ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ನಾಯಕತ್ವ ಗುಣ ಮತ್ತು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡರೆ ಬದುಕಿನಲ್ಲಿ ಉನ್ನತಿ ಸಾಧಿಸಬಹುದು ಎಂದು ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಹೇಳಿದರು.

ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮತ್ತು ವಿವಿಧೋದ್ದೇಶ ಸೇವಾಸಮಿತಿ ಟ್ರಸ್ಟ್ ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣ ಮತ್ತು ಜ್ಞಾನದಿಂದ ಪ್ರಬುದ್ಧದರಾಗಬಹುದು. ಸದಭಿರುಚಿ ಕಾರ್ಯಕ್ರಮದಿಂದ ಸಮಾಜದ ಸ್ವಾಸ್ಥ್ಯ ಸಾಧ್ಯವಾಗುತ್ತದೆ. ಅಂಬೇಡ್ಕರ್ ಹೇಳಿದಂತೆ ಶಿಕ್ಷಣವೇ ಸಂಜೀವಿನಿ, ಶಿಕ್ಷಣ, ಸಂಘಟನೆ ಮುಖ್ಯವಾದುದು. ಅನ್ಯಾಯವಾದಾಗ ಹೋರಾಟ ಮಾಡಬೇಕು ಎಂದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಸರ್ಕಾರಿ ಶಾಲೆಗಳನ್ನು ಆರಂಭಿಸಿ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳಿಂದ ಬಸ್‌ನಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ಸಂಜೆ ಪುನಃ ಊರಿಗೆ ಕರೆದೊಯ್ಯಬೇಕು. ಮಧಾಹ್ನದ ಬಿಸಿಯೂಟ ಸೌಕರ್ಯ ಸಿಗುತ್ತದೆ. ಇಂಥ ವ್ಯವಸ್ಥೆಯಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು ಎಂದರು.ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಮಾನವ ಸಂಪನ್ಮೂಲವನ್ನು ಭಾರತ ಹೊಂದಿದೆ. ಇದರ ಸದ್ಬಳಕೆಯಾಗಬೇಕಾದರೆ ಶಿಕ್ಷಣ ಮುಖ್ಯ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಚನ್ನರಾಯಪಟ್ಟಣ ತಾಲೂಕು ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ೨೯ ಸರ್ಕಾರಿ ಶಾಲೆಗಳು ಶೇ. ೧೦೦ರಷ್ಟು ಫಲಿತಾಂಶ ಪಡೆದಿವೆ. ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಮಿತವಾಗಿ ಬಳಸಬೇಕು. ಮಕ್ಕಳ ಜತೆ ಪೋಷಕರು ಸಮಯ ಕಳೆಯಬೇಕು ಎಂದರು.ಎಸ್‌ಎಸ್ ಎಲ್‌ಪಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿಜೆಪಿ ಮುಖಂಡ ಸಿ. ಆರ್‌. ಚಿದಾನಂದ್, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಜಿ. ರವಿ ಮಾತನಾಡಿದರು. ತಾಲೂಕು ಪಂಚಾಯಿತಿ ಕೆಡಿಪಿ ಸದಸ್ಯ ಮದುಸೂಧನ್, ಕಲಾವಿದ ಸಿ.ಜಿ. ಸೋಮಶೇಖರ್‌, ನ್ಯಾಯಾಧೀಶ ಮಣಿಕಂಠ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್, ತಾಲೂಕು ಘಟಕದ ಅಧ್ಯಕ್ಷ ಕೆ.ವಿ. ಸತೀಶ್ ಭಾಗವಹಿಸಿದ್ದರು.