ಶಿರಹಟ್ಟಿ ಪಟ್ಟಣ ಭಾವೈಕ್ಯತೆಯ ನಾಡಾಗಿದ್ದು, ಕೆಲವು ಜನರ ದುಷ್ಕೃತ್ಯದಿಂದಾಗಿ ಇತ್ತೀಚಿನ ದಿನಗಳಲ್ಲಿ ಅಪರಾಧಗಳು, ಅಹಿತಕರ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ.

ಶಿರಹಟ್ಟಿ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅವಶ್ಯಕವಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಸಿಪಿಐ ಬಿ.ವಿ. ನ್ಯಾಮಗೌಡ ತಿಳಿಸಿದರು.ಬುಧವಾರ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಆರ್‌ಎಎಫ್ ಬೆಟಾಲಿಯನ್- ೯೭ ಭದ್ರಾವತಿ ಇವರ ವತಿಯಿಂದ ಏರಿಯಾ ಡೊಮಿನನ್ಸ್ ಮಾಡಿ ಕಾನೂನು ಸುವ್ಯವಸ್ಥೆ ಮತ್ತು ಯಾವುದೇ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹಮ್ಮಿಕೊಳ್ಳಲಾಗಿದ್ದ ರೂಟ್ ಮಾರ್ಚ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಿರಹಟ್ಟಿ ಪಟ್ಟಣ ಭಾವೈಕ್ಯತೆಯ ನಾಡಾಗಿದ್ದು, ಕೆಲವು ಜನರ ದುಷ್ಕೃತ್ಯದಿಂದಾಗಿ ಇತ್ತೀಚಿನ ದಿನಗಳಲ್ಲಿ ಅಪರಾಧಗಳು, ಅಹಿತಕರ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಸ್ನೇಹ ಕಾಯ್ದುಕೊಳ್ಳಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುವುದು ಎಂದರು.ಸಾರ್ವಜನಿಕರು ಯಾವುದೇ ಅಪರಾದ ಕೃತ್ಯಗಳ ಸುಳಿವು ಗೊತ್ತಾದಲ್ಲಿ ಇಲಾಖೆಗೆ ನೇರವಾಗಿ ಮಾಹಿತಿ ನೀಡಬಹುದು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜತೆಗೆ ಅಪರಾಧ ತಡೆಗಟ್ಟಲು ಇರುವ ಮಾರ್ಗ ಮತ್ತು ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಅಪರಾಧ ಚಟುವಟಿಕೆ ತಡೆಗಟ್ಟುವುದು, ಭದ್ರತೆ ನೀಡುವುದು ಸೇರಿದಂತೆ ವಿವಿಧ ಕೆಲಸಗಳನ್ನು ಪೊಲೀಸ್ ಇಲಾಖೆ ಮಾಡುತ್ತದೆ. ಪೊಲೀಸರ ಸೇವೆಯಿಂದ ಇಡೀ ಸಮುದಾಯ ನೆಮ್ಮದಿಯ ಬದುಕು ಸಾಗಿಸಲು ಕಾರಣವಾಗಿದೆ. ಆಂತರಿಕ ಭದ್ರತಾ ಕಾರ್ಯದಲ್ಲಿ ಜನರು ಪೊಲೀಸರೊಂದಿಗೆ ಕೈಜೋಡಿಸಿ ಸಹಕಾರ ನೀಡಿದರೆ ಎದುರಾಗಬಹುದಾದ ದೊಡ್ಡ ಅನಾಹುತ ತಡೆಯಲು ಸಾಧ್ಯ ಎಂದರು.ತಹಸೀಲ್ದಾರ್ ಕೆ. ರಾಘವೇಂದ್ರ ರಾವ್‌ ಮಾತನಾಡಿ, ಸಮಾಜದಲ್ಲಿ ಅಪರಾಧಗಳನ್ನು ತಡಗಟ್ಟುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅಪರಾಧ ತಡೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯುವಕರು ನಾಯಕತ್ವ ವಹಿಸಬೇಕು. ಯುವಕರು ಅಪರಾಧ ತಡೆಯನ್ನೂ ಒಳಗೊಂಡಂತೆ ಸಮಾಜದ ಒಟ್ಟಾರೆ ಧನಾತ್ಮಕ ಬದಲಾವಣೆಯ ರಾಯಭಾರಿಗಳಗಬೇಕು ಎಂದರು.ಜನರಲ್ಲಿ ಪೊಲೀಸರೆಂದರೆ ಸಾಮಾನ್ಯವಾಗಿ ಭಯ, ಹಿಂಜರಿಕೆ ಸಹಜವಾಗಿರುತ್ತದೆ. ಭಯ ಬಿಟ್ಟು ಧೈರ್ಯವಾಗಿ ಪೊಲೀಸರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಬೇಕು. ಅವರಿಗೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಸಹಕಾರ ನೀಡಬೇಕು. ಕಾನೂನನ್ನು ಯಾರು ಗೌರವಿಸುತ್ತಾರೋ ಅವರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಕಾನೂನನ್ನು ಇನ್ನೊಬ್ಬರ ಒತ್ತಾಯಕ್ಕಾಗಲಿ, ಪೊಲೀಸರ ಭಯಕ್ಕಾಗಿ ಪಾಲಿಸುವುದನ್ನು ಬಿಟ್ಟು ತಮ್ಮ ಜೀವದ ರಕ್ಷಣೆಗಾಗಿ ಕಾನೂನು ಪಾಲನೆ ಮಾಡಬೇಕು. ಎಲ್ಲರ ರಕ್ಷಣೆಗಾಗಿಯೇ ಕಾನೂನುಗಳಿದ್ದು, ಸುರಕ್ಷತೆಗಾಗಿ ಕಾನೂನು ಪಾಲನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.ಆರ್‌ಎಎಫ್ ಅಸಿಸ್ಟಂಟ್ ಕಮಾಂಡೆಂಟ್ ಅನಿಲಕುಮಾರ ಜಾಧವ, ಪಿಎಸ್‌ಐ ಐ.ಎಚ್. ರಿತ್ತಿ, ರವಿಂದ್ರ ಹಾಗೂ ಆರ್‌ಎಎಫ್ ಸಿಬ್ಬಂದಿ, ಶಿರಹಟ್ಟಿ ಪೊಲೀಸ್ ಠಾಣಾ ಸಿಬ್ಬಂದಿ ಇದ್ದರು.