ಸಾರಾಂಶ
ಪ್ರಾಕೃತಿಕ ಅಸಮತೋಲನಕ್ಕೆ ಮನುಷ್ಯನೇ ಮೂಲ ಕಾರಣ । ಮಲ್ಲನಕುಪ್ಪೆ ಶಿವರಾಮೇಗೌಡರ ತೋಟದಲ್ಲಿ ಚಿಂತನ-ಮಂಥನ
ಕನ್ನಡಪ್ರಭ ವಾರ್ತೆ ಮಂಡ್ಯಪರಿಸರದಲ್ಲಿ ಆಗುತ್ತಿರುವ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿ ಮಾನವ ಜನಾಂಗ ಎಚ್ಚೆತ್ತುಕೊಂಡು ಸಂರಕ್ಷಣೆ ಮಾಡದಿದ್ದರೆ ಸರ್ವನಾಶ ಖಚಿತ ಎಂದು ವಿಕಸನ ಸಂಸ್ಥೆ ಮುಖ್ಯಸ್ಥ ಮಹೇಶ್‌ಚಂದ್ರ ಗುರು ಎಚ್ಚರಿಸಿದರು.
ಬೆಲ್ಲದ ನಾಡು ರೈತ ಉತ್ಪಾದಕರ ಕಂಪನಿಗಳ ಒಕ್ಕೂಟದ ನೇತೃತ್ವದಲ್ಲಿ ಮದ್ದೂರು ತಾಲೂಕು ಮಲ್ಲನಕುಪ್ಪೆ ಗ್ರಾಮದ ಸಾವಯವ ಕೃಷಿಕ ಶಿವರಾಮೇಗೌಡ ಅವರ ಸಮಗ್ರ ಕೃಷಿಯ ತೋಟದಲ್ಲಿ ಆಯೋಜಿಸಿದ್ದ ಪ್ರಗತಿಪರ ರೈತರು, ಸಾವಯವ ಕೃಷಿಕರು, ಎಫ್‌ಪಿಒ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಚಿಂತನ- ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಣ್ಣಿಗೆ ತುಂಬಾ ಶಕ್ತಿ ಇದೆ. ಮನುಷ್ಯರಾದ ನಾವು ಅದಕ್ಕೆ ವಿಷವಿಕ್ಕುವುದಕ್ಕೆ ಮಾತ್ರ ಸೀಮಿತವಾಗಿದ್ದೇವೆ. ಪರಿಸರ ಸಂರಕ್ಷಣೆ ಮಾಡದೆ ಅದನ್ನೂ ನಾಶ ಮಾಡುತ್ತಿದ್ದೇವೆ. ಇಂದಿನ ಎಲ್ಲಾ ಪ್ರಾಕೃತಿಕ ಅಸಮತೋಲನಕ್ಕೆ ಮನುಷ್ಯನೇ ಮೂಲ ಕಾರಣ ಎಂದು ಹೇಳಿದರು.
ಉತ್ಪಾದನೆಯಲ್ಲಿ ಸುಸ್ಥಿರ ಕೃಷಿ ಮೂಲಕ ಹಸಿರು ಉದ್ಯಮವನ್ನು ಉತ್ತೇಜಿಸಿ, ಹಸಿರು ಆರ್ಥಿಕತೆಯನ್ನು ಪೋಷಿಸಬೇಕಿದೆ. ಬಹು ರಾಷ್ಟ್ರೀಯ ಕಂಪನಿಗಳು ಉತ್ಪಾದನೆ ಮತ್ತು ಆದಾಯವನ್ನು ಮಾತ್ರ ಯೋಚಿಸುತ್ತಾರೆ. ಆದರೆ, ರೈತ ಉತ್ಪಾದಕ ಕಂಪನಿಗಳು ಪ್ರಕೃತಿಯನ್ನು ಉಳಿಸಿ, ಆರ್ಥಿಕ ಅಭಿವೃದ್ಧಿಯತ್ತ ಗಮನಹರಿಸಬೇಕು. ರೈತರೂ ಸಹ ತಮಗೆ ಆದಾಯ ತಂದುಕೊಡುವ ಮಾರ್ಗಗಳನ್ನು ಹುಡುಕಿಕೊಂಡರೆ ಮಾತ್ರ ಅವರ ಉದ್ದಾರ ಸಾಧ್ಯ ಎಂದು ತಿಳಿಸಿದರು.ಬೆಲ್ಲದನಾಡು ರೈತ ಉತ್ಪಾದಕರ ಕಂಪನಿಗಳ ಒಕ್ಕೂಟದ ಅಧ್ಯಕ್ಷ ಕಾರಸವಾಡಿ ಮಹದೇವ ಮಾತನಾಡಿ, ಇಂದಿನಿಂದ ಆರಂಭ ವಾಗುತ್ತಿರುವ ತೋಟ ಕಂ, ಊಟ ಕೃಷಿ ಬೆಳಕು ಚಿಂತನ- ಮಂಥನ ಕಾರ್ಯಕ್ರಮವು ಪ್ರತಿ ತಿಂಗಳು ಒಂದೊಂದು ಸಾವಯವ ಕೃಷಿಕರ ಜಮೀನಿನಲ್ಲಿ ನಡೆಯಲಿದೆ. ಈ ಚಿಂತನ ಸಭೆಯಲ್ಲಿ ಇಂದಿನಂತೆ ಪ್ರಗತಿಪರ ಕೃಷಿಕರು, ರೈತ ಕಂಪನಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕುಟುಂಬ ಸಮೇತರಾಗಿ ಭಾಗವಹಿಸಲಿದ್ದಾರೆ. ಸರ್ಕಾರ ರೈತ ಪರವಾದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ನಮ್ಮ ಜಿಲ್ಲೆಯಲ್ಲಿ ೩೩ ರೈತ ಉತ್ಪಾದಕರ ಕಂಪನಿಗಳಿದ್ದು, ಅವುಗಳ ಶ್ರೇಯೋಭಿವೃದ್ದಿಯ ಮೂಲಕ ಸಮಗ್ರ ಜಿಲ್ಲೆಯ ಅಭಿವೃದ್ಧಿ ಮಾಡುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಸಾವಯವ ರೈತ ಶಿವರಾಮೇಗೌಡ ಹಾಗೂ ಪತ್ನಿ ಸಣ್ಣಮ್ಮ ಇವರನ್ನು ಅಭಿನಂದಿಸಲಾಯಿತು. ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಅಧ್ಯಕ್ಷತೆ ವಹಿಸಿದ್ದರು, ಮೈಸೂರು ಜಿಲ್ಲಾ ಸಾಮಾಜಿಕ ಅರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಮಂಡ್ಯ ತಾಲೂಕು ಆಲಕೆರೆ ಗ್ರಾಮದ ರೈತಶಾಲೆ ಮುಖ್ಯಸ್ಥ ಸತ್ಯಮೂರ್ತಿ, ನಿವೃತ್ತ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಿ.ಪಿ ಸ್ವಾಮಿ, ರೈತ ಉತ್ಪಾದಕರ ಒಕ್ಕೂಟದ ರಾಜ್ಯ ನಿರ್ದೇಶಕ ರಾಜೇಶ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ಸುಂದರ್‌ರಾಜ್ ಇತರರಿದ್ದರು.