ಸಾರಾಂಶ
ರಾಜೇಂದ್ರ ಶ್ರಿಗಳ ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಮೋನಾ ರೋತ್ ಹೇಳಿಕೆ । ಜಿಲ್ಲೆಯಲ್ಲಿಯೇ ಕೈಗಾರಿಕಾ ಘಟಕಗಳು ನಿರ್ಮಾಣವಾಗಿದ್ದು ಸಂತೋಷ
ಕನ್ನಡಪ್ರಭ ವಾರ್ತೆ ಚಾಮರಾಜನಗರವಿದ್ಯಾರ್ಥಿಗಳು ಮುಂದೆ ಗುರಿಯೊಂದಿಗೆ ಹಿಂದೆ ಗುರುವಿನೊಂದಿಗೆ ಸಾಧಿಸುವ ಛಲವಿದ್ದರೆ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ತಿಳಿಸಿದರು.
ನಗರ ಸಮೀಪದ ಮರಿಯಾಲ ಜೆಎಸ್‌ಎಸ್ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಜೆಎಸ್‌ಎಸ್ ಗ್ರಾಮೀಣ ಇನ್ಕ್ಯುಬೇಶನ್ ಮತ್ತು ಕೌಶಲ್ಯ ಅಭಿವೃದ್ದಿ ಕೇಂದ್ರ ಸಹಯೋಗದಲ್ಲಿ ನಡೆದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಶತೋತ್ತರ ದಶಮಾನೋತ್ಸವ (೧೧೦ನೇ ಜಯಂತಿ) ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಐಟಿಐ ತರಬೇತಿ ಪಡೆಯುತ್ತಿರುವ ನಿಮಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ನಮ್ಮ ಜಿಲ್ಲೆಯಲ್ಲಿಯೇ ಕೈಗಾರಿಕಾ ಘಟಕಗಳು ನಿರ್ಮಾಣವಾಗಿದೆ. ಈ ಹಿಂದೆ ಬೇರೆ ಜಿಲ್ಲೆಗಳಿಗೆ ಉದ್ಯೋಗ ಅರಸಿ ಹೋಗಬೇಕಾಗಿತ್ತು. ಅಲ್ಲದೇ ಯುವ ಉದ್ಯಮಿಗಳು ಸರ್ಕಾರ ಮತ್ತು ಜಿಲ್ಲಾಡಳಿತ ನೀಡುವ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗವನ್ನು ಹೊಂದಬೇಕು. ಕಂಪನಿಗಳನ್ನು ಮುನ್ನಡೆಸುವ ಸಾಮರ್ಥ್ಯ ನಿಮ್ಮಲ್ಲಿದೆ. ಸ್ವಂತ ಉದ್ಯೋಗವನ್ನು ಹೊಂದಿ ಚಾಮರಾಜನಗರವನ್ನು ಅಭಿವೃದ್ದಿ ಹೊಂದುತ್ತಿರುವ ಜಿಲ್ಲೆಯನ್ನಾಗಿಸಲು ನಿಮ್ಮೆಲ್ಲರ ಶ್ರಮ ಇದೆ ಎಂದರು.
ಮೈಸೂರು ಭಾಗದಲ್ಲಿ ಸುತ್ತೂರು ಶ್ರೀಕ್ಷೇತ್ರ ಹಾಗೂ ಮಹಾ ವಿದ್ಯಾಪೀಠ ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ರಾಜೇಂದ್ರಶ್ರೀಗಳು ವಿದ್ಯಾ ಸಂಸ್ಥೆಯನ್ನು ಬಹಳ ಕಷ್ಟಪಟ್ಟು ಮತ್ತು ದೂರದೃಷ್ಟಿತ್ವವನ್ನು ಹೊಂದಿ ಬಡವರು ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ದೊರೆಯಬೇಕೆಂಬ ಆಶಯವನ್ನು ಹೊಂದಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿರುವ ಮಕ್ಕಳಿಗೆ ಅನುಕೂಲವಾಗುವಂತೆ ಕುಗ್ರಾಮಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣ ಒತ್ತು ನೀಡಿದ್ದರು. ಅದರಲ್ಲಿಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ರಾಜೇಂದ್ರಸ್ವಾಮಿಗಳಲ್ಲಿ ಶಿಕ್ಷಣದ ಬಗ್ಗೆ ಇದ್ದ ಕಾಳಜಿಯನ್ನು ನಾವೆಲ್ಲರು ಸ್ಮರಿಸಿಕೊಳ್ಳೋಣ. ಇಂಥ ಸಾಧನೆಯೊಂದಿಗೆ ಜೆಎಸ್‌ಎಸ್ ಸಂಸ್ಥೆಯ ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು. ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ ಮಾತನಾಡಿ, ಪೂಜ್ಯ ಶ್ರೀಗಳು ಶಿಕ್ಷಣದ ಮೂಲಕ ಅಂಧಕಾರವನ್ನು ಹೋಗಲಾಡಿಸಿದರು. ರಾಜೇಂದ್ರಶ್ರೀಗಳ ಸಂಕಲ್ಪ ಹಾಗೂ ಅವರ ದೂರದೃಷ್ಟಿತ್ವ ಆಡಳಿತದ ಫಲವಾಗಿ ಜೆಎಸ್‌ಎಸ್ ಸಂಸ್ಥೆಯ ಎಲ್ಲಾ ವಿಭಾಗದಲ್ಲಿ ಪ್ರಗತಿಯನ್ನು ಸಾಧಿಸಿದೆ. ಲಕ್ಷಾಂತರ ಮಂದಿಗೆ ಶಿಕ್ಷಣ, ವಸತಿ ಹಾಗೂ ಉದ್ಯೋಗವನ್ನು ನೀಡುತ್ತಿದೆ. ಅವರ ಬಾಳಿಗೆ ಬೆಳಕಾಗುತ್ತಿದೆ ಎಂದರು. ಇಂಥ ಸಂಸ್ಥೆಯನ್ನು ಮುನ್ನಡೆಸುತ್ತಿರುವ ನಮ್ಮ ಶ್ರೀ ಶಿವರಾತ್ರಿದೇಶಿಕೇಂದ್ರಸ್ವಾಮಿಗಳು ಸಹ ಅವರ ಹಾದಿಯಲ್ಲಿ ಸಾಗುತ್ತದೆ. ಮತ್ತಷ್ಟು ಎತ್ತರಕ್ಕೆ ಕೊಂಡ್ಯೊಯುತ್ತಿದ್ದಾರೆ ಎಂದರು.ವಿದ್ಯಾರ್ಥಿಗಳಾದ ನೀವುಗಳು ತಂದೆ,ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ, ದೇಶಕ್ಕೆ ಒಳ್ಳೆಯ ಪ್ರಜೆಯಾಗಿ, ಸುಸ್ಥಿರವಾದ ಬದುಕನ್ನು ಸಾರ್ಥಕ ಗೊಳಿಸಬೇಕು. ಕೆಟ್ಟ ಚಟಗಳಿಗೆ ದಾಸರಾಗದೇ, ದುರ್ನಡತೆಯನ್ನು ಬಿಟ್ಟು, ಉತ್ತಮ ಜೀವನ ಜೀವನವನ್ನು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕೆ.ಸಿ. ಬಸವಣ್ಣ, ರಾಜೇಂದ್ರಶ್ರೀಗಳಿಗೆ ನುಡಿಮನ ಸಲ್ಲಿಸಿದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಚ್.ಪಿ. ಶ್ರೀಕಂಠಾರಾಧ್ಯ ಮಾತನಾಡಿದರು.ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮುಡ್ಲುಪುರ ನಂದೀಶ್, ಕಾಲೇಜಿನ ಪ್ರಾಚಾರ್ಯ ವೈ.ಎಂ. ರವಿಚಂದ್ರ, ಜೆಎಸ್‌ಎಸ್ ಆರ್‌ಐಎಸ್‌ಡಿಸಿ ಸಂಯೋಜಕ ಬಿ.ಎಂ. ಚಂದ್ರಶೇಖರ, ಪ್ರಭಾರ ಅಧೀಕ್ಷಕ ಎನ್. ಮಹದೇವಸ್ವಾಮಿ, ಎಂ.ಪಿ. ಸದಾಶಿವಮೂರ್ತಿ, ಕುಸುಮರಾಣಿ, ಆರ್. ಮಂಜುನಾಥ್, ಜಿ.ಎಂ. ಬಸವರಾಜು, ಸೌಮ್ಯ, ಜಮುನಾರಾಣಿ, ಸಿದ್ದೇಶಕುಮಾರ್ ಹಾಗೂ ವಿದ್ಯಾರ್ಥಿಗಳು, ಪೋಷಕರು ಇದ್ದರು.
ಪೋಟೋಚಾಮರಾಜನಗರದ ನಗರ ಸಮೀಪದ ಮರಿಯಾಲ ಜೆಎಸ್‌ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು.