ಪಾಠ ಮಾಡಲು ಶಿಕ್ಷಕರೇ ಇಲ್ದಿದ್ರೆ ಛೊಲೋ ರಿಸಲ್ಟ್‌ ಹ್ಯಾಂಗ್ರೀ ಬರ್ತದ..!?

| Published : Jun 27 2025, 12:48 AM IST

ಪಾಠ ಮಾಡಲು ಶಿಕ್ಷಕರೇ ಇಲ್ದಿದ್ರೆ ಛೊಲೋ ರಿಸಲ್ಟ್‌ ಹ್ಯಾಂಗ್ರೀ ಬರ್ತದ..!?
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಜಿಲ್ಲೆಯಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿಯಾಗ್ಯಾವ..! ಮಕ್ಕಳಿಗೆ ಪಾಠ ಮಾಡ್ಲಿಕ್ಕೆ ಟೀಚರ್ಸ್ಸೇ ಇಲ್ಲಾಂದ್ಮೇಲೆ, ಛೊಲೋ ರಿಸಲ್ಟ್‌ ಅದ್‌ ಹ್ಯಾಂಗ್ರೀ ಬರ್ತದ..!? ಆದ್ರೂನೂ, ಎಲ್ಲಾರೂ ಕೂಡಿ ಪ್ರಯತ್ನ ಮಾಡಿದ್ದಕ್ಕ ಈ ಸರ್ತಿ ನಮ್ಮ ಜಿಲ್ಲೆ (ಯಾದಗಿರಿ) ರಿಸಲ್ಟ್‌ ಸುಧಾರಿಸೇದ.

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿ ಜಿಲ್ಲೆಯಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿಯಾಗ್ಯಾವ..! ಮಕ್ಕಳಿಗೆ ಪಾಠ ಮಾಡ್ಲಿಕ್ಕೆ ಟೀಚರ್ಸ್ಸೇ ಇಲ್ಲಾಂದ್ಮೇಲೆ, ಛೊಲೋ ರಿಸಲ್ಟ್‌ ಅದ್‌ ಹ್ಯಾಂಗ್ರೀ ಬರ್ತದ..!? ಆದ್ರೂನೂ, ಎಲ್ಲಾರೂ ಕೂಡಿ ಪ್ರಯತ್ನ ಮಾಡಿದ್ದಕ್ಕ ಈ ಸರ್ತಿ ನಮ್ಮ ಜಿಲ್ಲೆ (ಯಾದಗಿರಿ) ರಿಸಲ್ಟ್‌ ಸುಧಾರಿಸೇದ. ನಕಲಿನ ಮಾತೇ ಇಲ್ಲ.. ಇದು ಪಕ್ಕಾ ಪ್ರಾಮಾಣಿಕ ರಿಸಲ್ಟ್‌. ನಮ್ಗೂನೂ ಸಮಾಧಾನ ಮೂಡಿಸೇದ. ಆದ್ರ, 60 ಪರ್ಸೆಂಟ್‌ಕ್ಕಿಂತ ಕಡಿಮಿ ರಿಸಲ್ಟ್ ಬಂದಿರೋ ಶಾಲೆಗಳಿಗೆ ನೋಟೀಸು, ಬಡ್ತಿ ಕಟ್‌ ಅಂತನ್ನೋ ಸರ್ಕಾರದ ಆದೇಶ ಅದೆಂಥಾ ವಿಚಿತ್ರ..! ರಿಸಲ್ಟ್ ಬೇಕಂತೀರಿ, ಟೀಚರ್ಸ್‌ ನೇಮಕಾತಿನ ಮಾಡಲಿಲ್ಲಾಂದ್ರ ನಾವೇನ್‌ ಮಾಡ್ಬೇಕು..!? "

