ಸಾರಾಂಶ
ಹಾವೇರಿ: ಹಿಂದೂಗಳ ಮೇಲೆ ಜಿಹಾದಿಗಳ ದಬ್ಬಾಳಿಕೆ ಹೆಚ್ಚಾಗುತ್ತಿದ್ದು, ಹಿಂದೂಗಳು ತಮ್ಮ ಒಳಪಂಗಡಗಳನ್ನು ಬಿಟ್ಟು ಭಾರತೀಯತೆ ಮತ್ತು ಹಿಂದುತ್ವದಡಿ ಸಂಘಟಿತರಾಗಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಬುಧವಾರ ಕ್ರಾಂತಿವೀರ ಬ್ರಿಗೇಡ್ ವತಿಯಿಂದ ಮಾಸೂರಿನ ಯುವತಿ ಸ್ವಾತಿ ಹತ್ಯೆ ಖಂಡಿಸಿ ಹಮ್ಮಿಕೊಂಡಿದ್ದ ನ್ಯಾಯ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಿಂದೂ ಸಮಾಜ, ಹಿಂದೂ ಯುವತಿಯರ ರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು. ಡಾ. ಬಿ.ಆರ್. ಅಂಬೇಡ್ಕರ ದಲಿತ ನಾಯಕ ಅಲ್ಲ, ಎಲ್ಲ ಧರ್ಮದವರಿಗೆ ಅವರು ನಾಯಕ. ಭಾರತದಲ್ಲಿರುವ ಕೊನೆಯ ಮುಸ್ಲಿಂ ಪಾಕಿಸ್ತಾನಕ್ಕೆ ಹೋಗಬೇಕು. ಪಾಕಿಸ್ತಾನದಲ್ಲಿರುವ ಕೊನೆಯ ಹಿಂದೂ ಭಾರತಕ್ಕೆ ಬರಬೇಕು. ಅಂದಾಗ ಭಾರತ ಭಾರತವಾಗಿ ಉಳಿಯಲು ಸಾಧ್ಯ. ಮುಸ್ಲಿಮರು ದೇಶದಲ್ಲಿರುವ ತನಕ ಶಾಂತಿ ಸಾಮರಸ್ಯ ಇರುವುದಿಲ್ಲವೆಂದು ಅಂಬೇಡ್ಕರ ಹೇಳಿದ್ದಾರೆ ಎಂದರು.ಅಂಬೇಡ್ಕರ್ ಅವರು ನಿಜವಾಗಿ ಭಾರತದ ಪ್ರಧಾನಿ ಆಗಬೇಕಿತ್ತು. ನೆಹರೂ ಚಿತಾವಣೆಯಿಂದ ಅದು ತಪ್ಪಿದೆ. ದೇಶಕ್ಕೆ ಚರಕ ಸುತ್ತುವುದರಿಂದ ಸ್ವಾತಂತ್ರ್ಯ ಸಿಕ್ಕಿಲ್ಲ, ಸುಭಾಷ್ ಚಂದ್ರಬೋಸ್‌ರ ಆಜಾದ್ ಹಿಂದ್ ಫೌಜ್ ಸಂಘಟನೆಯಿಂದ ಸ್ವಾತಂತ್ರ್ಯ ಸಿಕ್ಕಿದೆ. ಸಾಮಾಜಿಕ ಕ್ರಾಂತಿ ಮೂಲಕ ಸಮಾಜದಲ್ಲಿ ಸಮಾನತೆ ತರಲು ಬಸವಣ್ಣ ಹೋರಾಡಿದರು. ಅಂತಹದ್ದರಲ್ಲಿ ಅವರ ಹೆಸರೇ ಹೇಳಿಕೊಂಡು ಬದುಕುವ ಹಿಂದೂ ಸ್ವಾಮೀಜಿ ಕಾಶ್ಮೀರ ಘಟನೆ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಮ್ಮ ಹೋರಾಟ ಜಿಹಾದಿ ಮನಸ್ಥಿತಿ ಮತಾಂಧರ ವಿರುದ್ಧ. ಹಿಂದೂ ಪೊಲೀಸರು ಗಟ್ಟಿಯಾಗಬೇಕು. ಹಿಂದೂಗಳು