ಭಟ್ಕಳ: ಅಧಿಕಾರಿಗಳು ಜವಾಬ್ದಾರಿಯುತವಾಗಿ ಇಲಾಖೆಯ ಕಾರ್ಯನಿರ್ವಹಿಸಬೇಕು. ಕೆಲಸ ಮಾಡಲು ಮನಸ್ಸು ಇಲ್ಲದೇ ಇದ್ದಲ್ಲಿ ಬೇರೆ ಕಡೆಗೆ ವರ್ಗಾವಣೆ ಮಾಡಿಕೊಂಡು ಹೋಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ತಾಪಂ ಸಭಾಭವನದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಗೆ ಬಂದ ಜನರ ಕೆಲಸವನ್ನು ಅಧಿಕಾರಿಗಳು ಸಮರ್ಪಕವಾಗಿ ಮಾಡಿಕೊಡಬೇಕು. ಸರ್ಕಾರದಿಂದ ಬಂದ ಅನುದಾನ ವಾಪಸ್‌ ಆಗದಂತೆ ನೋಡಿಕೊಳ್ಳಬೇಕು. ಮಾರ್ಚ್‌ ಒಳಗೆ ಅನುದಾನ ಸಂಪೂರ್ಣ ಬಳಸಿಕೊಳ್ಳಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಗಮನ ಹರಿಸಬೇಕು. ಮಳೆಗಾಲದ ತಯಾರಿ ಬೇಗನೇ ಆರಂಭಿಸಿ ಎಂದು ಸೂಚಿಸಿದರು. ಈ ಸಲ ಮಳೆಗಾಲದಲ್ಲಿ ಮಳೆ ನೀರು ರಸ್ತೆ ಮೇಲೆ ನಿಂತರೆ ಸುಮ್ಮಿನಿರುವುದಿಲ್ಲ. ಶಿಕ್ಷಣ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಉಂಟಾಗದಂತೆ ಗಮನಹರಿಸಬೇಕು. ಗ್ರಾಪಂನಲ್ಲಿ ಜನಪ್ರತಿನಿಧಿಗಳ ಆಡಳಿತ ಮುಕ್ತಾಯ ಆಗಿರುವುದರಿಂದ ಆಡಳಿತಾಧಿಕಾರಿ ಆಗಿರುವ ನೀವು ಅಲ್ಲಿನ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಆಡಳಿತ ವೈದ್ಯಾಧಿಕಾರಿ ಅರುಣ್ ಅವರನ್ನು ಉದ್ದೇಶಿಸಿ, ಅಗತ್ಯದ ಔಷಧಿ ಖರೀದಿ ಮಾಡಿ, ಯಾವುದೇ ಕಾರಣಕ್ಕೂ ಹೊರಗಿನ ಔಷಧಿ ತರಲು ಚೀಟಿ ಬರೆಯದಂತೆ ವೈದ್ಯರಿಗೆ ತಿಳಿಸಬೇಕು ಎಂದು ಹೇಳಿದರು.

ಮುಂದಿನ ವರ್ಷದೊಳಗೆ ತಾಲೂಕಿನಲ್ಲಿ ಶಾಲೆಗೆ ಕಟ್ಟಡ ಇಲ್ಲ ಎಂದು ಯಾರೂ ಹೇಳಬಾರದು. ಅಂಗನವಾಡಿ, ಶಾಲೆ, ಬಿಸಿಯೂಟ ಕಟ್ಟಡಕ್ಕೆ ಅನುದಾನ ಕೊಡಲಾಗುತ್ತಿದೆ. ದೇವಸ್ಥಾನ ಜೀರ್ಣೋದ್ಧಾರಕ್ಕೆ ₹12.50 ಕೋಟಿ ನೀಡಲಾಗಿದೆ. ಕ್ಷೇತ್ರದಲ್ಲಿ ಶಾಲೆ, ದೇವಸ್ಥಾನ ಕಟ್ಟಡ ಪೂರ್ಣಗೊಳ್ಳಬೇಕು. ಬರುವ ವರ್ಷದ ಶಿಕ್ಷಕರ ದಿನಾಚರಣೆ ಒಳಗೆ ಗುರುಭವನ ನಿರ್ಮಾಣ ಆಗಬೇಕು. ಒಂದೊಮ್ಮೆ ಗುರುಭವನ ಆಗದೇ ಇದ್ದರೆ, ಗುರುಭವನದ ಸ್ಥಳದಲ್ಲೇ ಟೆಂಟ್ ಹಾಕಿ ಶಿಕ್ಷಕರ ದಿನಾಚರಣೆ ನಡೆಯಬೇಕು. ಬೇರೆ ಕಡೆ ಮಾಡಿದರೆ ಭಾಗವಹಿಸುವುದಿಲ್ಲ ಎಂದರು.

110 ಕೆವಿ ವಿದ್ಯುತ್‌ ಸ್ಟೇಶನ್‌ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿದ್ದು, 73 ವಿದ್ಯುತ್ ಟವರ್‌ನಲ್ಲಿ 64 ಟವರ್ ಪೂರ್ಣ ಆಗಿದೆ. ಕಾಯ್ಕಿಣಿ, ಬೈಲೂರಿನಲ್ಲಿ ಕೆಲವು ಸಮಸ್ಯೆಯಿಂದ ಕಾಮಗಾರಿಗೆ ವಿಳಂಬವಾಗಿದೆ. 220 ಕೆವಿ ನಿರ್ಮಾಣದ ವಿದ್ಯುತ್ ಸ್ಟೇಷನ್‌ಗೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೆಸ್ಕಾಂ ಅಭಿಯಂತರ ಮಂಜುನಾಥ ಹೇಳಿದರು.


ಕುಂದಾಪುರ, ಮಂಗಳೂರು, ಹೊನ್ನಾವರಕ್ಕೆ ಭಟ್ಕಳ ಡಿಪೋದಿಂದಲೇ ಬಸ್ ಓಡಿಸಬೇಕು. ಮಂಕಿ ಮಡಿಯಿಂದ ಮುರುಡೇಶ್ವರ-ಭಟ್ಕಳಕ್ಕೆ ಬಸ್ ಬಿಟ್ಟು, ಅಲ್ಲಿನ ಜನತೆಗೆ ಅನುಕೂಲ ಮಾಡಿಕೊಡಿ ಎಂದು ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು. ಡಿಪೋದಲ್ಲಿ 66 ಬಸ್ಸುಗಳು ಸಂಚರಿಸುತ್ತಿವೆ. 4 ಬಸ್ಸುಗಳು ಅಗತ್ಯವಿದೆ. ಶಿರಸಿ ಮಾರಿಕಾಂಬೆ ಜಾತ್ರೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಡಿಪೋ ವ್ಯವಸ್ಥಾಪಕರು ತಿಳಿಸಿದರು.

ಸಭೆಯಲ್ಲಿ ಎಸಿ ಪ್ರವೀಣ ಕರಾಡೆ, ತಹಸೀಲ್ದಾರ್‌ ನಾಗೇಂದ್ರ ಕೋಳಶೆಟ್ಟಿ, ತಾಪಂ ಇಒ ಸುನೀಲ್, ತಾಪಂ ಆಡಳಿತಾಧಿಕಾರಿ ಮುಂತಾದವರಿದ್ದರು.