2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ನೋಟೀಸ್‌ ಜಾರಿ ಮಾಡಿ, ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಿರುವ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಆದೇಶ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ನೀಡಿದಂತಿದೆ. ಸಾವಿರಾರು ಶಿಕ್ಷಕರ ಕೊರತೆ, ಶಾಲೆಗಳಲ್ಲಿನ ಅವ್ಯವಸ್ಥೆಗಳ ಮಧ್ಯೆಯೂ ಉತ್ತಮ ಫಲಿತಾಂಶಕ್ಕೆ ಪ್ರಾಮಾಣಿಕವಾಗಿ ದುಡಿದ ಜಿಲ್ಲೆಯ ಶಿಕ್ಷಕರ ವಲಯಕ್ಕೆ ಇದು ಆಘಾತ ಮೂಡಿಸಿದೆ, ಅಸಮಾಧಾನ ಮೂಡಿಸಿದೆ. ಈ ಭಾಗದ ಶಿಕ್ಷಣ ಹದಗೆಡಲು ಶಿಕ್ಷಕರು ಕಾರಣರೇ ? ಅಥವಾ ಸೌಲಭ್ಯಗಳ ನೀಡದ ಸರ್ಕಾರವೇ ಅನ್ನೋ ಪ್ರಶ್ನೆಗಳು ಕೇಳಿ ಬರತೊಡಗಿವೆ. ಸರ್ಕಾರದ ಈ ಆದೇಶ ಅದೆಷ್ಟರ ಮಟ್ಟಿಗೆ ಸರಿ ? ಈ ಬಗ್ಗೆ ಶಿಕ್ಷಣ ತಜ್ಞರು ಏನಂತಾರೆ ? ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿರುವ ಶಿಕ್ಷಕರ ವಲಯದ ಪ್ರತಿಕ್ರಿಯೆ ಏನು ಎಂಬ ಮುಂತಾದ ಕುರಿತು ಗುರುವಾರ "ಕನ್ನಡಪ್ರಭ " ಕಚೇರಿಯಲ್ಲಿ ಏರ್ಪಡಿಸಿದ್ದ ಫೋನ್‌ ಇನ್‌ ನೇರ ಸಂವಾದ ಕಾರ್ಯಕ್ರಮದಲ್ಲಿ ಈ ಮೇಲಿನಂತೆ ಅಭಿಪ್ರಾಯಗಳು, ಸರ್ಕಾರದ ಆದೇಶದ ಬಗ್ಗೆ ನೋವಿನ ನುಡಿಗಳು ಮೂಡಿಬಂದವು.

ನಿವೃತ್ತ ಉಪನ್ಯಾಸಕರು ಹಾಗೂ ಹಿರಿಯ ಪತ್ರಕರ್ತರಾದ ಪ್ರೊ. ಸಿ. ಎಂ. ಪಟ್ಟೇದಾರ್, ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಶಾಂತಗೌಡ ಪಾಟೀಲ್‌, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿವೃತ್ತ ಉಪನಿರ್ದೇಶಕರಾದ ಚೆನ್ನಬಸಪ್ಪ ಕುಳಗೇರಿ, ಡಯಟ್ ನಿವೃತ್ತ ಉಪನ್ಯಾಸಕ ಬಿ. ವೆಂಕೋಬ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರಾದ ರಾಯಪ್ಪಗೌಡ ಜಿ. ಹುಡೇದ್‌, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಅಶೋಕ ಕುಮಾರ ಕೆಂಭಾವಿ ಹಾಗೂ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳೊಳ್ಳಿ ಅವರು ಈ ಫೋನ್‌ ಇನ್‌ ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಯಾದಗಿರಿ ಜಿಲ್ಲೆಯ ಈ ಬಾರಿ ಫಲಿತಾಂಶದ ಕುರಿತು ಅಳೆದು ತೂಗಿ ನೋಡಿದರೆ ಸುಧಾರಣೆ ಕಂಡಿರುವುದರಲ್ಲಿ ಎರಡು ಮಾತಿಲ್ಲ. ಕಳೆದ ಬಾರಿಗಿಂತ (2023-24) ಸುಮಾರು ಶೇ.3 ರಷ್ಟು ಕಡಿಮೆ ಬಂದಿದೆ ಅನ್ನೋದು ದೊಡ್ಡದಲ್ಲ, ಈಗ ವಿವಿಧ ಗ್ರೇಡ್‌ಗಳಲ್ಲಿ ಉತ್ತೀರ್ಣರಾದವರ ಸಂಖ್ಯೆ ಹೆಚ್ಚಿರುವುದು ಮುಖ್ಯ ಎಂದು ಅಭಿಪ್ರಾಯ ತಿಳಿಸಿದ ಶಾಂತಗೌಡ ಪಾಟೀಲರು, ಸಾವಿರಾರು ಶಿಕ್ಷಕರ ಕೊರತೆಗಳ ಮಧ್ಯೆ ಇಂತಹ ಫಲಿತಾಂಶ ಶ್ಲಾಘನೀಯ ಎಂದರು.

