ಸಾರಾಂಶ
ಯುವಸಮೂಹದಲ್ಲಿ ನೈತಿಕ ಮೌಲ್ಯ ಹಾಗೂ ಮಾನವೀಯ ಮೌಲ್ಯದ ಕುಸಿತದಿಂದಾಗಿ ಸಮಾಜದಲ್ಲಿ ವೃದ್ಧಾಶ್ರಮ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘಗಳು ಹೆಚ್ಚುತ್ತಿರುವುದು ಬೇಸರದ ಸಂಗತಿ.
ಗುಬ್ಬಿ: ಹಿರಿಯ ನಾಗರಿಕರು ಉತ್ತಮ ಜೀವನಮಟ್ಟ ರೂಪಿಸಿಕೊಳ್ಳಲು ಸಂವಿಧಾನದಲ್ಲಿ ಹಲವು ಕಾಯ್ದೆಗಳಿವೆ, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್. ಪಿ.ಕಿರಣ್ ತಿಳಿಸಿದರು.
ಪಟ್ಟಣದ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ ಹಾಗೂ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ನಿಂದನೆ ಜಾಗೃತಿ ದಿನದ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.ಹಿರಿಯ ನಾಗರಿಕರನ್ನು ಮಕ್ಕಳು ಪೋಷಣೆ ಮಾಡಬೇಕಾಗುತ್ತದೆ. ವಯಸ್ಸಾದ ಮೇಲೆ ಆಸ್ತಿ ವಿಚಾರದಲ್ಲಿ ತಂದೆ ತಾಯಿಗಳ ಜೊತೆ ಜಗಳವಾಡಿ ಕೋರ್ಟ್‌ಗೆ ಬರುವುದನ್ನು ನಾವು ದಿನ ನಿತ್ಯ ನೋಡುತ್ತಿದ್ದೇವೆ. ಸಮಾಜದಲ್ಲಿ ಈ ಬೆಳವಣಿಗೆ ನಮಗೆ ಮಾರಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಹಿರಿಯರ ಬಗ್ಗೆ ಗೌರವ- ಕಾಳಜಿ ಇಟ್ಟುಕೊಂಡರೆ ಸಮಾಜದಲ್ಲಿ ನಿರಾಶ್ರಿತರ ಸಂಘ- ಸಂಸ್ಥೆಗಳು ಹುಟ್ಟಿಕೊಳ್ಳುವುದಿಲ್ಲ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂಪಿ ಮೋಹನ್ ಮಾತನಾಡಿ, ಯುವಸಮೂಹದಲ್ಲಿ ನೈತಿಕ ಮೌಲ್ಯ ಹಾಗೂ ಮಾನವೀಯ ಮೌಲ್ಯದ ಕುಸಿತದಿಂದಾಗಿ ಸಮಾಜದಲ್ಲಿ ವೃದ್ಧಾಶ್ರಮ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘಗಳು ಹೆಚ್ಚುತ್ತಿರುವುದು ಬೇಸರದ ಸಂಗತಿ. ಆದರೂ, ನಮ್ಮಲ್ಲಿ ಹಿರಿಯರನ್ನು ಗೌರವಿಸುವ ಪರಂಪರೆ ಇನ್ನೂ ಉಳಿದಿದೆ ಎಂದರು.ವಕೀಲರಾದ ಬಿ.ಎನ್ ಗಂಗರತ್ನಮ್ಮ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಎಂ.ಪಿ. ರವೀಶ್, ಸಿಡಿಪಿಒ ಕೃಷ್ಣಮೂರ್ತಿ, ನಿವೃತ್ತ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ. ಬಸವರಾಜು, ಖಜಾಂಚಿ ಅಪ್ಪಾಜಿ, ದೊಡ್ಡಯ್ಯ ದೊಡ್ಡೇಗೌಡ, ವಕೀಲರಾದ ಕೆ. ಶೋಭಾ, ಅಕ್ಷತಾ ವಿಶ್ವನಾಥ್ ಹಾಗೂ ಹಿರಿಯ ನಾಗರಿಕರು, ವಕೀಲರು ಉಪಸ್ಥಿತರಿದ್ದರು.