ಬಿಜೆಪಿ ನಾಯಕರ ಭ್ರಷ್ಟಾಚಾರದ ದಾಖಲೆಗಳನ್ನು ನಾವು ನೀಡಲು ಸಿದ್ಧರಿದ್ದೇವೆ. ಸಚಿವ ತಿಮ್ಮಾಪುರ ಹಗರಣದ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ, ರಾಜೀನಾಮೆಗೆ ಸಚಿವರು ಬದ್ಧರಾಗಿದ್ದಾರೆ. ಬಾಗಲಕೋಟೆಯಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧ್ಯಕ್ಷ ರಾಜು ಮನ್ನಿಕೇರಿ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಬಿಜೆಪಿ ನಾಯಕರ ಭ್ರಷ್ಟಾಚಾರದ ದಾಖಲೆಗಳನ್ನು ನಾವು ನೀಡಲು ಸಿದ್ಧರಿದ್ದೇವೆ. ಸಚಿವ ತಿಮ್ಮಾಪುರ ಹಗರಣದ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ, ರಾಜೀನಾಮೆಗೆ ಸಚಿವರು ಬದ್ಧರಾಗಿದ್ದಾರೆ. ಬಾಗಲಕೋಟೆಯಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧ್ಯಕ್ಷ ರಾಜು ಮನ್ನಿಕೇರಿ ಸವಾಲು ಹಾಕಿದರು.

ಪಟ್ಟಣದ ಜಿ.ಎಲ್.ಬಿ.ಸಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಕಾಲ ರಾಜಕೀಯ ರಂಗದಲ್ಲಿದ್ದವರು. ಯಾವುದೇ ಕಪ್ಪುಚುಕ್ಕೆ ಇಲ್ಲದ ರಾಜಕಾರಣಿ. ಇವರ ಚರಿತ್ರೆಗೆ ಮಸಿ ಬಳಿಯುವ ಕೆಲಸವನ್ನು ವಿರೋಧ ಪಕ್ಷದ ಭಾಜಪ ಮುಖಂಡರು ಮಾಡುತ್ತಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧ್ಯಕ್ಷ ರಾಜು ಮನ್ನಿಕೇರಿ ಹೇಳಿದರು.

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ₹೨.೫ ಸಾವಿರ ಕೋಟಿ ಬೇನಾಮಿ ಹಣ ಪಡೆದಿದ್ದಾರೆಂಬ ವಿರೋಧ ಪಕ್ಷದ ಆರೋಪಕ್ಕೆ ತಿರುಗೇಟು ನೀಡಿದ ಅವರು, ತಾವೇ ಸ್ವತಃ ಭ್ರಷ್ಟಾಚಾರದ ಮನೆಯಲ್ಲಿ ಹುಟ್ಟಿದ್ದು, ತಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ, ಆಗಿನ ಬಿಜೆಪಿ ಸರ್ಕಾರದ ೧೫ ಜನ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ ಇತಿಹಾಸ ವಿರೋಧ ಪಕ್ಷದ ನಾಯಕ ವಿಜಯೇಂದ್ರ ಗಮನಕ್ಕಿದ್ದರೂ ಮರೆಮಾಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಮತ್ತು ಸಮುದಾಯದ ಮುಖಂಡರಾದ ಅರ್ಜುನ್ ದೊಡಮನಿ, ವಿಠ್ಠಲ ಹೊಸಮನಿ, ಪರಶುರಾಮ ಮೇತ್ರಿ, ಮುತ್ತಪ್ಪ ಗಿರೆವ್ವಗೋಳ ಮಾತನಾಡಿ, ಬಡತನದಿಂದ ಬಂದು ಸಚಿವರಾಗಿರುವ ತಿಮ್ಮಾಪುರ ಅವರನ್ನು ಹೇಗಾದರೂ ಮಾಡಿ ಕೆಳಗಿಳಿಸಬೇಕು ಎಂಬ ಹುನ್ನಾರ ನಡೆದಿದ್ದು, ಇದಕ್ಕೆ ನಾವು ಆಸ್ಪದ ಕೊಡಲ್ಲ. ನಿಮ್ಮ ಬಳಿ ದಾಖಲೆಗಳಿದ್ದರೆ ತೆಗೆದುಕೊಂಡು ಬನ್ನಿ ಚರ್ಚಿಸೋಣ. ವಿನಾಕಾರಣ ನಮ್ಮ ಸಮುದಾಯದ ಸಚಿವರ ಮೇಲೆ ಸುಳ್ಳು ಆಪಾದನೆ ಮಾಡುತ್ತಾ ಕುಳಿತರೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಬಿಜೆಪಿ ಕಚೇರಿಗಳಿಗೆ ಘೇರಾವ್ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಪ್ರಭು ರುದ್ರಾಕ್ಷಿ, ಲಕ್ಷ್ಮಣ ಮಾಂಗ, ಬಸವರಾಜ ಮಾವಿನಹಿಂಡಿ, ಶೇಖರ ಉತ್ತೂರ, ಲಗಮನ್ನ ಪೂಜೇರಿ, ಶ್ರೀಶೈಲ ದೊಡಮನಿ, ರಮೇಶ ಮಾಂಗ, ಶಶಿಕಾಂತ ಮುಖ್ಯೆನ್ನವರ, ಲಕ್ಷ್ಮಣ ದೊಡಮನಿ, ಸಂದೀಪ ದೊಡಮನಿ, ಮಹಾಲಿಂಗಪ್ಪ ಹಲಸಪ್ಪಗೋಳ, ಮಹಾಲಿಂಗಪ್ಪ ಪೂಜೇರಿ ಇದ್ದರು.