ಇನ್ನು, ಶಿಕ್ಷಕರ ವಿರುದ್ಧ ನೋಟೀಸಿನ ಸರ್ಕಾರದ ಆದೇಶ ಸರಿಯಲ್ಲ ಎಂದು ಕಿಡಿ ಕಾರಿದ ನಿವೃತ್ತ ಉಪನ್ಯಾಸಕ ಪ್ರೊ. ಸಿ. ಎಂ. ಪಟ್ಟೇದಾರ್‌ ಅವರು, ಇದು ಶಿಕ್ಷಕರ ಬೆದರಿಕೆಯ ತಂತ್ರವಾಗಿದೆ. ಹಲವಾರು ಅವ್ಯವಸ್ಥೆಗಳ ಮಧ್ಯೆಯೂ ನಮ್ಮ ಶಿಕ್ಷಕರ ಪ್ರಯತ್ನಕ್ಕೆ ಸರ್ಕಾರದಿಂದ ಮೆಚ್ಚುಗೆ ಬರಬೇಕು. ಹಾಗೊಂದು ವೇಳೆ, ನೋಟೀಸ್‌ ಅಥವಾ ಅಮಾನತು ಕ್ರಮಕ್ಕೆ ಮುಂದಾದರೆ ಶಿಕ್ಷಕರ ವಲಯದ ಪರವಾಗಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.

ದ್ವಿತೀಯ ಪಿಯುಸಿ ಫಲಿತಾಂಶದ ಕುರಿತು ತಮ್ಮ ಅನುಭವ ಹಾಗೂ ಅಭಿಪ್ರಾಯವನ್ನು ಹಂಚಿಕೊಂಡ ನಿವೃತ್ತ ಉಪನಿರ್ದೇಶಕ (ಪದವಿ ಪೂರ್ವ ಶಿಕ್ಷಣ) ಚೆನ್ನಬಸಪ್ಪ ಕುಳಗೇರಿ ಅವರು, ಜಿಲ್ಲೆಯಲ್ಲಿ 23 ಸರ್ಕಾರಿ ಕಾಲೇಜುಗಳ ಪೈಕಿ 21 ರಲ್ಲಿ ಖಾಯಂ ಪ್ರಾಂಶುಪಾಲರು, 110ಕ್ಕೂ ಹೆಚ್ಚು ಉಪನ್ಯಾಸಕ ಹುದ್ದೆಗಳು ಖಾಲಿಯಿವೆ ಎಂದರು. ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ತುರ್ತು ನಿರ್ಧಾರ ಕೈಗೊಳ್ಳಲಿ, ಹಾಗೆಯೇ, ಪಾಲಕರೂ ಕೂಡ ತಮ್ಮ ತಮ್ಮ ಮಕ್ಕಳ ಕಲಿಕೆಯ ಬಗ್ಗೆಯೂ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿರಬೇಕು ಎಂದ ಕುಳಗೇರಿ ಅವರು, ಶಾಲಾ-ಕಾಲೇಜುಗಳಲ್ಲಿನ ಇಂತಹ ಕೊರತೆ, ಅವ್ಯವಸ್ಥೆಗಳ ಕಾರಣಗಳಿಂದ ಇಲ್ಲಿನ ಪ್ರತಿಭೆಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ದಾವಣೆಗೆರೆ ಮುಂತಾದೆಡೆ ವಲಸೆ ಹೋಗುತ್ತಿದ್ದಾರೆ. ಇದು ನಮ್ಮ ಜಿಲ್ಲೆಗೆ ಬಹುದೊಡ್ಡ ಶಾಪವಾಗಿ ಪರಿಣಮಿಸಿದೆ ಎಂದು ನೋವು ವ್ಯಕ್ತಪಡಿಸಿದರು.