ಯಾರಾದರೂ ಮನೆ ಸುಡುವ ಕೆಲಸ ಮಾಡಿದ್ದಾರಾ, ಅತ್ಯಾಚಾರ ಮಾಡಿ ನದಿಗೆ ಎಸೆದಿದ್ದಾರಾ? ಹುಬ್ಬಳ್ಳಿಯಲ್ಲಿ ಪೊಲೀಸ್ ಅಧಿಕಾರಿ ಅನ್ನಪೂರ್ಣ ಅವರು ಮಾಡಿದಂತೆ ಪುರುಷ ಪೊಲೀಸ್ ಅಧಿಕಾರಿಗಳು ಗಟ್ಟಿ ನಿರ್ಧಾರ ಮಾಡಬೇಕು. ನೀವ್ಯಾರೂ ಹೊರಗೆ ಬಂದು ಹೋರಾಟ ಮಾಡಬೇಕಿಲ್ಲ. ಭವಿಷ್ಯದಲ್ಲಿ ಹಿಂದುತ್ವ ಗಟ್ಟಿಯಾಗಿ ಉಳಿಯಬೇಕು ಎಂದರೆ ಹಿಂದೂ ಸಮಾಜ ರಕ್ಷಿಸುವವರಿಗೆ ಮತ ನೀಡಬೇಕು. ಹಿಂದುತ್ವಕ್ಕೆ ಅಪಮಾನ ಮಾಡುವವರು ಹಿಂದೂಗಳೇ ಅಲ್ಲ, ಹಿಂದೂ ವಿರುದ್ಧ ಮಾತನಾಡುವವರು ಪಾಕಿಸ್ತಾನಿಗಳು. ದೇಶದಲ್ಲಿ ಭಂಡಾರ, ಕುಂಕುಮ, ಅಂಬೇಡ್ಕರ ಅವರ ಸಂವಿಧಾನ ಉಳಿಯಬೇಕಾದರೆ ಹಿಂದುಗಳು ಒಗ್ಗಟ್ಟಾಗಬೇಕು ಎಂದರು. ಕ್ರಾಂತಿವೀರ ಬ್ರಿಗೇಡ್‌ನ ಕಾರ್ಯಾಧ್ಯಕ್ಷ ಕೆ.ಇ. ಕಾಂತೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ತಿಂಗಳು ಹತ್ಯೆಗೊಳಗಾದ ಮಾಸೂರಿನ ಸಹೋದರಿ ಸ್ವಾತಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾದರೆ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಕುಟುಂಬಸ್ಥರಿಗೆ ಕನಿಷ್ಠ ₹25 ಲಕ್ಷ ಪರಿಹಾರ ನೀಡಬೇಕು. ಕುಟುಂಬದವರಿಗೆ ಸರ್ಕಾರಿ ನೌಕರಿ ಕೊಡಬೇಕು. ಪ್ರಮುಖವಾಗಿ ಆರೋಪಿತನಿಗೆ ಜೀವಾವಧಿ ಶಿಕ್ಷೆ ಕೊಡಿಸಬೇಕು. ಮುಸ್ಲಿಮಗೆ ಶೇ. 4ರಷ್ಟು ಮೀಸಲಾತಿ ಕೊಟ್ಟಿದ್ದು, ಅದನ್ನು ವಾಪಸ್ ಹಿಂಪಡೆಯಬೇಕೆಂದು ಒತ್ತಾಯಿಸಿದರು.ಈ ವೇಳೆ ಅರಟಾಳದ ಅಮೋಘಸಿದ್ದ ಆಶ್ರಮದ ಅಮರಸಿದ್ದ ವಡೆಯರ್, ಶಹಾಪುರ ಕಾಡಮಗೇರಿ ಓದುಸಿದ್ದ ಮಹಾರಾಜರು, ಮುಖಹಾಪೂರದ ಸೋಮೇಶ್ವರ ಸ್ವಾಮೀಜಿ, ಕೌಲಗುಡ್ಡ ಸಿದ್ದಾಶ್ರಮದ ಅಮರೇಶ್ವರ ಸ್ವಾಮೀಜಿ, ತಂಗೋಡದ ಶಿವಕುಮಾರ ಸ್ವಾಮೀಜಿ, ಶ್ರದ್ಧಾನಂದಮಠದ ವಶಿಷ್ಟ ಸ್ವಾಮೀಜಿ, ಬಿಳಿಯಾನಸಿದ್ದ ಸ್ವಾಮೀಜಿ, ಬಣ್ಣ ಸಿದ್ದೇಶ್ವರ ಸ್ವಾಮೀಜಿ, ಕೃಷ್ಣಾನಂದ ಸ್ವಾಮೀಜಿ, ಮಾದುಲಿಂಗ ಸ್ವಾಮೀಜಿ, ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಕ್ರಾಂತಿವೀರ ಬ್ರೀಗೇಡ್‌ನ ಪದಾಧಿಕಾರಿಗಳು ಇದ್ದರು.
ವೇದಿಕೆಯಲ್ಲಿ ಕಣ್ಣೀರಿಟ್ಟ ಸ್ವಾತಿ ತಾಯಿ.. ಯುವತಿ ಸ್ವಾತಿ ಹತ್ಯೆ ಖಂಡಿಸಿ ಕ್ರಾಂತಿವೀರ ಬ್ರಿಗೇಡ್ ವತಿಯಿಂದ ಏರ್ಪಡಿಸಿದ್ದ ನ್ಯಾಯ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾತಿ ತಾಯಿ ಕರಿಯಮ್ಮ ಬ್ಯಾಡಗಿ ಮಾತನಾಡಿ, ನಮ್ಮ ಮಗಳಿಗೆ ಬಂದ ಸ್ಥಿತಿ ಮತ್ತೊಬ್ಬ ಹೆಣ್ಣುಮಕ್ಕಳಿಗೆ ಬರಬಾರದು. ತಪ್ಪಿತಸ್ಥ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಕಣ್ಣೀರಿಟ್ಟರು.ಕ್ರಾಂತಿವೀರ ಬ್ರಿಗೇಡ್ ಕಾರ್ಯಕರ್ತರಿಂದ ನ್ಯಾಯ ಜಾಥಾಕಾಗಿನೆಲೆ ರಸ್ತೆಯ ಮುರುಘರಾಜೇಂದ್ರ ಮಠದಿಂದ ಆರಂಭಗೊಂಡ ನ್ಯಾಯ ಜಾಥಾ ಪಿಬಿ ರಸ್ತೆಯ ಮೂಲಕ ಹೊಸಮನಿ ಸಿದ್ದಪ್ಪ ವೃತ್ತವನ್ನು ತಲುಪಿ ಬಳಿಕ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಸಮಾವೇಶಗೊಂಡಿತು. ನ್ಯಾಯ ಜಾಥಾದಲ್ಲಿ ಪಾಲ್ಗೊಂಡಿದ್ದ ಕ್ರಾಂತಿವೀರ ಬ್ರಿಗೇಡ್ ಕಾರ್ಯಕರ್ತರು ಸ್ವಾತಿ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.ಮೋದಿ ಪ್ರಧಾನಿಯಾಗಿದ್ದರಿಂದ ಹಿಂದೂಗಳು ಉಳಿದಿದ್ದಾರೆ: ಯತ್ನಾಳ್
ಹಾವೇರಿ: ನರೇಂದ್ರ ಮೋದಿ ಅವರು ಪ್ರಧಾನಿ ಆಗಿರುವುದರಿಂದ ಹಿಂದೂಗಳು ಇಷ್ಟಾದರೂ ಉಳಿದುಕೊಂಡಿದ್ದೇವೆ. ರಾಹುಲ್ ಗಾಂಧಿ ಅಥವಾ ಸಿದ್ದರಾಮಯ್ಯನಂತವರು ಪ್ರಧಾನಿಯಾಗಿದ್ದರೆ ಹಿಂದೂಗಳ ಸರ್ವನಾಶವಾಗುತ್ತಿತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಅಫ್ಘಾನಿಸ್ತಾನದಿಂದ ಹಿಡಿದು ಪಾಕಿಸ್ತಾನ, ಬಾಂಗ್ಲಾದೇಶ ಎಲ್ಲೆಡೆ ಹಿಂದೂಗಳಿದ್ದರು. ಆದರೆ ಇವತ್ತು ಹಿಂದೂಗಳ ಭೌಗೋಳಿಕ ವಾಸಸ್ಥಳ ಕುಗ್ಗಿದೆ. ಪ್ರಸ್ತುತ ಭಾರತದಲ್ಲೂ ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲದಂತಾಗಿದೆ. ಹೀಗಾದರೆ ಹಿಂದುಗಳು ಎಲ್ಲಿಗೆ ಹೋಗಬೇಕು? ಕೆಲ ಲಿಂಗಾಯತ ಸ್ವಾಮಿಗಳು ಇಸ್ಲಾಂ ಶಾಂತಿಯ ಧರ್ಮ, ಲಿಂಗಾಯತ ಮತ್ತು ಇಸ್ಲಾಂ ಧರ್ಮದಲ್ಲಿ ಬಹಳಷ್ಟು ಸಾಮ್ಯತೆ ಇದೆ ಎನ್ನುತ್ತಿದ್ದರು. ಪ್ರಸ್ತುತ ಕಾಶ್ಮೀರದಲ್ಲಿ ಹಿಂದೂಗಳನ್ನೇ ಆರಿಸಿ ಕಗ್ಗೊಲೆ ಮಾಡಿದ್ದಾರೆ. ಸಮಾನತೆ ಸಾರುವ ಸ್ವಾಮಿಗಳು ಇದಕ್ಕೆ ಏನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.ಸಿದ್ದರಾಮಯ್ಯ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಕೊಟ್ಟಿದ್ದು ಸಂವಿಧಾನ ಬಾಹಿರ. ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ಬರುವುದಿಲ್ಲ. ಅದರ ಬದಲು ಹಿಂದೂಗಳಲ್ಲೇ ವಾಲ್ಮೀಕಿ ಸಮುದಾಯಕ್ಕೋ, ಹಾಲುಮತ ಸಮುದಾಯಕ್ಕೋ ಅಥವಾ ಇನ್ಯಾವುದೋ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ಕೊಡಲಿ. ಸಿದ್ದರಾಮಯ್ಯ 25 ಸಾವಿರ ಮುಸ್ಲಿಂ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲೆ ಕಲಿಸಲು ಹೊರಟಿದ್ದಾರೆ. ಇದು ಮುಸ್ಲಿಮರಿಂದ ಹಿಂದೂ ಹೆಣ್ಣುಮಕ್ಕಳ ಮೆಲೆ ದಾಳಿ ಮಾಡಿಸುವ ಸಂಚು ಎಂದು ಆರೋಪಿಸಿದರು.ಇನ್ನು ಮುಂದೆ ಪ್ರತಿಕಾರ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ನಪುಂಸಕ ಜಾತ್ಯತೀತವಾದಿಗಳು ಬಿಜೆಪಿ, ಕಾಂಗ್ರೆಸ್ ಎಲ್ಲ ಪಕ್ಷದಲ್ಲೂ ಇದ್ದಾರೆ. ಇಂಥವರು ತೊಲಗಬೇಕು. ಯೋಗಿ ಆದಿತ್ಯನಾಥ್ ತರದವರು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.