್ತ್ರದ ಮಾತನಾಡಿ, ಮಳೆಗಾಲವಿರುವ ಕಾರಣ ನರೇಗಾದಡಿ ಕೆಲಸ ಕೊಟ್ಟಿರುವುದಿಲ್ಲ. ಮೇಲಧಿಕಾರಿಗಳ ಆದೇಶದಂತೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಕೆಲಸ ನೀಡಲಾಗುವುದು ಎಂದು ತಿಳಿಸಿದರು.

ಜೆಸಿಬಿ ಮೂಲಕ ಕೆಲಸ:

ಕೇಸೂರು ಯುವಕ ಶ್ರವಣಕುಮಾರ ಬಿಜಕಲ್ ಮಾತನಾಡಿ, ಕೇಸೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ನರೇಗಾ ಕಾಮಗಾರಿ ನಾಲಾ ಹೂಳೆತ್ತುವುದು ಸೇರಿದಂತೆ ಅನೇಕ ಕಾಮಗಾರಿಗಳನ್ನು ಜೆಸಿಬಿ ಮೂಲಕ ಮಾಡಿಸಿ ನರೇಗಾ ನಿಯಮವನ್ನು ಗಾಳಿಗೆ ತೂರಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು ಇದಕ್ಕೆ ಉತ್ತರಿಸಿದ ರವಿಗೌಡ ಜಂಬಲದಿನ್ನಿ, ದಾಖಲೆಗಳ ಸಮೇತ ದೂರು ನೀಡಿ ನಂತರ ತನಿಖೆ ನಡೆಸಿ ತಪ್ಪು ಕಂಡು ಬಂದಲ್ಲಿ ಸಂಬಂಧಪಟ್ಟವರಿಂದ ಹಣ ವಸೂಲಿ ಮಾಡಲಾಗುವುದು ಎಂದರು

ಕೇಸೂರು ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಮಳಿಮಠ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯ ಶುಖಮುನಿ ಈಳಗೇರ, ಉಮೇಶ ಮಡಿವಾಳರ, ರಮೇಶ ಗಡಾದ, ಮಲ್ಲಿಕಾರ್ಜುನಗೌಡ ಕಡೇಕೊಪ್ಪ, ಬಸವರಾಜ ಜಲಕಮಲದಿನ್ನಿ, ಯಂಕಪ್ಪ ದಾಸರ ಸೇರಿದಂತೆ ಹಾಗೂ ಕೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳು ಹಾಗೂ ಗ್ರಾಪಂ ಸಿಬ್ಬಂದಿ, ಸಂಜೀವಿನಿ ಸ್ವಸಹಾಯ ಸಂಘದವರು ಇದ್ದರು.