ಸರ್ಕಾರ ಶಿಕ್ಷಕರನ್ನು ಬೋಧಕೇತರ ಕೆಲಸಗಳಿಗೆ ಬಳಸಿಕೊಳ್ಳದೆ ಪಾಠಗಳಲ್ಲಿ ತೊಡಗಿಸುವಂತೆ ಮಾಡಬೇಕು. ಶಿಕ್ಷಕರಿಗೆ ಎಲ್ಲ ಕೆಲಸ-ಕಾರ್ಯಗಳನ್ನು ಹಚ್ಚಿ ಪಾಠವೂ ಮಾಡಬೇಕು ಅಂದರೆ ಹೇಗೆ ಸಾಧ್ಯ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಜಿ. ಹುಡೇದ್, ಒಳ್ಳೆಯ ಫಲಿತಾಂಶ ಬೇಕು ಅಂದರೆ ಶಿಕ್ಷಕರನ್ನು ಅವರ ಪಾಡಿಗೆ ಪಾಠ ಮಾಡಲು ಬಿಡಿ ಎಂದು ನಾವು (ಸಂಘ) ಮನವಿ ಮಾಡಿದ್ದೇವೆ ಎಂದರು.

ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಣ ಕುಂಠಿತಕ್ಕೆ ಶಿಕ್ಷಕರ ಕೊರತೆ ಜೊತೆಗೆ, ನೂರೆಂಟು ಕೆಲಸಕ್ಕೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದು ಪ್ರಮುಖ ಕಾರಣ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಯಟ್‌ನ ನಿವೃತ್ತ ಉಪನ್ಯಾಸಕ ಬಿ. ವೆಂಕೋಬ, ಶಿಕ್ಷಕರನ್ನು ಮೊದಲು ಪಾಠ ಮಾಡಲು ಬಿಡಿ. ತರಬೇತಿ, ಎಲೆಕ್ಷನ್ನು, ಅದೂ, ಇದೂ, ಅಂತ ಎಲ್ಲ ಕೆಲಸಕ್ಕೆ ಸರ್ಕಾರ ಗಂಟೆಗಟ್ಟಲೇ ಬಳಸಿಕೊಂಡರೆ ಮಕ್ಕಳಿಗೆ ಯಾರು ಪಾಠ ಮಾಡಬೇಕು ಎಂದು ಪ್ರಶ್ನಿಸಿದರು.

ನಕಲು ತಡೆಗಟ್ಟುವಲ್ಲಿ ಈ ಬಾರಿ ನೂರಕ್ಕೆ ನೂರರಷ್ಟು ನಮ್ಮ ಜಿಲ್ಲೆ ಸಫಲವಾಗಿದೆ. ಈಗ ಬಂದಿರುವುದು ಒಳ್ಳೆಯ ಮತ್ತು ಪ್ರಾಮಾಣಿಕ ಫಲಿತಾಂಶ. ಸಾವಿರಾರು ಶಿಕ್ಷಕರ ಕೊರತೆ, ಪ್ರಾಥಮಿಕ ಹಂತದಲ್ಲೇ ಕಲಿಯುವಿಕೆ ಹಿಂದುಳಿದಿದ್ದರಿಂದ ಹೈಸ್ಕೂಲಿಗೆ ಬಂದ ಮಕ್ಕಳಿಗೆ ಆರಂಭದಿಂದ ಕಲಿಸುವ ಅನಿವಾರ್ಯತೆಯಿದೆ. ಆದರೂ, ನಮ್ಮ ಶಿಕ್ಷಕರು ಈ ಬಾರಿ ಶಕ್ತಿಮೀರಿ ದುಡಿದಿದ್ದಾರೆ. ಈಗ ಸರ್ಕಾರದ ಆದೇಶ ಪ್ರಾಮಾಣಿಕ ಶಿಕ್ಷಕರ ಹುಮ್ಮಸ್ಸು ಕುಂದಿಸಲಿದೆ, ಸರ್ಕಾರ ಈ ಬಗ್ಗೆ ಮರುಪರಿಶೀಲಿಸಲಿ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಕುಮಾರ್‌ ಕೆಂಭಾವಿ ಮನವಿ ಮಾಡಿದರು.

