ಕನ್ನಡಪ್ರಭ ವಾರ್ತೆ ಮಡಿಕೇರಿ

ಅಹಂ ಮತ್ತು ತಾನೇ ಶ್ರೇಷ್ಠ ಎಂಬ ಮನೋಭಾವದಿಂದ ಹೊರ ಬಂದರೆ ಮಾತ್ರ ಸುಖ ಸಂಸಾರ ಸಾಧ್ಯ. ಇದನ್ನು ಗೌಡ ಸಮುದಾಯದ ಇಂದಿನ ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು. ಪೋಷಕರು ಕೂಡ ಈ ಕುರಿತು ಮಕ್ಕಳಿಗೆ ತಿಳಿ ಹೇಳಬೇಕು ಎಂದು ಮೈಸೂರು ಗೌಡ ಸಮಾಜದ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಕೊಂಬಾರನ ಬಸಪ್ಪ ಕಿವಿಮಾತು ಹೇಳಿದರು.ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ 10 ಕುಟುಂಬ 18 ಗೋತ್ರದ ಗೌಡ ಸಮುದಾಯದ ವಧು ವರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಾಂಪತ್ಯ ಎಂಬುದು ಪತಿ-ಪತ್ನಿ ನಡುವಿನ ಹೊಂದಾಣಿಕೆಯಾಗಿದೆ. ಹಿಂದಿನ ಕಾಲಘಟ್ಟದಲ್ಲಿ ಪೋಷಕರು ಗುರುತಿಸಿದ ವಧು ವರನ ನಡುವೆ ವಿವಾಹ ನಡೆಯುತ್ತಿತ್ತು. ಇಂತಹ ಮದುವೆಗಳಿಂದ ದಾಂಪತ್ಯ ಜೀವನವೂ ಸುಖಕರವಾಗಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಯುವ ಸಮುದಾಯದ ಮೇಲೆ ಗಾಢ ಪರಿಣಾಮ ಬೀರಿದ್ದು, ಸಂಸಾರದಲ್ಲಿ ಹೊಂದಾಣಿಕೆಯ ಕೊರತೆ ಎದುರಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸಾರ, ದಾಂಪತ್ಯ ಜೀವನದ ಬಗ್ಗೆ ಪೋಷಕರು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ನಮ್ಮ ಸಂಸ್ಕೃತಿ, ಆಚಾರ ವಿಚಾರ, ಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು. ಕೊಡಗು, ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ನಿವೃತ್ತ ಪೌರಾಯುಕ್ತೆ ಮೂಟೇರ ಪುಷ್ಪಾವತಿ ಅವರು ಮಾತನಾಡಿ, ಇಂದು ಮಹಾ ನಗರಗಳಲ್ಲಿ ಕೆಲಸದಲ್ಲಿರುವ ವಧು-ವರನ ಹುಡುಕಿ ಮದುವೆ ಸಂಬಂಧ ಬೆಸೆಯುವ ಮನಃಸ್ಥಿತಿ ಕಂಡುಬರುತ್ತಿರುವುದು ದೊಡ್ಡ ದುರಂತವಾಗಿದೆ. ಹುಟ್ಟಿದ ಊರಲ್ಲಿ ಕೃಷಿ, ತೋಟಗಳನ್ನು ಮಾಡುತ್ತಿರುವ ಯುವ ಸಮುದಾಯಕ್ಕೆ ಹೆಣ್ಣು ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕೊಡಗು ಗೌಡ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ನಿವೃತ್ತ ಎಸ್.ಪಿ. ಚೊಕ್ಕಾಡಿರ ಅಪ್ಪಯ್ಯ ಮಾತನಾಡಿ, 2002ರಲ್ಲಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ನಿರಂತರವಾಗಿ ಗೌಡ ಸಮುದಾಯದ ವಧು ವರರ ಸಮಾವೇಶ ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷವೂ ಸಮಾವೇಶದಲ್ಲಿ ನೋಂದಣಿ ಸಂಖ್ಯೆ ಏರಿಕೆ ಕಾಣುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವಧು-ವರರ ಸಮಾವೇಶದಲ್ಲಿ ಯುವಕ ಯುವತಿಯರೂ ಪಾಲ್ಗೊಳ್ಳಬೇಕು. ಇದರಿಂದ ಪರಸ್ಪರ ಪರಿಚಯವಾಗಿ ವಿವಾಹ ಸಂಬಂಧಗಳು ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮಾಜ ಬದಲಾಗುತ್ತಿದ್ದು, ವರದಕ್ಷಿಣೆ ಪಿಡುಗು ಕೂಡ ದೂರವಾಗಬೇಕು. ಇಂತಹ ಸಮಾವೇಶಗಳನ್ನು ಸಮುದಾಯದ ಬಂಧುಗಳು ಸದುಪಯೋಗಪಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಕೊಂಬಾರನ ಬಸಪ್ಪ ಹಾಗೂ ನಿವೃತ್ತ ಪೌರಾಯುಕ್ತೆ ಮೂಟೇರ ಪುಷ್ಪಾವತಿ ಅವರನ್ನು ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಶೆಟ್ಟಿಜನ ಗಣಪತಿ, ಕಾರ್ಯದರ್ಶಿ ಕುಂಜಿಲನ ರತ್ನ ಕುಮಾರಿ, ಖಜಾಂಚಿ ಕುಯ್ಯಮುಡಿ ಅಶ್ವಿನ್ ಕುಮಾರ್, ಸಹ ಕಾರ್ಯದರ್ಶಿ ಕಟ್ರತನ ಲಲಿತಾ ಅಯ್ಯಣ್ಣ, ನಿರ್ದೇಶಕರಾದ ಪುದಿಯನೆರವನ ರೇವತಿ ರಮೇಶ್, ಸೂದನ ರತ್ನಾವತಿ, ಕರ್ಣಯ್ಯನ ಬಸಪ್ಪ, ಕೆದಂಬಾಡಿ ಮುಕುಂದ, ತಳೂರು ಕಾಳಪ್ಪ, ಸೂರ್ತಲೆ ರಾಮಚಂದ್ರ, ಪೂಜಾರಿರ ಜಗದೀಶ್, ಕೊಡಗು ಗೌಡ ಸಮಾಜ ಅಧ್ಯಕ್ಷ ದಂಬೆಕೋಡಿ ಆನಂದ, ಕೊಡಗು ಗೌಡ ವಿದ್ಯಾ ಸಂಘದ ಅಂಬೇಕಲ್ ನವೀನ್, ಬೆಂಗಳೂರು ಕೊಡಗು ಗೌಡ ಸಮಾಜ ಅಧ್ಯಕ್ಷ ಅಯ್ಯೇಟಿ ಮೋಹನ್ ಕುಮಾರ್, ಪ್ರಮುಖರಾದ ಕೋರನ ವಿಶ್ವನಾಥ್, ಕುದುಪಜೆ ಬೋಜಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.