ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜನಪದ ಸಂಸ್ಕೃತಿ ಎಂದರೇ ಮನುಕುಲದ ಮೂಲ ಸಂಸ್ಕೃತಿ. ಇದನ್ನು ಮನುಷ್ಯ ಮರೆತರೆ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಎಂದು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಹಂಪನಹಳ್ಳಿ ತಿಮ್ಮೇಗೌಡರು ತಿಳಿಸಿದರು.ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕ ಹಾಗೂ ಕಾಂತಮ್ಮ ಮಹಿಳಾ ಕಾಲೇಜು ಇವುಗಳ ಸಹಯೋಗದೊಂದಿಗೆ ಇತ್ತಿಚಿಗೆ ನಡೆದ ಜಿಲ್ಲಾ ಜಾನಪದ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಪದ ಸಂಸ್ಕೃತಿ ಮನುಕುಲದ ಮೂಲ ಸಂಸ್ಕೃತಿ, ಇದನ್ನು ಮನುಷ್ಯ ಮರೆತರೆ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ, ಇಂದಿನ ಆಧುನಿಕ ಧಾವಂತದ ಬದುಕಿನಲ್ಲಿ ಮಾನವ ಸಮುದಾಯಕ್ಕೆ ನೆಮ್ಮದಿ ನೀಡುವ ಶಕ್ತಿ ಜಾನಪದಕ್ಕಿದೆ. ಜನಪದ ಸಂಸ್ಕೃತಿಯಲ್ಲಿ ಅನೇಕ ಪ್ರಕಾರಗಳಿವೆ. ಇದರಲ್ಲಿ ಜೀವನ ಮೌಲ್ಯಗಳಿವೆ ಆದ್ದರಿಂದ ಇಂದಿನ ಯುವ ಜನತೆ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಆರ್.ಟಿ. ದ್ಯಾವೇಗೌಡರು, ಜನಪದ ಭಾಷೆ, ಸಾಹಿತ್ಯ ನಮ್ಮ ಗ್ರಾಮೀಣ ಸಮುದಾಯದಿಂದ ಮೂಡಿ ಬಂದಿದೆ. ನಾವುಗಳು ಸಹ ಜನಪದ ಹಿನ್ನೆಲೆಯಿಂದ ಬಂದಿದ್ದೇವೆ. ಜನಪದ ಸಂಸ್ಕೃತಿಯನ್ನು ಎಲ್ಲಾ ಸಂಸ್ಕೃತಿಯ ತಾಯಿ ಬೇರು ಎಂದು ಗೌರವಿಸಲಾಗಿದೆ. ಜಾನಪದ ಪರಿಷತ್ತು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಜಾನಪದ ಷರಿಷತ್ತಿನ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆಯು ಸಂಪೂರ್ಣ ಸಹಕಾರವನ್ನು ನೀಡುತ್ತದೆ ಎಂದು ಹೇಳಿದರು. ಜಾನಪದ ವಿದ್ವಾಂಸರಾದ ಮೇಟಿಕೆರೆ ಹಿರಿಯಣ್ಣ ಮಾತನಾಡಿ, ಎಚ್.ಎಸ್.ನಾಗೇಗೌಡರ ಮಾರ್ಗದರ್ಶನದಲ್ಲಿ ಬೆಳೆದ ನಾವು ಜಾನಪದ ಸಾಹಿತ್ಯ ಸಂರಕ್ಷಣೆಯಲ್ಲಿ ತೊಡಗಲು ಪ್ರೇರಣೆಯಾಯಿತು ಎಂದರು. ಜಿಲ್ಲಾ ಜಾನಪದ ಸಂಭ್ರಮಕ್ಕೆ ಮೆರವಣಿಗೆಗೆ ಚಾಲನೆ ನೀಡಿದರು.ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಜಗದೀಶ್ ಚೌಡುವಳ್ಳಿ ಮಾತನಾಡಿ, ಜಾನಪದ ಪರಿಷತ್ತು ಹಮ್ಮಿಕೊಂಡಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದುದು. ಹಾಸನ ಜಿಲ್ಲೆ ವಿಶೇಷವಾಗಿ ಕಲೆ, ಸಾಹಿತ್ಯ, ಸಂಸ್ಕೃತಿಗಳ ತವರೂರು ಎಲ್ಲಾ ವಿದ್ಯಾರ್ಥಿಗಳು ಜನಪದ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಆಸಕ್ತಿಯನ್ನು ವಹಿಸಲು ಈ ಕಾರ್ಯಕ್ರಮ ಮುನ್ನೋಟವಾಗಲಿ ಎಂದರು.
ಇದೇ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೀ.ಚ. ಯತೀಶ್ವರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಜನಪದ ಸಾಹಿತ್ಯ ಮತ್ತು ಸಂಸ್ಕೃತಿ ಇಡೀ ವಿಶ್ವದಲ್ಲಿಯೇ ವಿನೂತನವಾದುದು, ಜಾನಪದಕ್ಕೆ ತನ್ನದೇ ಆದ ಚಹರೆಯಿದೆ. ಜನಪದ ಸಾಹಿತ್ಯದಲ್ಲಿ ಹಲವು ಪ್ರಕಾರಗಳಿವೆ ಜನಪದ ಗೀತೆ, ಗಾದೆ, ಒಗಟು, ಲಾವಣಿ ಮಹಾಕಾವ್ಯ ಇತ್ಯಾದಿ ಪ್ರಕಾರಗಳು ಇಂದಿಗೂ ಕಂಠಸ್ಥ ಸಂಪ್ರದಾಯದ ಮುಖಾಂತರ ಉಳಿದುಕೊಂಡು ಬಂದಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹೇಳಿದರು.ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಕುಮಾರ್ ಅವರು ಅಧಿಕಾರ ಸ್ವೀಕರಿಸಿದರು. ಸಮಾರಂಭದಲ್ಲಿ ಕಲಾವಿದರಾದ ಗ್ಯಾರಂಟಿ ರಾಮಣ್ಣ, ಸಾಹಿತಿಗಳಾದ ಎನ್.ಎಲ್. ಚನ್ನೇಗೌಡ, ಲಕ್ಷ್ಮಣ ಬಿ.ಸಿ, ವಿವಿಧ ಜನಪದ ಕಲಾ ತಂಡಗಳು ಭಾಗವಹಿಸಿದ್ದವು. ಜನಪದ ಗಾಯಕರು ವಿಶೇಷವಾಗಿ ಜನಪದ ಗೀತೆ, ಸೋಬಾನೆ, ತತ್ವಪದಗಳನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು.
ಕಾರ್ಯಕ್ರಮದಲ್ಲಿ ಬಿ.ಟಿ. ಮಾನವ, ಯೋಗೇಂದ್ರ ದುದ್ದ, ಟಿ.ಎಸ್. ಲಕ್ಷ್ಮಣ್, ಪ್ರೋ. ಹೇಮಾವತಿ, ಕಾಲೇಜಿನ ಎಲ್ಲಾ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು. ಸ್ವಾಗತಿಸಿದವರು ನಾಗಲಕ್ಷ್ಮಿ ನಿರೂಪಣೆಯನ್ನು ರುಷ್ದಾ ಭಾನು, ವಂದನಾರ್ಪಣೆಯನ್ನು ಪ್ರೇಕ್ಷ ನಡೆಸಿಕೊಟ್ಟರು.