ಪ್ರಾಥಮಿಕ ಶಿಕ್ಷಣದಲ್ಲಿ 3 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದೆ. ಇದರಿಂದ ಪ್ರಾಥಮಿಕ ಹಂತದಲ್ಲಿ ಮಕ್ಕಳ ಕಲಿಯುವಿಕೆಗೆ ಹಿಂದೇಟಿಗೆ ಪ್ರಮುಖ ಕಾರಣವಾಗಿದೆ. ಇರಲಿ, ಈ ಕೊರತೆಗಳ ಮಧ್ಯೆ ಪಾಠ ಮಾಡಬೇಕೆಂದರೆ ಸರ್ಕಾರದ ಅನೇಕ ಕೆಲಸ ಕಾರ್ಯಗಳಿಗೆ ಶಿಕ್ಷಕರ ಬಳಕೆ ಪೂರ್ಣ ಪ್ರಮಾಣದ ಕಲಿಕೆಗೆ ಅಡ್ಡಿಯಾಗುತ್ತಿದೆ ಎಂದು ಅಳಲು ವ್ಯಕ್ತಪಡಿಸಿದ ಸರ್ಕಾರ ಪ್ರಾಥಮಿಕ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳೊಳ್ಳಿ, ತರಕಾರಿ ತರೋದು, ಅಡುಗೆ ಮೇಲ್ವಿಚಾರಣೆ ನಡೆಸೋದು, ಮೊಟ್ಟೆ- ಹಣ್ಣು ತರೋದು, ಹೀಗೆ ಒಂದಲ್ಲಾ ಎರಡಲ್ಲಾ ಎಲ್ಲದಕ್ಕೂ ನಮ್ಮನ್ನೇ ಜವಾಬ್ದಾರಿಯಾಗಿಸುವದರಿಂದ ಯಾವುದನ್ನು ಮಾಡಬೇಕು ಅನ್ನೋದೇ ಗೊಂದಲ ಮೂಡಿಸುತ್ತಿದೆ ಎಂದರು.

ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ, ನೂರಾರು ಶಿಕ್ಷಕರ ಅಂತರ್‌ ಜಿಲ್ಲೆ, ಅಂತರ್‌ ವಿಭಾಗಕ್ಕೆ ವರ್ಗಾವಣೆ, ಕಟ್ಟಡಗಳ ಕೊರತೆ, ಮಕ್ಕಳ ಗೈರು, ಸರ್ಕಾರದ ಯೋಜನೆ-ತರಬೇತಿಗಳಲ್ಲಿ ಪಾಲ್ಗೊಳ್ಳುವಿಕೆ ಮುಂತಾದವುಗಳ ಬಗ್ಗೆ ಗಂಭೀರವಾದ ಚಿಂತನೆಗಳುಳ್ಳ ಚರ್ಚೆಗಳಾದವು. ಸರ್ಕಾರದ ನೋಟೀಸಿನ ಆದೇಶ ವಾಪಸ್‌ ಪಡೆಯುವ ಬಗ್ಗೆ ಕೋರಲಾಯಿತು. ಜಿಲ್ಲೆಯ ಶಿಕ್ಷಣ ಮಟ್ಟ ಹಾಗೂ ಫಲಿತಾಂಶ ಸುಧಾರಣೆಗೆ ಕೈಗೊಂಡ, ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಚಿಂತನ ಮಂಥನ ನಡೆಯಿತು. ಸುರಪುರದಿಂದ ಧೀರೇಂದ್ರ ಭಕ್ರಿ, ದೊಡ್ಡಮನಿ ಮುಂತಾದವರು ಫೋನಾಯಿಸಿ ಅನೇಕ ಸಲಹೆ ಸೂಚನೆಗಳ ನೀಡಿದರು. ಸಮಾರು ಎರಡೂವರೆ ಗಂಟೆ ಕಾಲ ನಡೆದ ಈ ಕಾರ್ಯಕ್ರಮ ಶಿಕ್ಷಣಾಸಕ್ತರ ಹಾಗೂ ಶಿಕ್ಷಕರ ವಲಯದಲ್ಲಿ ಹೊಸ ಆಶಾಭಾವ ಮೂಡಿಸಿತ್ತು.