- ಬಾಪೂಜಿ ಸಭಾಂಗಣದಲ್ಲಿ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ 61ನೇ ಪದವಿ ಪ್ರದಾನ ಸಮಾರಂಭ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರತಿಯೊಬ್ಬರ ಜೀವನದಲ್ಲಿ ಸ್ಪಷ್ಟವಾದ ಗುರಿ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ವೈದ್ಯರ ಜೀವನದಲ್ಲಿ ಪ್ರತಿದಿನವೂ ಕಲಿಕೆಯ ದಿನವಾಗಿದ್ದು, ತಮ್ಮನ್ನು ಬೆಳೆಸಿದ ಪೋಷಕರು ಹಾಗೂ ಶಿಕ್ಷಣ ನೀಡಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಉಪ ಕುಲಪತಿ ಡಾ. ಎಚ್.ಬಸವನಗೌಡ ಹೇಳಿದರು.

ನಗರದ ಬಾಪೂಜಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ 61ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಮ್ಮಲ್ಲಿರುವ ದೌರ್ಬಲ್ಯಗಳು ಸಾಧನೆಗೆ ಅಡ್ಡಿಯಾಗಬಾರದು. ಅನೇಕ ಸಾಧಕರು ತಮ್ಮ ಜೀವನದಲ್ಲಿ ಎದುರಾದ ವೈಫಲ್ಯಗಳನ್ನು ಮೀರಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.

ವೈದ್ಯ ವೃತ್ತಿಯು ಅತ್ಯಂತ ಜವಾಬ್ದಾರಿಯುತವಾಗಿದೆ. ಯೋಗ, ಧ್ಯಾನ ಹಾಗೂ ಏಕಾಗ್ರತೆ ಮೂಲಕ ಒತ್ತಡವನ್ನು ನಿಯಂತ್ರಿಸಿಕೊಳ್ಳಬೇಕು. ಅಗತ್ಯವಿದ್ದಷ್ಟೇ ಮೊಬೈಲ್ ಬಳಕೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಶುಕ್ಲಾ ಎಸ್. ಶೆಟ್ಟಿ ಮಾತನಾಡಿ, ಪದವಿ ಪ್ರದಾನವು ಶಿಕ್ಷಣದ ಅಂತ್ಯವಲ್ಲ, ಹೊಸ ಜೀವನದ ಆರಂಭವಾಗಿದೆ. ವೈದ್ಯರು ರೋಗಿಗಳೊಂದಿಗೆ ಪ್ರೀತಿ, ಕರುಣೆ ಮತ್ತು ಸಹಾನುಭೂತಿಯಿಂದ ವರ್ತಿಸಬೇಕು. ರೋಗಿಗಳು ಮತ್ತು ಅವರ ಕುಟುಂಬಸ್ಥರು ವೈದ್ಯರ ಮೇಲೆ ಅಪಾರ ನಂಬಿಕೆ ಇಟ್ಟಿರುತ್ತಾರೆ. ಆದ್ದರಿಂದ ವೈದ್ಯಕೀಯ ಸೇವೆಯನ್ನು ಮಾನವೀಯ ಮೌಲ್ಯಗಳೊಂದಿಗೆ ನಿರ್ವಹಿಸಬೇಕು ಎಂದು ತಿಳಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರು ಹಾಗೂ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಫಾರ್ಮಕಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ಎಲ್.ಡಿ. ಶ್ರೀನಿವಾಸ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಹಿಪೊಕ್ರೆಟಿಕ್ ಪ್ರಮಾಣವಚನ ಬೋಧಿಸಿದರು.

ಐಎಬಿ ಅಧ್ಯಕ್ಷೆ ಡಾ.ಮಹಾಲಕ್ಷ್ಮೀ ಕೆಂಚೆ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಡಾ.ವಿವಿಯನ್ ಸ್ಯಾಮುಯಲ್, ವೈದ್ಯಕೀಯ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ವರದೇಂದ್ರ ಕುಲಕರ್ಣಿ, ಡಾ.ಸುದೀಪ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಗಣ್ಯರು ಭಾಗವಹಿಸಿದ್ದರು.

- - -

-1ಕೆಡಿವಿಜಿ32, 33:

ದಾವಣಗೆರೆಯಲ್ಲಿ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ 61ನೇ ಪದವಿ ಪ್ರದಾನ ಸಮಾರಂಭ ನಡೆಯಿತು.