ಸಾರಾಂಶ
- ಕಚೇರಿಗಳಲ್ಲಿ ಲೋಕಾಯುಕ್ತ ಕಚೇರಿ ದೂರವಾಣಿ ಸಂಖ್ಯೆ, ವಿವರ ಪ್ರದರ್ಶನ ಕಡ್ಡಾಯ - - - ಕನ್ನಡಪ್ರಭ ವಾರ್ತೆ ಹರಿಹರ
ಸರ್ಕಾರಿ ಕಚೇರಿಗಳು ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಲು ಹಾಗೂ ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚು ಹಣ/ ಲಂಚವನ್ನು ಕೇಳುತ್ತಿದ್ದಲ್ಲಿ ಸಾರ್ವಜನಿಕರು ಯಾವುದೇ ಮುಜುಗರವಿಲ್ಲದೇ, ಲೋಕಾಯುಕ್ತಕ್ಕೆ ಮಾಹಿತಿ ನೀಡಲು ಹಿಂಜರಿಯಬಾರದು ಎಂದು ದಾವಣಗೆರೆ ಲೋಕಾಯುಕ್ತ ಪೋಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಬುಧವಾರ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳ ಸಂಬಂಧ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಲೋಕಾಯುಕ್ತ ಕಚೇರಿ ದೂರವಾಣಿ ಸಂಖ್ಯೆ ಹಾಗೂ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸುವ ನಾಮಫಲಕ ಹಾಕಬೇಕು. ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಕಚೇರಿಗೆ ಆಗಮಿಸುವ ಸಾರ್ವಜನಿಕರ, ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು ಎಂದರು.ಸರ್ಕಾರಿ ನೌಕರರು ಯಾವುದೇ, ತರಹದ ಲಂಚಕ್ಕಾಗಲಿ, ಸರ್ಕಾರ ನಿಗದಿಪಡಿಸಿರುವ ಶುಲ್ಕ ಹಣದ ಬದಲಿಗೆ ಅಧಿಕ ಹಣ ಪಡೆಯುವುದಾಗಲಿ ಮಾಡಬಾರದು. ಲಂಚ ಸ್ವೀಕರಿಸದೇ, ಭಯಮುಕ್ತರಾಗಿ ತಮ್ಮ ಕರ್ತವ್ಯ ಮಾಡಲು ಮುಂದಾದಲ್ಲಿ ಒಳಿತಾಗಲಿದೆ. ಇಲ್ಲದಿದ್ದಲ್ಲಿ ಸಾರ್ವಜನಿಕರು ಹಾಗೂ ಲೋಕಾಯುಕ್ತದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಗುರುಬಸವರಾಜ ಮಾತನಾಡಿ, ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ನಗರಸಭೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಕುರಿತು ಹೆಚ್ಚು ಅರ್ಜಿಗಳು ಬಂದಿವೆ. ಸಾರ್ವಜನಿಕರಿಗೆ ಮೂಲಸೌಲಭ್ಯಗಳನ್ನು ಒದಗಿಸುವ ಗುರುತರ ಜವ್ಹಾಬ್ದಾರಿ ಹೊತ್ತಿರುವ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗುತ್ತಿರುವುದು ಇಲ್ಲಿ ಅನಾವರಣವಾಗಿದೆ. ಆದ್ದರಿಂದ ಅಂಥವರಿಗೆ ಎಚ್ಚರಿಕೆ ನೀಡಲು ಸಾರ್ವಜನಿಕರು ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.ಕಂದಾಯ ಇಲಾಖೆಯಲ್ಲಿ ಖಾತೆ ಬದಲಾವಣೆ ಸಮಯದಲ್ಲಿ ದಿಶಾಂಕ್ ಆ್ಯಪ್ ನೋಡಿಯೇ ಖಾತೆ ಬದಲಾವಣೆ ಮಾಡಬೇಕೆಂಬ ನಿಯಮವಿದೆ. ಸಾರ್ವಜನಿಕರು ಸಲ್ಲಿಸಿದ ಅರ್ಜಿಗೆ ಹಿಂಬರಹ ನೀಡುವ ಸಮಯದಲ್ಲಿ ಅಧಿಕಾರಿಗಳು ಎಚ್ಚರ ವಹಿಸಬೇಕು. ಶಿಕ್ಷಣ ವಂಚಿತರಾದ ಜನರಿಗೆ ಶಿಕ್ಷಣ ಕಲಿಸಲು ಎಲ್ಲರೂ ಮುಂದಾಗಬೇಕು ಎಂದು ತಹಸೀಲ್ದಾರ್ ಸೂಚಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಸ್‍ಪಿ ಮದುಸೂಧನ್, ಸಿಪಿಐ ಸುರೇಶ ಸಗರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಎಸ್.ಪಿ. ಸುಮಲತಾ ಹಾಗೂ ಇತರರು ಉಪಸ್ಥಿತರಿದ್ದರು. - - -ಬಾಕ್ಸ್ * ದೇವಸ್ಥಾನದ ರಸ್ತೆ ನಿವಾಸಿ ಶಶಿಕಲಾ ತನ್ನ ಮಗ ಬಿ.ಇ. 2ನೇ ವರ್ಷದಲ್ಲಿ ಓದುತಿದ್ದಾನೆ. ಧನಸಹಾಯಕ್ಕಾಗಿ ಸ್ಥಳೀಯ ನಗರಸಭೆಗೆ ಕಳೆದ 4 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಹಣಕಾಸು ನೆರವು ನೀಡಲು ಸತಾಯಿಸುತ್ತಿದ್ದಾರೆ. ಸೂಕ್ತ ಪರಿಹಾರ ನೀಡಬೇಕೆಂದು ಲೋಕಾಯಕ್ತರಿಗೆ ಮನವಿ ಸಲ್ಲಿಸಿದರು. * ಕರುನಾಡ ಕದಂಬ ರಕ್ಷಣಾ ವೇದಿಕೆಯ ಎಚ್. ಸುಧಾಕರ, ಹಲವಾರು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಬೀದಿದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ತಾಲೂಕು ಕೇಂದ್ರ ಸ್ಥಾನದಿಂದ ಗ್ರಾಮಾಂತರ ಪ್ರದೇಶಗಳಿಗೆ ತಲುಪುವ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ದೂರಿದರು. * ನಗರ ಹಾಗೂ ಗ್ರಾಮಾಂತರ ಪ್ರದೇಶದ ಅನೇಕ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳು, ಸರ್ಕಾರದಿಂದ ಪರವಾನಗಿ ಹಾಗೂ ಅನುದಾನ ಪಡೆಯುವಾಗ ನೀಡಿರುವ ಮುಚ್ಚಳಿಕೆ ಪ್ರಕಾರ ನಡೆದುಕೊಳ್ಳುತ್ತಿಲ್ಲ, ಅಬಕಾರಿ ಇಲಾಖೆಯ ನಿರ್ಲಕ್ಷದ ಬಗ್ಗೆಯೂ ಕೆಲವರು ಮನವಿ ಸಲ್ಲಿಸಿದರು.
- - --13ಎಚ್.ಆರ್.ಆರ್03:
ಹರಿಹರದಲ್ಲಿ ದಾವಣಗೆರೆ ಲೋಕಾಯುಕ್ತ ಪೋಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಬುಧವಾರ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳ ಸಂಬಂಧ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕರಿಸಿದರು.