ಕೊಪ್ಪಳ: ಪರಮಾತ್ಮನ ದರ್ಶನ ಮಾಡಿಕೊಳ್ಳುವ ಮೊದಲು ನಾವು ಮನಃಶುದ್ಧಿ ಮಾಡಿಕೊಳ್ಳಬೇಕು. ಅಹಂಕಾರ ತೊರೆದರೇ ಪರಮಾತ್ಮನ ಅನುಭೂತಿಯಾಗುತ್ತದೆ ಎಂದು ಬೀದರನ ಲಿಂಗಾಯತ ಮಹಾಮಠದ ಶ್ರೀಪ್ರಭುದೇವ ಶ್ರೀಗಳು ಹೇಳಿದರು.
ವಿಶ್ವಗುರು ಬಸವೇಶ್ವರ ಟ್ರಸ್ಟ್, ಪ್ರವಚನ ಸೇವಾ ಸಮಿತಿ ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಬಸವ ಭಾಷೆ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿದರು.ಕಬ್ಬಿನ ಮೇಲಿಟ್ಟಿರುವ ಜೇನು ಮತ್ತು ಕಬ್ಬಿನ ಸಿಹಿ ಎರಡು ಪರಸ್ಪರ ಒಂದಾಗಲು ಸಾಧ್ಯವಿಲ್ಲ.ಅದರ ಮಧ್ಯೆ ಇರುವ ಸಿಬರು ಅದನ್ನು ಬೇರ್ಪಡಿಸಿರುತ್ತದೆ. ಆ ಸಿಬರು ತೆಗೆದರೆ ಅವರೆಡು ಒಂದಾಗಲು ಸಾಧ್ಯವಾಗುತ್ತದೆ. ಹಾಗೆ,ನಾವು ಮತ್ತು ಪರಮಾತ್ಮನ ನಡುವೆ ಇರುವ ಅಹಂಕಾರ ಎನ್ನುವ ಗೋಡೆ ತೆಗೆದರೇ ನಮಗೆ ಪರಮಾತ್ಮನ ದರ್ಶನವಾಗುತ್ತದೆ.ನಾವು ಬಸವ ತತ್ವ ಪಾಲಿಸುವ ಮನೋಧರ್ಮ ನಮಲ್ಲಿ ಬೆಳೆಯುತ್ತದೆ ಎಂದರು.
ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳುವ ಮುನ್ನ ಸಿದ್ಧತೆ ಮಾಡಲಾಗುತ್ತದೆ.ಮೈದಾನ ಸ್ವಚ್ಛಗೊಳಿಸಲಾಗುತ್ತದೆ.ಅದರಂತೆ ನಾವು ಬಸವ ತತ್ವ ನಮ್ಮ ಮನದಲ್ಲಿ ಬೇರೂರುವಂತೆ ಮಾಡಲು ಮೊದಲು ಮನ ಶುದ್ಧಿ ಮಾಡಿಕೊಳ್ಳಬೇಕು ಎಂದರು.ನಮ್ಮ ಗುರುಗಳು ಇಲ್ಲಿ ತಿಂಗಳ ಕಾಲ ಪ್ರವಚನ ಮಾಡಿದ್ದಾರೆ.ಅದೇ ಜಾಗದಲ್ಲಿ ಈಗ ನನಗೆ ಪ್ರವಚನ ನೀಡುವ ಭಾಗ್ಯ ಬಂದಿರುವುದು ನಿಜಕ್ಕೂ ಅಭಿಮಾನದ ಸಂಗತಿ ಎಂದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಬಸವ ಪ್ರವಚನ ಕೊಪ್ಪಳದಲ್ಲಿ ಕಳೆದ 11ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿರುವುದು ಶ್ಲಾಘನೀಯ. ಈ ಮೂಲಕ ಬಸವ ವಚನ ಜನರ ಮನಕ್ಕೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಬಸವಣ್ಣನ ವಚನಗಳು ವಿಶ್ವದಾದ್ಯಂತ ಪಸರಿಸಿವೆ.ನಾನು ನ್ಯೂಯಾರ್ಕ್ ನಲ್ಲಿ ಹೋದಾಗ ಅಲ್ಲಿಯೂ ಬಸವಣ್ಣ ಫೋಟೋ ಹಾಕಿ, ಅದರಡಿಯಲ್ಲಿ ವಚನ ಹಾಕಿದ್ದನ್ನು ನೋಡಿ ಖುಷಿಯಾಯಿತು.ಕೊಪ್ಪಳದಲ್ಲಿ ಕದಳಿ ವೇದಿಕೆಯಿಂದ ಭವನ ನಿರ್ಮಾಣ ಮಾಡುತ್ತಿದ್ದು, ಅತ್ಯುತ್ತಮವಾಗಿದೆ, ಶೀಘ್ರದಲ್ಲಿಯೇ ಅದರ ಉದ್ಘಾಟನೆ ಮಾಡಲಾಗುವುದು ಎಂದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ ಗಡಾದ, ಹಿರಿಯ ಸಾಹಿತಿ ಅಲ್ಲಮಪ್ರಭ ಬೆಟ್ಟದೂರು, ಚಂದ್ರಶೇಖರ ಕವಲೂರು, ಗುರುರಾಜ ಹಲಿಗೇರಿ, ಎ.ವಿ. ಕಣವಿ, ಸಾವಿತ್ರಿ ಮುಜುಂದಾರ, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ ಸೇರಿದಂತೆ ಮೊದಲಾದವರು ಇದ್ದರು.