ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜೂನ್ ತಿಂಗಳಲ್ಲೇ ಕೆಆರ್‌ಎಸ್ ಭರ್ತಿಯಾಗಿದ್ದರೂ ವಿಶ್ವೇಶ್ವರಯ್ಯ ನಾಲೆ ಸೇರಿದಂತೆ ವಿವಿಧ ನಾಲಾ ವ್ಯಾಪ್ತಿಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ಕೃಷ್ಣರಾಜಸಾಗರ ಜಲಾಶಯದಿಂದ ನೀರು ಹರಿಸದೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಟೀಕಿಸಿದ್ದಾರೆ.ಕೃಷ್ಣರಾಜಸಾಗರ ಜಲಾಶಯ ತುಂಬಿದ್ದು, ಈಗಾಗಲೇ ಮುಖ್ಯಮಂತ್ರಿಗಳು ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದಾರೆ. ಕೆ.ಆರ್.ಎಸ್.ತುಂಬಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ನಾಲೆಗಳಲ್ಲಿ ನೀರು ಹರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು. ಬಾಗಿನ ಅರ್ಪಿಸಿ ಒಂದು ವಾರ ಕಳೆದರೂ ಇನ್ನೂ ನಾಲೆಗಳಲ್ಲಿ ನೀರು ಹರಿಸುತ್ತಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ 969 ಕೆರೆಗಳಿದ್ದು, ಕೆರೆಗಳು ಅರ್ಧಂಬರ್ಧ ತುಂಬಿವೆ. ಸಮುದ್ರದ ನಂಟಿದ್ದರೂ ಉಪ್ಪಿಗೆ ಬರ ಎನ್ನುವಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕೆ.ಆರ್.ಎಸ್.ಭರ್ತಿಯಾಗಿ, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಆ ನೀರು ನೇರವಾಗಿ ತಮಿಳುನಾಡಿನ ಡ್ಯಾಂಗಳನ್ನೂ ತಲುಪುತ್ತಿದೆ. ಆದರೆ, ಸರ್ಕಾರ ಮಂಡ್ಯ ಜಿಲ್ಲೆಯ ಕೆರೆ-ಕಟ್ಟೆಗಳು ಹಾಗೂ ನಾಲೆಗಳಿಗೆ ನೀರು ಹರಿಸದೆ ರೈತರ ಕಬ್ಬು ಬೆಳೆಯನ್ನು ಒಣಗಿಸುತ್ತಿದೆ ಎಂದು ಕಿಡಿಕಾರಿದ್ದಾರೆ.ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕೆ.ಆರ್.ಎಸ್‌ನ ಒಳಹರಿವು ಹೆಚ್ಚಾಗಿದ್ದರೂ, ತಮಿಳುನಾಡಿನ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಚಿಂತನೆ ನಡೆಸುತ್ತಿದ್ದಾರೆಯೇ ಹೊರತು ಈ ವ್ಯಾಪ್ತಿಯ ಕೆರೆ-ಕಟ್ಟೆಗಳನ್ನು ತುಂಬಿಸುವ ಬಗ್ಗೆ ಗಮನವಿಲ್ಲ ಎಂದು ದೂರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರೇ ಸ್ವತಃ ಕೃಷಿ ಖಾತೆಯನ್ನು ಹೊಂದಿದ್ದಾರೆ. ಈ ಬಗ್ಗೆ ಅವರಿಗೆ ಕೃಷಿಯ ಬಗ್ಗೆ ಹೆಚ್ಚಿನ ಜ್ಞಾನ ಇರಬೇಕು. ಜಿಲ್ಲೆಯ ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಯಾವ ಯೋಜನೆಗಳನ್ನೂ ರೂಪಿಸಿಲ್ಲ. ಕನಿಷ್ಠ ಪಕ್ಷ ತಕ್ಷಣವೇ ನಾಲೆಗಳಿಗೆ ನೀರು ಹರಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಸಿಎಂ ಮಾತಿಗೆ ಕವಡೆ ಕಾಸಿನ ಮನ್ನಣೆಯನ್ನೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀಡುತ್ತಿಲ್ಲ. ರೈತರು ಇನ್ಯಾರ ಮೊರೆ ಹೋಗಬೇಕು. ತಕ್ಷಣವೇ ನಾಲೆಗಳಲ್ಲಿ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸದಿದ್ದಲ್ಲಿ ರೈತರೊಂದಿಗೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.